Saturday, 23rd November 2024

Karnataka Bypoll results: ರಾಜ್ಯದ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವಿನ ಸಿಹಿ; ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಮುಖಭಂಗ

Karnataka Bypoll results

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯ (Karnataka Bypoll results) ಜಿದ್ದಾಜಿದ್ದಿನ ಕದನದಲ್ಲಿ ಆಡಳಿತರೂಢ ಕಾಂಗ್ರೆಸ್‌ ಗೆದ್ದು ಬೀಗಿದ್ದು, ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಫಲಿತಾಂಶದಿಂದ ಮುಖಭಂಗವಾಗಿದೆ. ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟಕ್ಕೆ ತೀವ್ರ ಆಘಾತ ನೀಡಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿ ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿದ್ದು, ಭಾರಿ ಸದ್ದು ಮಾಡಿದ್ದ ಮುಡಾ ಹಗರಣ , ವಾಲ್ಮೀಕಿ ನಿಗಮ ಅಕ್ರಮ ವಕ್ಫ್‌ ವಿವಾದ ಹಾಗೂ ಸಚಿವ ಜಮೀರ್‌ ಅವರ ವಿವಾದಾತ್ಮಕ ಹೇಳಿಕೆಗಳು ಮತದಾರನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಬಣ ಬಡಿದಾಟ ಜೋರಾಗಿತ್ತು. ಆದರೆ, ಉಪ ಚುನಾವಣೆಗೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಒಗ್ಗಟ್ಟಿನಿಂದಲೇ ಹೋರಾಟ ಮಾಡಿದ್ದರು. ಅದರಲ್ಲೂ ಪ್ರಮುಖ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮಾಜಿ ಸಂಸದ ಡಿ.ಕೆ. ಸುರೇಶ್‌, ಸಚಿವರಾದ ಜಮೀರ್‌ ಅಹ್ಮದ್‌, ಸಂತೋಷ್‌ ಲಾಡ್‌ ಹೆಚ್ಚಿನ ಪಾತ್ರವಹಿಸಿದ್ದರು. ಈ ಫಲಿತಾಂಶದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವರ್ಚಸ್ಸು ತಗ್ಗಿಲ್ಲ ಎಂಬ ಸೂಚನೆಯನ್ನು ವಿಪಕ್ಷಗಳಿಗೆ ನೀಡಿದ್ದಾರೆ.

ನಿಖಿಲ್‌ ಸೋಲು, ಜೆಡಿಎಸ್‌ ಮುಕ್ತಗೊಂಡ ರಾಮನಗರ

Channapatna Bypoll Result 2024

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಗೆಲುವು ಸಾಧಿಸುವ ಮೂಲಕ ರಾಮನಗರ ಸಂಪೂರ್ಣವಾಗಿ ಜೆಡಿಎಸ್‌‍ ಮುಕ್ತವಾಗಿದೆ. ಜೆಡಿಎಸ್‌ ಭದ್ರಕೋಟೆಯಯಾಗಿದ್ದ ರಾಮನಗರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಸೋಲಾಗಿತ್ತು. ಇದೀಗ ಚನ್ನಪಟ್ಟಣ ಉಪ ಚುನಾವಣೆಯಲ್ಲೂ ಸೋಲು ಕಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಮತ್ತು ಕನಕಪುರದಲ್ಲಿ ಗೆದ್ದಿದ್ದ ಕಾಂಗ್ರೆಸ್‌‍, ಈ ಬಾರಿ ಚನ್ನಪಟ್ಟಣದಲ್ಲೂ ಗೆಲ್ಲುವ ಮೂಲಕ ಇಡೀ ಜಿಲ್ಲೆಯನ್ನೇ ಜೆಡಿಎಸ್‌‍ನಿಂದ ಮುಕ್ತಗೊಳಿಸಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ 1,12,642 ಮತಗಳನ್ನು ಪಡೆದು, ನಿಖಿಲ್‌ ಕುಮಾರಸ್ವಾಮಿ (87,229 ಮತ) ವಿರುದ್ಧ 25, 413 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ನಿಖಿಲ್‌ ಕುಮಾರಸ್ವಾಮಿಗೆ 2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಹಾಗೂ 2023ರ ರಾಮನಗರ ವಿಧಾನಸಭಾ ಚುನಾವಣೆ ಬಳಿಕ ಮತ್ತೊಮ್ಮೆ ಜೆಡಿಎಸ್‌ ಭದ್ರಕೋಟೆ ಚನ್ನಪಟ್ಟಣದಲ್ಲೂ ಸೋಲಾಗಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮಾಜಿ ಸಿಎಂ ಬಿ.ಎಸ್‌‍.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಅನೇಕ ನಾಯಕರು ನಡೆಸಿದ ಪ್ರಚಾರ, ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಯನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾಗಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್‌ ಸೋಲಿನಿಂದ ವಿಚಲಿತರಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌, ಚನ್ನಪಟ್ಟಣ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು, 6 ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಬೀಡುಬಿಟ್ಟು ಮತದಾರರ ಮನಗೆದ್ದಿದ್ದರು. ಕ್ಷೇತ್ರದಲ್ಲಿ ಅವರ ರಣತಂತ್ರ ಫಲಿಸಿದೆ.

ಈ ಸುದ್ದಿಯನ್ನೂ ಓದಿ | Wayanad Election Result 2024: ವಯನಾಡಿನಲ್ಲಿ ಪ್ರಿಯಾಂಕಾ ಅಲೆ; ಬರೋಬ್ಬರಿ 4 ಲಕ್ಷ ಮತಗಳ ಅಂತರದಿಂದ ಗೆದ್ದ ಕಾಂಗ್ರೆಸ್‌ ನಾಯಕಿ

ಶಿಗ್ಗಾಂವಿಯಲ್ಲಿ ಪುತ್ರನನ್ನು ಗೆಲ್ಲಿಸುವಲ್ಲಿ ಬೊಮ್ಮಾಯಿ ವಿಫಲ

Shiggaon bypoll results 2024

ಶಿಗ್ಗಾಂವಿಯಲ್ಲಿ ತಾವೇ ಗೆದ್ದಿದ್ದ ಕ್ಷೇತ್ರದಲ್ಲಿ ಪುತ್ರ ಭರತ್‌ ಬೊಮ್ಮಾಯಿ ಅವರನ್ನು ಗೆಲ್ಲಿಸುವಲ್ಲಿ ಮಾಜಿ ಸಿಎಂ ಬಸವರಾಜ ಬೊಮಾಯಿ ವಿಫಲರಾಗಿದ್ದಾರೆ. ಹಲವರ ವಿರೋಧದ ನಡುವೆಯೂ ತಮ ಪುತ್ರ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಕೊಟ್ಟಿದ್ದರು. ತಾವು ಎದುರಿಸಿದ ಮೊದಲ ಚುನಾವಣೆಯಲ್ಲೇ ಅವರಿಗೆ ಸೋಲಿನ ರುಚಿ ಉಂಟಾಗಿದೆ. ಇದರಿಂದ ಸ್ವತಃ ಬೊಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ತೀವ್ರ ಮುಖಭಂಗವಾಗಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹ್ಮದ್‌ ಪಠಾಣ್‌ (yasir ahmed khan pathan) ವಿಜಯ ಪತಾಕೆ ಹಾರಿಸಿದ್ದಾರೆ. ಇವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ (Bharath bommai) ವಿರುದ್ಧ 13,448 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಒಟ್ಟು 18 ಸುತ್ತುಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹ್ಮದ್‌ ಪಠಾಣ್‌ 10,0756 ಮತ ಪಡೆದಿದ್ದು, ಬಿಜೆಪಿಯ ಭರತ್‌ ಬೊಮ್ಮಾಯಿ 87,308 ಪಡೆದಿದ್ಧಾರೆ.

ಸಂಡೂರಿನಲ್ಲಿ ಮತ್ತೆ ಕಾಂಗ್ರೆಸ್‌ ಗೆಲುವು

ಸಂಡೂರಿನಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಅನ್ನಪೂರ್ಣ ಗೆಲ್ಲುವ ಮೂಲಕ ಕ್ಷೇತ್ರವು ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಸಚಿವ ಸಂತೋಷ್‌ಲಾಡ್‌, ಸಂಸದ ಇ.ವಿ.ತುಕಾರಾಮ್‌ ಅವರ ಸಂಘಟಿತ ಹೋರಾಟ ಅಭ್ಯರ್ಥಿ ಗೆಲುವಿಗೆ ನೆರವಾಗಿದೆ. ಗಣಿ ಜಿಲ್ಲೆ ಬಳ್ಳಾರಿಯ ಸಂಡೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತೇನೆಂದು ಹೇಳಿದ್ದ ಮಾಜಿ ಸಚಿವ ಜನಾರ್ಧನರೆಡ್ಡಿಗೆ ಮುಖಭಂಗವಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ 9,645 ಮತಗಳಿಂದ ವಿಜಯ ಪತಾಕೆ ಹಾರಿಸಿದ್ದಾರೆ. ಒಟ್ಟು 19 ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 93,606 ಮತ ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು (83961) ವಿರುದ್ಧ 9,645 ಮತಗಳ ಅಂತರದಿಂದ ಗೆಲುವು ಪಡೆದಿದ್ಧಾರೆ.