ಬೆಂಗಳೂರು: ಕರ್ನಾಟಕದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ (Karnataka Bypoll Result) ಆರಂಭವಾಗಿದ್ದು, ಬಹುನಿರೀಕ್ಷಿತ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ ನಡುವೆ ಮತಗಳಿಕೆಯಲ್ಲಿ ರೋಚಕ ಹಣಾಹಣಿ ನಡೆದಿದೆ.
ಅಂಚೆ ಮತಗಳ ಎಣಿಕೆ ನಡೆದಾಗ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಮುಂದಿದ್ದರು. ಆದರೆ ಮೊದಲ ಸುತ್ತಿನ ಮತ ಎಣಿಕೆ ನಡೆದಾಗ ಕಾಂಗ್ರೆಸ್ನ ಸಿಪಿ ಯೋಗೇಶ್ವರ ಅವರು ಮುನ್ನಡೆ ಕಾಯ್ದುಕೊಂಡರು. ಎರಡನೇ ಸುತ್ತಿನಲ್ಲಿ ಮತ್ತೆ ನಿಖಿಲ್ ಮುನ್ನಡೆ ಸಾಧಿಸಿದರು. ಮೂರನೇ ಸುತ್ತಿನಲ್ಲಿ ಮತ್ತೆ ಸಿಪಿ ಯೋಗೇಶ್ವರ್ ಮುಂದಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯ ಆಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸತತ ಮುನ್ನಡೆ ಕಾಯ್ದುಕೊಂಡರು. ಕಾಂಗ್ರೆಸ್ನ ಯಾಸಿರ್ ಪಠಾಣ್ ಹಿನ್ನಡೆ ಅನುಭವಿಸಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ನ ಅನ್ನಪೂರ್ಣ ತುಕಾರಾಂ ಅವರು ಮೊದಲ ಸುತ್ತಿನಿಂದಲೂ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿಯ ಬಂಗಾರು ಹನುಮಂತು ಹಿಂದಿದ್ದಾರೆ.
ಮೂರೂ ಕ್ಷೇತ್ರಗಳಿಗೆ 2024ರ ನವೆಂಬರ್ 13ರಂದು ಚುನಾವಣೆ ನಡೆದಿತ್ತು. ಇಂದು ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ಒಡ್ಡಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಚನ್ನಪಟ್ಟಣ ಕ್ಷೇತ್ರ ತೀವ್ರ ರಾಜಕೀಯ ವಾಗ್ವಿವಾದ, ಜಿದ್ದಾಜಿದ್ದಿನ ಕಣವಾಗಿತ್ತು.