ಬೆಂಗಳೂರು: ಕುತೂಹಲ ಕೆರಳಿಸಿದ ರಾಜ್ಯದ 3 ಪ್ರತಿಷ್ಠಿತ ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ. ನ. 13ರಂದು ಇಲ್ಲಿ ಉಪಚುನಾವಣೆ ನಡೆದಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್ಗೆ ಪ್ರತಿಷ್ಠೆಯ ಚುನಾವಣೆಯಾಗಿರುವ ಕಾರಣ ಇಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತ್ತು. ಎರಡೂ ಕಡೆಯ ನಾಯಕರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ (Karnataka Bypoll Result 2024).
ಆರಂಭಿಕ ಟ್ರೆಂಡ್ ಹೇಗಿದೆ?
ಆರಂಭಿಕ ಹಂತದಲ್ಲಿಯೇ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಮಧ್ಯೆ ಬಿರುಸಿನ ಹೋರಾಟ ಕಂಡು ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ 2 ಕಡೆ ಮತ್ತು ಕಾಂಗ್ರೆಸ್ 1 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ.
ಚನ್ನಪಟ್ಟಣ: ಆರಂಭದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಆರಂಭದಲ್ಲಿ, ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿದ ಸಿ.ಪಿ.ಯೋಗೇಶ್ವರ್ ಸದ್ಯ ಮುನ್ನಡೆ ಸಾಧಿಸಿದ್ದರು. 6 ಸುತ್ತು ಪೂರ್ಣಗೊಂಡ ಬಳಿಕ ನಿಖಿಲ್ ಕುಮಾರಸ್ವಾಮಿ 30,674 ಮತ ಪಡೆದರೆ ಸಿ.ಪಿ.ಯೋಗೇಶ್ವರ್ 29,891 ವೋಟು ಪಡೆದಿದ್ದಾರೆ. ನಿಖಿಲ್ (ಮೊದಲ ಸುತ್ತಿನಲ್ಲಿ 5,075, 2ನೇ ಸುತ್ತಿನಲ್ಲಿ 10,204, 3ನೇ ಸುತ್ತಿನಲ್ಲಿ 15,307, 4ನೇ ಸುತ್ತಿನಲ್ಲಿ 20,676, 5ನೇ ಸುತ್ತಿನಲ್ಲಿ 25,649 ಮತ ಪಡೆದು 6ನೇ ಸುತ್ತು ಪೂರ್ಣಗೊಂಡ ಬಳಿಕ 30,674 ಮತ ಪಡೆದಿದ್ದಾರೆ) ಮುಂದಿದ್ದಾರೆ. ಸಿ.ಪಿ.ಯೋಗೇಶ್ವರ್ (ಮೊದಲ ಸುತ್ತಿನಲ್ಲಿ 5,124, 2ನೇ ಸುತ್ತಿನಲ್ಲಿ 10,069, 3ನೇ ಸುತ್ತಿನಲ್ಲಿ 14,460, 4ನೇ ಸುತ್ತಿನಲ್ಲಿ 19,521, 5ನೇ ಸುತ್ತಿನಲ್ಲಿ 24,343 ಮತ ಪಡೆದು 6ನೇ ಸುತ್ತು ಪೂರ್ಣಗೊಂಡ ಬಳಿಕ 30,674 ಮತ ಪಡೆದಿದ್ದಾರೆ) ಹಿನ್ನಡೆಯಲ್ಲಿದ್ದಾರೆ.
ಸಂಡೂರು: ಕಾಂಗ್ರೆಸ್ ಭದ್ರಕೋಟೆ ಸಂಡೂರಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇಲ್ಲಿ ಕೈ ಪಕ್ಷದಿಂದ ಕಣಕ್ಕಿಳಿದಿರುವ ಅನ್ನಪೂರ್ಣ ಅವರು ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದು, ಅದನ್ನು ಕಾಯ್ದುಕೊಂಡಿದ್ದಾರೆ. ಇವರಿಗೆ ಬಿಜೆಪಿಯ ಬಂಗಾರು ಹನುಮಂತು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಇಬ್ಬರಿಗೂ ಇದು ಮೊದಲ ಚುನಾವಣೆ. ಯಾರು ಗೆದ್ದರೂ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಲಿದ್ದಾರೆ.
ಶಿಗ್ಗಾವಿ: ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಶಿಗ್ಗಾವಿಯಲ್ಲಿ ಕೇಸರಿ ಪಡೆ ಮುನ್ನಡೆ ಕಾಯ್ದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ನ ಯಾಸೀರ್ ಪಠಾಣ್ ಸದ್ಯ ಹಿನ್ನಡೆ ಅನುಭವಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Karnataka Bypoll Result: ಉಪಚುನಾವಣೆ ಮತ ಎಣಿಕೆ ಆರಂಭ; ಚನ್ನಪಟ್ಟಣದಲ್ಲಿ ನಿಖಿಲ್- ಯೋಗೇಶ್ವರ್ ರೋಚಕ ಕಣ್ಣಾಮುಚ್ಚಾಲೆ