ಮಂಡ್ಯ: ನಾಡಿನ ಅನೇಕ ಕಡೆಗಳಿಂದ ಬರಲಿರುವ ಸಾಹಿತ್ಯಾಸಕ್ತರು ನಾಳೆಯಿಂದ ಮೂರು ದಿನ ಮಂಡ್ಯದಲ್ಲಿ (Mandya news) ತಂಗಲಿದ್ದಾರೆ. ಡಿ.20, 21, 22ರಂದು ನಡೆಯುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ಕಣ್ಮನಗಳಿಗೆ, ಬೌದ್ಧಿಕವಾಗಿಯೂ ಹಬ್ಬ ಉಂಟುಮಾಡಲಿದೆ. ಇದರ ಜೊತೆಗೆ, ಅಲ್ಲಿಯೇ ಆಸುಪಾಸಿನಲ್ಲಿರುವ ಪ್ರೇಕ್ಷಣೀಯ ತಾಣಗಳಿಗೂ (Mandya tourist places) ಇದೇ ಅವಧಿಯಲ್ಲಿ ನೀವು ಭೇಟಿ ಕೊಡಬಹುದು. ಅಂತಹ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದ ಶ್ರೀ ರಂಗನಾಥನ ದೇವಾಲಯವನ್ನು ಕ್ರಿ.ಶ 984ರಲ್ಲಿ ತಿರುಮಲಯ್ಯ ಎಂಬ ಗಂಗರ ಸರದಾರನು ನಿರ್ಮಿಸಿದನು ಎಂದು ಶಾಸನವು ತಿಳಿಸುತ್ತದೆ. ಇದು ಹೊಯ್ಸಳ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇಲ್ಲಿನ ಮುಖ್ಯ ದೇವತೆಯು ಭಗವಂತನಾದ ವಿಷ್ಣುವಿನ (ರಂಗನಾಥನ) ರೂಪದಲ್ಲಿ ಆದಿಶೇಷನ (ಸಾವಿರ ತಲೆಯ ದೈವಿಕ ಸರ್ಪವು ಹಾವುಗಳ ರಾಜ) ಸುರುಳಿಗಳ ಮೇಲೆ ಮಲಗಿದ ರೀತಿಯಲ್ಲಿದೆ. ಇಲ್ಲಿ ಭಗವಾನ್ ವಿಷ್ಣುವು ತನ್ನ ನಾಭಿಯಲ್ಲಿ ದೇವಿ, ಶ್ರೀದೇವಿ, ಭೂದೇವಿ ಮತ್ತು ಬ್ರಹ್ಮ ದೇವರಿಂದ ಸುತ್ತುವರಿದಿದ್ದಾನೆ. ಅವನ ಪಾದದಲ್ಲಿ ಕಾವೇರಿ ಎಂದು ಗುರುತಿಸಲಾದ ಲಕ್ಷ್ಮಿ ದೇವಿಯ ಕುಳಿತಿರುವ ಚಿತ್ರವಿದೆ. ಸಂಕೀರ್ಣ ಸಮರ್ಪಿತ ನರಸಿಂಹ, ಗೋಪಾಲಕೃಷ್ಣ, ಶ್ರೀನಿವಾಸ, ಹನುಮಾನ್, ಗರುಡ, ರಂಗನಾಯಕಿ, ಸುದರ್ಶನ ಚಕ್ರ ಮತ್ತು ಆಳ್ವಾರರುಗಳಲ್ಲಿ ಅನೇಕ ಉಪ-ದೇಗುಲಗಳಿವೆ.
ಸುದೀರ್ಘ ಕಾಲ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿದ್ದದ್ದು ಶ್ರೀರಂಗಪಟ್ಟಣ. ಆದರೂ ಇದು ಹೆಚ್ಚಾಗಿ ಗುರುತಿಸಿಕೊಂಡಿದ್ದು ಟಿಪು ಸುಲ್ತಾನನಿಂದ. ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣದಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿಕೊಂಡಿದ್ದ. ಇದೀಗ ಅದು ವಸ್ತು ಸಂಗ್ರಾಹಲಯವಾಗಿದೆ. ಟಿಪ್ಪು ಮತ್ತು ಅವನ ತಂದೆ ಹೈದರ್ ಅಲಿಯನ್ನು ಸಮಾಧಿ ಮಾಡಿದ ಗುಂಬಜ್, ಜಾಮಾ ಮಸೀದಿ, ಗನ್ ಪೌಡರ್ ಕೋಣೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಪಾಂಡವಪುರ

ಮಂಡ್ಯದಿಂದ 28 ಕಿ.ಮೀ ದೂರದಲ್ಲಿರುವ ಪಾಂಡವಪುರ ಹೈದರ್ ಮತ್ತು ಟಿಪ್ಪು ಸುಲ್ತಾನರ ಆಳ್ವಿಕೆಯ ಸಮಯದಲ್ಲಿ ಫ್ರೆಂಚ್ ಸೈನ್ಯದ ಶಿಬಿರದ ಜಾಗವಾಗಿತ್ತು. ಅದೇ ಕಾರಣಕ್ಕೆ ಈ ಸ್ಥಳವನ್ನು ಫ್ರೆಂಚ್ ರಾಕ್ಸ್ ಎಂದೂ ಕರೆಯಲಾಗುತ್ತದೆ. ಪಾಂಡವಪುರವು ಮಹಾಭಾರತಕ್ಕೆ ಸಂಬಂಧಿಸಿದ ಘಟನೆಗಳೊಂದಿಗೆ ಸಂಬಂಧಿಸಿದೆ. ಪಾಂಡವರು ಕಾಡಿನಲ್ಲಿದ್ದಾಗ, ಮೇಣದ ಅರಮನೆಯಿಂದ ತಪ್ಪಿಸಿಕೊಂಡ ನಂತರ, ಇಲ್ಲಿನ ‘ಕುಂತಿ ಬೆಟ್ಟ’ ಎಂಬ ಬೆಟ್ಟದ ಮೇಲೆ ಬೀಡು ಬಿಟ್ಟಿದ್ದರು ಎಂದು ನಂಬಲಾಗಿದೆ. ಅದೇ ಕಾರಣಕ್ಕೆ ಇದನ್ನು ಪಾಂಡವಪುರ ಎಂದು ಕರೆಯಲಾಗುತ್ತದೆ. ಕುಂತಿ ಬೆಟ್ಟವು ಒಂದೇ ಬೆಟ್ಟವಲ್ಲ. ಹಲವಾರು ಮೈಲುಗಳಷ್ಟು ಪ್ರದೇಶದಲ್ಲಿ ಹರಡಿರುವ ಅನೇಕ ಬೆಟ್ಟಗಳ ಸರಪಳಿಯಾಗಿದೆ. ಈ ಬೆಟ್ಟಗಳಿಗೆ ಕುಂತಿ, ಭೀಮ ಮತ್ತು ಬಕಾಸುರನ ದಂತಕಥೆಗಳೊಂದಿಗೆ ಸಂಬಂಧವಿರುವುದರಿಂದ ಈ ಬೆಟ್ಟಗಳಿಗೆ ಸ್ಥಳೀಯವಾಗಿ ಕುಂತಿ ಬೆಟ್ಟ, ಭೀಮನ ಬೆಟ್ಟ (ಒನಕೆ ಬೆಟ್ಟ), ಬಕಾಸುರ ಬೆಟ್ಟ ಎಂದು ಕರೆಯಲಾಗುತ್ತದೆ. ಕುಂತಿ ಬೆಟ್ಟದ ಮೇಲೆ ಶಿವನ ದೇವಾಲಯ ಮತ್ತು ಕುಂತಿ ಕೋಲ ಎಂದು ಕರೆಯಲ್ಪಡುವ ತೊಟ್ಟಿಯಿದೆ. ಹಾಗೆಯೇ ಭೀಮನ ಬಂಡಿ ಮತ್ತು ಭೀಮನ ಪಾದದ ಗುರುತೂ ಇಲ್ಲಿದೆ. ಕುಂತಿ ಬೆಟ್ಟದ ತಪ್ಪಲಿನಲ್ಲಿ ಶಾಲೆ, ಹಾಸ್ಟೆಲ್ ಮತ್ತು ಕಲ್ಯಾಣ ಮಂಟಪದೊಂದಿಗೆ ದಕ್ಷಿಣಾಮೂರ್ತಿ ಮತ್ತು ಮಲ್ಲಿಕಾರ್ಜುನ ದೇವಾಲಯಗಳಿವೆ.
ರಂಗನತಿಟ್ಟು ಪಕ್ಷಿಧಾಮ

1940ರಲ್ಲಿ ಪ್ರಸಿದ್ಧ ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿ ಅವರ ಅಪೇಕ್ಷೆಯ ಮೇರೆಗೆ ಅಭಯಾರಣ್ಯವಾಗಿ ಘೋಷಿಸಲ್ಪಿಟ್ಟಿದ್ದು ರಂಗನತಿಟ್ಟು ಪಕ್ಷಿಧಾಮ. ಈ ಪಕ್ಷಿಧಾಮ ಕಾವೇರಿ ನದಿಯ ದಡದಲ್ಲಿ 0.67 ಚ.ಕಿ.ಮೀನಷ್ಟು ವಿಸ್ತೀರ್ಣದಲ್ಲಿದೆ. ಇಲ್ಲಿಗೆ ಅಮೆರಿಕ, ಯುರೋಪ್ ಮತ್ತು ಸೈಬೀರಿಯಾದಿಂದ ವಲಸೆ ಪಕ್ಷಿಗಳು ಬರುತ್ತವೆ. ಇಲ್ಲಿ ದೋಣಿ ವಿಹಾರಕ್ಕೂ ಅವಕಾವಿದೆ. ಕೊಕ್ಕರೆ, ಮಿಂಚುಳ್ಳಿ, ಕಾರ್ಮೊರೆಂಟ್, ಡಾರ್ಟರ್, ಹೆರಾನ್‌ಗಳು, ಕಾಡು ಬಾತುಕೋಳಿಗಳು, ರಿವರ್ ಟರ್ನ್, ಕ್ಯಾಟಲ್ ಎಗ್ರೆಟ್ಸ್, ಇಂಡಿಯನ್ ರೋಲರ್, ಐಬಿಸ್, ಕಾಮನ್ ಸ್ಪೂನ್‌ಬಿಲ್, ಗ್ರೇಟ್ ಸ್ಟೋನ್ ಪ್ಲೋವರ್ ಮತ್ತು ಪೆಲಿಕಾನ್‌ಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಮೊಸಳೆಗಳನ್ನೂ ಕೂಡ ಇಲ್ಲಿ ಸಾಕಲಾಗಿದೆ.
ಕೊಕ್ಕರೆಬೆಳ್ಳೂರು

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈ ಕೊಕ್ಕರೆಬೆಳ್ಳೂರಿಗೆ ಸ್ಪಾಟ್-ಬಿಲ್ಡ್ ಪೆಲಿಕಾನ್‌ಗಳು ಮತ್ತು ಬಣ್ಣದ ಬಣ್ಣದ ಕೊಕ್ಕರೆಗಳು ವಲಸೆ ಬರುತ್ತವೆ. ಪ್ರತಿ ವರ್ಷ ಈ ಸಮಯದಲ್ಲಿ ಪ್ರಪಂಚದಾದ್ಯಂತದ ಪಕ್ಷಿ ಪ್ರೇಮಿಗಳು ಈ ಸ್ಥಳಕ್ಕೆ ಬಂದು ಪಕ್ಷಿಗಳನ್ನು ವೀಕ್ಷಿಸುತ್ತಾರೆ. ಪೆಲಿಕಾನ್‌ಗಳು ಮಾತ್ರವಲ್ಲದೆ ಹಳ್ಳಿಯ ಮರಗಳಲ್ಲಿ ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿ ಮಾಡುವ ಇತರ ಪಕ್ಷಿಗಳಾದ ಕಾರ್ಮೊರೆಂಟ್, ಬ್ಲ್ಯಾಕ್ ಐಬಿಸ್, ಗ್ರೇ ಹೆರಾನ್, ಕಪ್ಪು-ಕಿರೀಟದ ನೈಟ್ ಹೆರಾನ್ ಮತ್ತು ಇಂಡಿಯನ್ ಪಾಂಡ್ ಹೆರಾನ್ ಅನ್ನೂ ನೀವಿಲ್ಲಿ ಕಾಣಬಹುದು. ಹಳ್ಳಿಗರು ಈ ಪಕ್ಷಿಗಳ ಹಿಕ್ಕೆಗಳನ್ನು ತಮ್ಮ ಕೃಷಿಗೆ ಗೊಬ್ಬರವಾಗಿ ಬಳಸುತ್ತಾರೆ.
ಶಿವನಸಮುದ್ರ

ನಿಸರ್ಗ ಪ್ರೇಮಿಗಳಿಗೆ ಉಲ್ಲಾಸ ತಂದುಕೊಡುವಂತಹ ಸ್ಥಳ ಶಿವನಸಮುದ್ರ. ಕಾಡಿನಿಂದ ಕೂಡಿದ ಬೆಟ್ಟಗಳ ನಡುವೆ ನೀರು ಗರ್ಜಿಸಿಕೊಂಡು 75 ಮೀಟರ್ ಆಳಕ್ಕೆ ಬೀಳುತ್ತದೆ. ಮಳೆಗಾಲದ ಸಮಯದಲ್ಲಿ ಇಲ್ಲಿ ಕಾವೇರಿ ನದಿ ಎರಡು ಕವಲೊಡೆದುಕೊಂಡು ಜಲಪಾತದ ರೂಪದಲ್ಲಿ ಬೀಳುವುದನ್ನು ಕಾಣಬಹುದು. ಈ ಎರಡು ಜಲಪಾತಗಳನ್ನು ಗಗನಚುಕ್ಕಿ ಮತ್ತು ಭರಚುಕ್ಕಿ ಎಂದು ಕರೆಯಲಾಗುತ್ತದೆ. ಶಿವನಸಮುದ್ರವು 1902ರಲ್ಲಿ ಕೋಲಾರದ ಗೋಲ್ಡ್ ಫೀಲ್ಡ್‌ಗಳಿಗೆ ವಿದ್ಯುತ್ ಪೂರೈಸಲು ಸ್ಥಾಪಿಸಲಾದ ಭಾರತದ ಮೊದಲ ಜಲವಿದ್ಯುತ್ ಸ್ಥಾವರಕ್ಕೆ ನೆಲೆಯಾಗಿದೆ.
ಆದಿಚುಂಚನಗಿರಿ ನವಿಲು ಅಭಯಾರಣ್ಯ

ಆದಿಚುಂಚನಗಿರಿ ಯಾತ್ರಾ ಕೇಂದ್ರದ ಪಕ್ಕದಲ್ಲಿ ಆದಿಚುಂಚನಗಿರಿ ನವಿಲು ಅಭಯಾರಣ್ಯವಿದೆ. ನಾಗಮಂಗಲ ತಾಲೂಕಿನಲ್ಲಿರವ ಈ ಅಭಯಾರಣ್ಯವು 88.4 ಹೆಕ್ಟೇರ್ ವಿಸ್ತೀರ್ಣಕ್ಕೆ ಹಬ್ಬಿದೆ. ಇಲ್ಲಿ ಸುಮಾರು 99 ಜಾತಿಯ ಪಕ್ಷಿಗಳು, 32 ಜಾತಿಯ ಚಿಟ್ಟೆಗಳು ಮತ್ತು ಹಲವಾರು ಜಾತಿಯ ಸರೀಸೃಪಗಳು ಹಾಗೆಯೇ ಉಭಯಚರಗಳನ್ನು ಹೊಂದಿದೆ.
ಬಲಮುರಿ ಜಲಪಾತ

ಶ್ರೀರಂಗಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಬಲಮುರಿ ಜಲಪಾತ ಚಿಕ್ಕದಾದರೂ ರಮಣೀಯ ಜಲಪಾತವಾಗಿದೆ. ಚೆಕ್ ಡ್ಯಾಮ್ ಮೇಲೆ ನೀರು ಬೀಳುವುದನ್ನು ಇಲ್ಲಿ ಕಾಣಬಹುದು. ನೀರಿನಲ್ಲಿ ಯಾವುದೇ ಭಯವಿಲ್ಲದೆ ಆಟವಾಡಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು.
ಹೇಮಗಿರಿ ಜಲಪಾತ

ಕೆ.ಆರ್.ಪೇಟೆಯಿಂದ ಸುಮಾರು 10 ಕಿ.ಮೀ ದೂರವನ್ನು ಕ್ರಮಿಸಿದರೆ ನೀವು ಹೇಮಗಿರಿ ಜಲಪಾತವನ್ನು ಕಾಣಬಹುದು. ಹೇಮಾವತಿ ನದಿಯಿಂದಾಗಿರುವ ಈ ಜಲಪಾತವು ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವೆಂದೇ ಹೇಳಬಹುದು.
ಭೀಮೇಶ್ವರಿ ನೇಚರ್ ಅಂಡ್ ಅಡ್ವೆಂಚರ್ ಕ್ಯಾಂಪ್

ರಾಜ್ಯ ಸರ್ಕಾರ ನಡೆಸುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗಳ ಒಂದು ಘಟಕ ಭೀಮೇಶ್ವರಿ ನೇಚರ್ ಅಂಡ್ ಅಡ್ವೆಂಚರ್ ಕ್ಯಾಂಪ್. ಈ ಕ್ಯಾಂಪ್‌ನಲ್ಲಿ ಹಲವು ಸಾಹಸಮಯ ಕ್ರೀಡೆಗಳನ್ನು ನೀವು ಆಡಬಹುದಾಗಿದೆ. ಜಿಪ್ ಲೈನ್, ರೋಪ್ ವಾಕಿಂಗ್, ಕಯಾಕಿಂಗ್ ಸೇರಿ ಹಲವು ಆಟಗಳು ಇಲ್ಲಿವೆ. ಮಳೆಗಾಲದ ನಂತರ ಆಗಸ್ಟ್‌ನಿಂದ ಫೆಬ್ರವರಿ ನಡುವೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಕಾವೇರಿ ನದಿ ಹರಿಯುವ ಈ ಸ್ಥಳ ನಿಸರ್ಗ ಪ್ರಿಯರಿಗೂ ಇಷ್ಟವಾಗುತ್ತದೆ.
ಶಿಂಷಾ ಜಲಪಾತ

ಮಳವಳ್ಳಿ ಪಟ್ಟಣದಿಂದ 25 ಕಿ.ಮೀ ಪ್ರಯಾಣ ಮಾಡಿದರೆ ನಿಮಗೆ ಶಿಂಷಾ ಜಲಪಾತ ಸಿಗುತ್ತದೆ. ಈ ಜಲಪಾತದಲ್ಲಿ ಶಿಂಷಾ ನದಿ 200 ಅಡಿ ಆಳಕ್ಕೆ ಬಿದ್ದು ಜಲಪಾತದ ರೂಪ ಪಡೆದುಕೊಳ್ಳುತ್ತದೆ. ಇಲ್ಲಿ ನೇತಾಡುವ ಸೇತುವೆಯೂ ಇದ್ದು, ಪ್ರವಾಸಿಗರನ್ನು ಸೆಳೆಯುತ್ತದೆ.
ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್)

ಮೈಸೂರು ರಾಜ್ಯವಾಗಿದ್ದ ಸಮಯದಲ್ಲಿ ಮೈಸೂರು ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಮತ್ತು ಶಿವನಸಮುದ್ರ ಜಲವಿದ್ಯುತ್ ಕೇಂದ್ರಕ್ಕೆ ನೀರು ಪೂರೈಸುವ ಉದ್ದೇಶವನ್ನಿಟ್ಟುಕೊಂಡು ಕೃಷ್ಣರಾಜ ಸಾಗರ ಆಣೆಕಟ್ಟನ್ನು ನಿರ್ಮಿಸಲಾಯಿತು. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಟಿ.ಆನಂದ ರಾವ್, ಸರ್ ಮಿರ್ಜಾ ಇಸ್ಮಾಯಿಲ್ ಸೇರಿ ಹಲವು ಇಂಜಿನಿಯರ್‌ಗಳ ಜತೆ ಸೇರಿಕೊಂಡು ಮಾಡಿದ ಆಣೆಕಟ್ಟಿದು. ಅಣೆಕಟ್ಟಿನ ಕೆಲಸವು 1911-1932 ರ ನಡುವೆ ಪೂರ್ಣಗೊಂಡಿತು. ಅಣೆಕಟ್ಟು 8600 ಅಡಿ ಉದ್ದ ಮತ್ತು 130 ಅಡಿ ಎತ್ತರವಿದೆ.
ಬೃಂದಾವನ ಉದ್ಯಾನವನ

ಬೃಂದಾವನ ಉದ್ಯಾನವನ ಸುಮಾರು 60 ಎಕರೆ ವಿಸ್ತೀರ್ಣ ಹೊಂದಿದೆ. ಈ ಉದ್ಯಾನವನವು ಕಾಶ್ಮೀರದ ಶಾಲಿಮಾರ್ ಉದ್ಯಾನವನದ ಮಾದರಿಯಲ್ಲಿ, ಹಚ್ಚ ಹಸಿರಿನ ಹುಲ್ಲುಹಾಸುಗಳು, ಸಸ್ಯಾಲಂಕರಣ ಮತ್ತು ಕಾರಂಜಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಸತ್ಯಾಗ್ರಹ ಸೌಧ, ಶಿವಪುರ

ಇದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿಗುವ ಮದ್ದೂರಿನಲ್ಲಿರುವ ಸ್ವಾತಂತ್ರ್ಯ ಹೋರಾಟದ ಸ್ಮಾರಕ. ಇದನ್ನು 1938 ರ ಶಿವಪುರ ಧ್ವಜ ಸತ್ಯಾಗ್ರಹದ ನೆನಪಿಗಾಗಿ ನಿರ್ಮಿಸಲಾಗಿದೆ.
ಮೇಲುಕೋಟೆ

ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿ ದೇಗುಲ, ಯೋಗಾನರಸಿಂಹ ದೇವಸ್ಥಾಮ, ವಿವಿಧ ಮಠಗಳು ಮತ್ತು ಸಂಸ್ಕೃತ ಸಂಶೋಧನಾ ಅಕಾಡೆಮಿಯಿದೆ. ಸುಂದರ ಬೆಟ್ಟವನ್ನು ಹೊಂದಿರುವ ಇದು ರಾಜ್ಯದ ಪ್ರಮುಖ ಯಾತ್ರಾ ಕೇಂದ್ರವೂ ಹೌದು. ವೈಷ್ಣವ ಸಂತ ರಾಮಾನುಜರು ಕಳೆದುಹೋದ ಮುಖ್ಯ ದೇವತೆಯ ವಿಗ್ರಹವನ್ನು ಮರಳಿ ಇಲ್ಲಿ ಸ್ಥಾಪಿಸಿದರು ಎಂದು ಪುರಾಣ ಹೇಳುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ವಾರ್ಷಿಕ ವೈರಮುಡಿ ಬ್ರಹ್ಮೋತ್ಸವ ಉತ್ಸವದಲ್ಲಿ ದೇವರನ್ನು ಮೈಸೂರಿನ ಮಾಜಿ ಮಹಾರಾಜರು ಅರ್ಪಿಸಿದ ಭವ್ಯವಾದ ವಜ್ರಖಚಿತ ಕಿರೀಟದಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಇಲ್ಲಿ ಏಳು ಆಂಜನೇಯ ದೇವಾಲಯಗಳು, ನಾಲ್ಕು ಗರುಡ ದೇವಾಲಯಗಳು, ಪಂಚ ಭಾಗವತ ದೇವಾಲಯ, ವೆಂಕಟರಮಣ ದೇವಾಲಯ ಮತ್ತು ಹೊಸ ವೆಂಕಟೇಶ್ವರ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳಿವೆ.
ಆದಿಚುಂಚನಗಿರಿ

ಒಕ್ಕಲಿಗ ಸಮುದಾಯದ ಸ್ವಾಮಿಯ ಸ್ಥಾನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಭಗವಾನ್ ಗಂಗಾಧರೇಶ್ವರ ಇಲ್ಲಿ ಪ್ರಧಾನ ದೇವರಾಗಿದ್ದಾರೆ. ಅವರ ಜತೆಯಲ್ಲಿ ಶಿವನ ನಾಲ್ಕು ಅವತಾರಗಳಾದ ಮಲ್ಲೇಶ್ವರ, ಸೋಮೇಶ್ವರ, ಸಿದ್ದೇಶ್ವರ ಮತ್ತು ಚಂದ್ರಮೌಳೇಶ್ವರನಿಗೂ ಪೂಜೆ ಸಲ್ಲಿಸಲಾಗುತ್ತದೆ. ಈ ದೇವಾಲಯದ ಸಂಕೀರ್ಣವು ಗಣಪತಿ, ಸ್ತಂಭಂಬಿಕಾ ದೇವಿ, ಸುಬ್ರಮಣ್ಯ ದೇವರು, ಮಲ್ಲಮ್ಮ ದೇವಿ ಮುಂತಾದ ದೇವತೆಗಳನ್ನು ಒಳಗೊಂಡಿದೆ. ಆದಿಚುಂಚನಗಿರಿಯಲ್ಲಿ ಹೊಸ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯವು 18 ಅಡಿ ಅಗಲ ಮತ್ತು ಒಟ್ಟು 21 ಅಡಿ ಎತ್ತರವಿದೆ. ಈ ದೇಗುಲದಲ್ಲಿ ಒಟ್ಟು 128 ಕಂಬಗಳಿವೆ.
ವೆಂಕಟರಮಣಸ್ವಾಮಿ ದೇವಸ್ಥಾನ, ಕರಿಘಟ್ಟ

ಕರಿಘಟ್ಟವು ಶ್ರೀರಂಗಪಟ್ಟಣದಿಂದ ಸುಮಾರು 5 ಕಿ.ಮೀ ದೂರದಲ್ಲಿ, ಲೋಕಪಾವನಿ ನದಿಯ ದಡದಲ್ಲಿದೆ. ಇಲ್ಲಿ ಅತ್ಯಂತ ಎತ್ತರದ ಬೆಟ್ಟ(2697 ಅಡಿ) ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಟ್ಟದ ಮೇಲೆ ವೆಂಕಟರಮಣಸ್ವಾಮಿ ದೇಗುಲವಿದೆ. ಅಲ್ಲಿಗೆ ಕಾಲ್ನಡಿಗೆ ಅಥವಾ ವಾಹನದ ಮೂಲಕ ಹೋಗಬಹುದಾಗಿದೆ. ವೆಂಕಟರಮಣಸ್ವಾಮಿ ದೇವಾಲಯವನ್ನು ಮೈಸೂರು ರಾಜರ (ರಾಜ ಒಡೆಯ) ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಈ ದೇವಾಲಯದ ಸಂಕೀರ್ಣವು ವೆಂಕಟರಮಣ, ಲಕ್ಷ್ಮಿ ಮತ್ತು ರಾಮ-ಲಕ್ಷ್ಮಣ-ಸೀತೆಯ ದೇವರ ಮೂರ್ತಿಗಳನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿರುವ ಗರುಡ ಮಂಟಪದಲ್ಲಿ ಗರುಡ ಶಿಲ್ಪವನ್ನು ಇರಿಸಲಾಗಿದೆ. ಬಲಕ್ಕೆ ಪದ್ಮಾವತಿ ದೇವಸ್ಥಾನ ಮತ್ತು ಎಡಕ್ಕೆ ಹನುಮಾನ್ ದೇವಸ್ಥಾನವನ್ನು ಕಾಣಬಹುದಾಗಿದೆ.
ಇನ್ನಷ್ಟು ದೇಗುಲಗಳು
ಈ ಮೇಲಿನದಷ್ಟೇ ಅಲ್ಲದೆ ಇನ್ನೂ ಅನೇಕ ದೈವಿಕ ಸ್ಥಳಗಳನ್ನು ಮಂಡ್ಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀವು ಕಾಣಬಹುದು. ಅಘಾಲಯ, ಬಸರಾಳು, ಬೆಳ್ಳೂರು, ಬಿಂಡಿಗನವಿಲೆ, ಗೋಂವಿದನಹಳ್ಳಿ, ಹರಿಹರಪುರ, ಹೊಸಹೊಳಲು, ಕಂಬದಹಳ್ಳಿ, ಕಿಕ್ಕೇರಿ, ಮದ್ದೂರುಮ ಮಾರೇಹಳ್ಳಿ, ನಾಗಮಂಗಲ, ತೊಳಚಿ, ತೊಣ್ಣೂರು, ಕಲ್ಲಹಳ್ಳಿಯಲ್ಲಿ ಅದ್ಭುತವಾದ ದೇಗುಲಗಳಿವೆ. ಎಲ್ಲ ದೇವಸ್ಥಾನಗಳು ರಾಜರ ಕಾಲದ ಇತಿಹಾಸವನ್ನು ಹೊಂದಿವೆ.