Saturday, 23rd November 2024

Karnataka Bypoll Results: ಉಪಚುನಾವಣೆಯ ಗೆಲುವಿಗೆ ದುಡ್ಡು, ಸರ್ಕಾರಿ ಯಂತ್ರದ ದುರ್ಬಳಕೆ: ಪ್ರಹ್ಲಾದ್‌ ಜೋಶಿ ಆರೋಪ

prahlad joshi

ಧಾರವಾಡ: ರಾಜ್ಯದ ಉಪಚುನಾವಣೆಯ ಫಲಿತಾಂಶ (Karnataka Bypoll Results) ಗಮನಿಸಿದರೆ, ಕಂಡು ಕೇಳರಿಯದ ರೀತಿಯಲ್ಲಿ ದುಡ್ಡು ಹಾಗೂ ಸರ್ಕಾರದ ಯಂತ್ರಗಳು ಬಳಕೆಯಾಗಿರುವುದು ಕಂಡು ಬರುತ್ತದೆ. ಇಷ್ಟಾಗಿಯೂ ಶಿಗ್ಗಾಂವಿ, ಚನ್ನಪಟ್ಟಣ (Channapatna By Election) ಹಾಗೂ ಸಂಡೂರಿನಲ್ಲಿ ಆಗಿರುವ ಬಿಜೆಪಿ ಸೋಲನ್ನು ಗಂಭೀರವಾಗಿ ಪರಿಶೀಲಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಹೇಳಿದ್ದಾರೆ.

ಶನಿವಾರ ಫಲಿತಾಂಶ ಪ್ರಕಟಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಉಪ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಹೆಚ್ಚು ಅವಕಾಶವಿರುತ್ತದೆ. ಆಡಳಿತ ಪಕ್ಷದಿಂದ ಅನುದಾನದ ಅನುಕೂಲದ ಹಿನ್ನೆಲೆಯಲ್ಲಿ ಜನರು ಮತ ಹಾಕುತ್ತಾರೆ. ಜೊತೆಗೆ ಉಪ ಚುನಾವಣೆಯ ಕ್ಷೇತ್ರದ ಎರಡ್ಮೂರು ಗ್ರಾಪಂಗಳಿಗೆ ಒಬ್ಬರಂತೆ ಮಂತ್ರಿಗಳು ಠಿಕಾಣಿ ಹೂಡುವ ಮೂಲಕ ಯಾವ ಪ್ರಮಾಣದಲ್ಲಿ ಹಣ ಹಂಚಿಕೆ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸೋಲನ್ನು ಒಪ್ಪಿಕೊಳ್ಳುತ್ತೇವೆ. ಹಾಗಂತ ಕಾಂಗ್ರೆಸ್‌ ಹೇಳಿದ ರೀತಿ ಇವಿಎಂ ದೋಷ ಎನ್ನೋದಿಲ್ಲ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ಚುನಾವಣೆ ಫಲಿತಾಂಶ ಗಮನಿಸಿದರೆ ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ವಿಫಲ ನಾಯಕರು ಎನ್ನುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ. ಸೋನಿಯಾ ಗಾಂಧಿ ಅವರ ಸತತ ಪ್ರಯತ್ನ ಪೂರ್ವಕವಾಗಿ ಹೊಸ ಹೊಸ ಎಂಜಿನ್‌ ಅಳವಡಿಸಿ ವಿಮಾನ ಹಾರಿಸಿದರೂ ಕೆಳಗೆ ಬೀಳುತ್ತಿದೆ. ಕರ್ನಾಟಕ ಉಪಚುನಾವಣೆಯ ಒಂದೆರೆಡು ಕ್ಷೇತ್ರ ಹೊರತುಪಡಿಸಿ ಇಡೀ ದೇಶದಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ನೆಲಕಚ್ಚಿದೆ. ಮಹಾರಾಷ್ಟ್ರದಲ್ಲಿ ಶೇ. 10 ರಿಂದ 11ರಷ್ಟು ಮಾತ್ರ ಉಳಿದುಕೊತಂಡಿದ್ದು, ಅಲ್ಲಿ ಒಬ್ಬರೂ ವಿರೋಧ ಪಕ್ಷಕ್ಕೂ ಹೋಗದ ಸ್ಥಿತಿಗೆ ಬಂದಿದೆ. ಇನ್ನು, ಸ್ಥಾನ ಮಾಡುವವರ ಬುಡಕ್ಕೆ ಕುಳಿತುಕೊಳ್ಳುವಂತೆ ಜಾರ್ಖಂಡ್‌ನಲ್ಲಿ ಜೆಎಂಎಂ ಜೊತೆಗೂಡಿ ಹತ್ತು ಸ್ಥಾನಗಳನ್ನು ಮಾತ್ರ ಕಾಂಗ್ರೆಸ್‌ ಪಡೆದಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಪರಜೀವಿ ಪಕ್ಷವಾಗುತ್ತಿದೆ ಎಂದು ಟೀಕಿಸಿದ ಜೋಶಿ, ಅತೃಪ್ತ ಆತ್ಮಗಳು ಮತ್ತೊಬ್ಬರ ಆತ್ಮ ಹೊಕ್ಕು ಅಸ್ತಿತ್ವ ಕಾಯ್ದುಕೊಳ್ಳುವ ರೀತಿಯಲ್ಲಿ ಕಾಂಗ್ರೆಸ್‌ ಪರಜೀವಿ ಪಕ್ಷವಾಗಿ ಪರಿವರ್ತನೆ ಹೊಂದುತ್ತಿದೆ. ಕಾಂಗ್ರೆಸ್ಸಿನ ಇನ್ನೊಂದು ವಿಶೇಷ ಗುಣ ಏನೆಂದರೆ, ಈ ಪಕ್ಷದ ಜೊತೆಗೆ ಯಾರು ಗುರುತಿಸಿಕೊಳ್ಳುತ್ತಾರೆಯೋ ಅವರನ್ನು ಮುಳುಗಿಸುವುದು. ಉತ್ತರ ಪ್ರದೇಶದಲ್ಲಿ ಎಸ್ಪಿ ಪಕ್ಷ, ಮಹಾರಾಷ್ಟ್ರದಲ್ಲಿ ಶರದ್‌ ಪವಾರ, ಉದ್ಧವ್‌ ಠಾಕ್ರೆ ಅವರನ್ನು ಮುಳುಗಿಸಿದರು. ಅಷ್ಟರಲ್ಲಿಯೇ ಶಿಬೂ ಸೊರೇನ್ ಪುತ್ರ ಹೇಮಂತ ಸೊರೇನ್‌ ಮುಳುಗುವರಿದ್ದು ಈಜಿ ಉಳಿದುಕೊಂಡಿದ್ದಾರೆ. ಒಟ್ಟಾರೆ, ಕಾಂಗ್ರೆಸ್‌ ಪಕ್ಷದ ಜೊತೆಗೆ ಹೋದವರು ಮುಳುಗಿ ಹೋಗುತ್ತಾರೆ ಎಂಬುದು ಮಾತ್ರ ಸತ್ಯ ಎಂದರು.

ಇದನ್ನೂ ಓದಿ: Karnataka Bypoll Results: ಮುಡಾ, ವಾಲ್ಮೀಕಿ, ವಕ್ಫ್:‌ ಬಿಜೆಪಿಯ ಎಲ್ಲಾ ಅಸ್ತ್ರಗಳೂ ಕಾಂಗ್ರೆಸ್‌ ಮುಂದೆ ಟುಸ್!‌