Friday, 13th December 2024

ಕರಕುಶಲ ನಿಗಮ ಹಗರಣದ ಬೆನ್ನಲ್ಲೇ ಅಕ್ರಮ

₹24 ಕೋಟಿ ಹಗರಣ ಆರೋಪಿಗಳ ಬಚಾವ್ ಅಕ್ರಮ, ಮುಗಿದಿದ್ದ ತನಿಖೆ ಪುನರಾರಂಭ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ₹24 ಕೋಟಿಗಳನ್ನು ಹಗರಣಕ್ಕೆ ಹೊಸ ತಿರುವುದು ಬಂದಿದೆ. ಕಲಾ ಕೃತಿಗಳ ನಿರ್ಮಾಣ ಮತ್ತು ಮಾರಾಟದಿಂದ ನಿಗಮ ಸಂಗ್ರಹಿಸಿದ್ದ ₹24 ಕೋಟಿ ಲಪಟಾಯಿಸಿದ್ದ ಆರೋಪಿಗಳನ್ನು ನಿಗಮದ ಅಧಿಕಾರಿಗಳೇ ಬಚಾವ್ ಮಾಡಲು ಯತ್ನಿಸಿದ್ದ ಮತ್ತೊಂದು ಅಕ್ರಮ ಪತ್ತೆಯಾಗಿದೆ.

ಅಷ್ಟೇ ಅಲ್ಲ. ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನೇ ಮರೆ ಮಾಚಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ನಿಗಮದ ಹಿರಿಯ ಅಧಿಕಾರಿಗಳು ಪ್ರತಿಭಾವಂತ ಕಲಾವಿದರ ಕಲ್ಯಾಣಕ್ಕಾಗಿ ಬಳಕೆಯಾಗ ಬೇಕಿದ್ದ ₹24 ಕೋಟಿಗಳನ್ನು ನುಂಗಿದ್ದಲ್ಲದೆ ಪ್ರಮುಖ ಆರೋಪಿಗಳನ್ನೇ ಮರೆಮಾಚಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಅಂದರೆ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಮಾಡುವ ನೆಪದಲ್ಲಿ ನಿಗಮದ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಹಣ ಲಪಟಾಯಿಸಿದು,
ಇದರಲ್ಲಿ ಹಣಕಾಸು ವಿಭಾಗದ ಮ್ಯಾನೇಜರ್ ಕಿಶೋರ್ ಕುಮಾರ್ ಅವರನ್ನು ಮಾತ್ರ ಆರೋಪಿ ಮಾಡಿ ಮಾರ್ಕೆಟಿಂಗ್ ಮ್ಯಾನೇಜರ್ ಸಲ್ಲಾವುದ್ದೀನ್ ಹಾಗೂ ಇತರ ಅಧಿಕಾರಿಗಳನ್ನು ಅಕ್ರಮದಿಂದ ಬಜಾವ್ ಮಾಡಿದ್ದಾರೆಂದು ಗೊತ್ತಾಗಿದೆ.

ಈ ವಿಚಾರ ಸರಕಾರದ ಗಮನಕ್ಕೆ ಬರುತ್ತಿದ್ದಂತೆ ಪೂರ್ಣಗೊಂಡಿದ್ದ ತನಿಖೆಗೆ ಮತ್ತೆ ಜೀವ ಬಂದಿದೆ. ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನೇ ಹಗರಣದಿಂದ ಕೈಬಿಟ್ಟಿದ್ದ ಬಗ್ಗೆ ಮಾಹಿತಿ ಪಡೆದ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ
ಅವರು ಸಿಐಡಿಗೆ ಪತ್ರ ಬರೆದು ಇತರ ಆರೋಪಿಗಳ ಮಾಹಿತಿ ನೀಡಿದ್ದಾರೆ. ಹೀಗಾಗಿ ಸಿಐಡಿ ಅಧಿಕಾರಿಗಳು ಪೂರ್ಣವಾಗಿದ್ದ ತನಿಖೆ ಯನ್ನು ಮತ್ತೆ ಆರಂಭಿಸಿದ್ದು, ನ್ಯಾಯಾಲಯಕ್ಕೆ ಮತ್ತೊಂದು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಿದು ಹಗರಣದ ನಂತರ ಅಕ್ರಮ?
ನಿಗಮಕ್ಕೆ ಸೇರಿದ ₹17 ಕೋಟಿಗಳನ್ನು ಎಸ್ ಬಿಐ ಬ್ಯಾಂಕಿನ ಜೆ.ಸಿ.ರಸ್ತೆ ಶಾಖೆಯಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ. ಇದೇರೀತಿ ಹೆಸರಘಟ್ಟ ಶಾಖೆಯಲ್ಲಿ ₹4.75 ಕೋಟಿ ಠೇವಣಿ ಇರಿಸಲಾಗಿದೆ. ಒಟ್ಟಾರೆ ₹22 ಕೋಟಿಗಳನ್ನು ಬ್ಯಾಂಕ್‌ನಲ್ಲಿ ಇರಿಸಿ ಎರಡೂ ಠೇವಣಿಗಳಿಂದ ನಿಗಮಕ್ಕೆ ವರ್ಷಕ್ಕೆ ಸುಮಾರು ₹3 ಕೋಟಿಗಳಷ್ಟು ಬಡ್ಡಿ ಹಣ ಬರುವಂತೆ ಮಾಡಲಾಗಿದೆ. ಅಧಿಕಾರಿಗಳು ಭಾರೀ ಮೊತ್ತದ ಈ ಹಣವನ್ನು ಬ್ಯಾಂಕಿನಲ್ಲಿ ಕೇವಲ 7 ದಿನಗಳಿಗೆ ಠೇವಣಿ ಇರಿಸಿ ನಂತರ ತಾವೇ ಪಡೆದಿದ್ದಾರೆ. ಆದರೆ ನಿಗಮದ
ದಾಖಲೆಯಲ್ಲಿ ಮಾತ್ರ ಒಂದು ವರ್ಷದ ಅವಧಿಗೆ ಠೇವಣಿ ಇರಿಸಲಾಗಿದೆ ಎಂದು ತೋರಿಸಿ ಹಣ ನುಂಗಿದ್ದಾರೆ.

ಅದು ಹೇಗೆಂದರೆ, ಬ್ಯಾಂಕಿನಲ್ಲಿ 7 ದಿನಗಳ ನಿಶ್ಚಿತ ಅವಧಿ ಮುಗಿಯುತ್ತಿದ್ದಂತೆ ಅಧಿಕಾರಿಗಳು ₹22 ಕೋಟಿ ಹಣವನ್ನು ತೆಗೆದು ನಿಗಮದ ಎಂ.ಡಿ. (ವ್ಯವಸ್ಥಾಪಕ ನಿರ್ದೇಶಕ) ಹೆಸರಿನಲ್ಲಿ ಮತ್ತೊಂದು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ ಎನ್ನಲಾಗಿದೆ. ನಂತರ ಎಂ.ಡಿ.ಖಾತೆಯಿಂದ ಸುಮಾರು 200ಕ್ಕೂ ಹೆಚ್ಚು ಜನರ ಅಕೌಂಟ್ ಗಳಿಗೆ ಹಣ ಹಾಕಿ ಡ್ರಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವರ್ಷದ ನಂತರ ನಿಗಮದ ಅಧಿಕಾರಿಗಳು ಠೇವಣಿ ಹಣ ವಿಚಾರಿಸಲು ಬ್ಯಾಂಕಿಗೆ ಹೋದಾಗ ಠೇವಣಿ ಅವಧಿ 7 ದಿನಕ್ಕೇ ಮುಗಿದು
ನಂತರದಲ್ಲಿ ನಕಲಿ ದಾಖಲೆ ಸೃಷ್ಟಿಯಾಗಿರುವುದು ಗೊತ್ತಾಗಿದೆ. ಇದರಿಂದ ಬಡ್ಡಿಯೂ ಸೇರಿದಂತೆ ಸುಮಾರು ₹24 ಕೋಟಿ ನಷ್ಟ ವಾಗಿರುವುದು ಗೊತ್ತಾಗಿತ್ತು.

ಎಂ.ಡಿ.ರೂಪಾ ಅನುಮಾನ ಏನು?
ನಿಗಮಕ್ಕೆ ನೂತನ ಅಧ್ಯಕ್ಷರಾಗಿ ಬಂದ ಬೇಳೂರು ರಾಘವೇಂದ್ರ ಶೆಟ್ಟಿ ಅವರು, ಈ ಅಕ್ರಮ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಐಪಿಎಸ್ ಅಧಿಕಾರಿ ಅವಧಿಯಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಆದರೆ ಸಿಐಡಿ
ಅಧಿಕಾರಿಗಳು ನಿಗಮದ ಮಾರ್ಕೆಟಿಂಗ್ ಮ್ಯಾನೇಜರ್ ಸಲ್ಲಾವುದ್ದೀನ್ ಅವರ ಹೆಸರು ಕೈಬಿಟ್ಟು, ಹಣಕಾಸು ವಿಭಾಗದ
ಮ್ಯಾನೇಜರ್ ಕಿಶೋಕ್ ಕುಮಾರ್ ಮಾತ್ರ ಸೇರಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಇಬ್ಬರೂ ಅಧಿಕಾರಿಗಳು ನಿಗಮದ ಪ್ರತಿ ಹಣಕಾಸು ವ್ಯವಹಾರವನ್ನು ಜಿಂಟಿಯಾಗಿಯೇ ನಡೆಸಿದ್ದರೂ ಸಿಐಡಿ ಇಲ್ಲಿ ಒಬ್ಬರನ್ನು ಮಾತ್ರ ಆರೋಪ ಪಟ್ಚಿಗೆ ಸೇರಿಸಿದ್ದ ಎಂ.ಡಿ. ರೂಪಾ ಅವರಿಗೆ ಶಂಕೆ ಮೂಡಿಸಿತು. ನಂತರ ಅವರು ಸಿಐಡಿಗೆ ಪತ್ರ ಬರೆಯುತ್ತಿದ್ದಂತೆ ಸಿಐಡಿ ಅಧಿಕಾರಿಗಳು ಎಚ್ಚೆತ್ತು ಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.

***

ಅಕ್ರಮದಲ್ಲಿ ಈಗ ವ್ಯವಸ್ಥಾಪಕರೊಬ್ಬರ ಬಂಧನವಾಗಿದ್ದು, ಇದರಲ್ಲಿ ಇನ್ನೂ ಅನೇಕರು ಭಾಗಿಯಾಗಿರುವ ಶಂಕೆ ಇದೆ. ಒಟ್ಟಾರೆ ಅಕ್ರಮವಾಗಿ ಲಪಟಾಯಿಸಿರುವ ₹24 ಕೋಟಿಯನ್ನು ವಾಪಸ್ ಪಡೆಯುವ ವಿಶ್ವಾಸವಿದೆ.

-ಡಾ.ಬೇಳೂರು ರಾಘವೇಂದ್ರ ಶೆಟ್ಟಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ

ತನಿಖೆ ನಡೆದು ಆರೋಪ ಪಟ್ಟಿಯನ್ನೇ ಸಲ್ಲಿಸಲಾಗಿತ್ತು. ಇದರಲ್ಲೂ ಏನೋ ದೋಷ ಇರುವ ಬಗ್ಗೆ ನನಗೆ ಅನುಮಾನವಿತ್ತು. ಈ ಬಗ್ಗೆ ಸಿಐಡಿಗೆ ಪತ್ರ ಬರೆದಿದ್ದೆ. ಹೀಗಾಗಿ ತನಿಖೆ ಈಗ ಸರಿಯಾದ ದಿಕ್ಕಿನಲ್ಲಿ ಗಂಭೀರವಾಗಿ ನಡೆಯುತ್ತಿದೆ. ಇನ್ನೂ ಕೆಲವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇನೆ.
-ಡಾ.ರೂಪಾ, ರಾಜ್ಯ ಕರ ಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ