Saturday, 23rd November 2024

Karnataka bypoll results: ಉಪ ಚುನಾವಣೆಯ ಸೋಲು ನಿರಾಸೆ ತಂದಿದೆ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ

Karnataka bypoll results

ಬೆಂಗಳೂರು: ಉಪ ಚುನಾವಣೆಯಲ್ಲಿ (Karnataka bypoll results) ಬಿಜೆಪಿಗೆ ಹಿನ್ನಡೆಯಾಗಿರುವುದರಿಂದ ನಿರಾಸೆಯಾಗಿರುವುದು ನಿಜ. ಆದರೆ, ಶಿಗ್ಗಾಂವಿ ಕ್ಷೇತ್ರದ ಫಲಿತಾಂಶ ಆಘಾತ ತಂದಿದೆ. ಸೋಲಿನ ಕಾರಣಗಳ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್‌ಡಿಯೆ ಗೆಲುವು ಸಾಧಿಸಿರುವುದು ಖುಷಿಯ ವಿಚಾರ. ಆದರೆ, ಕರ್ನಾಟಕದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ನಿಜಕ್ಕೂ ನಿರಾಸೆಯಾಗಿದೆ ಎಂದರು.

ಸಂಡೂರಿನಲ್ಲಿ ಬಿಜೆಪಿ ಮೊದಲ ಬಾರಿ 80 ಸಾವಿರ ಮತ ಪಡೆದಿದೆ. 8-10 ಸಾವಿರ ಮತಗಳ ಅಂತರದಲ್ಲಿ ಗೆಲುವಿನ ನಿರೀಕ್ಷೆ ಇತ್ತು. ಇದನ್ನು ಹಿನ್ನಡೆ ಎಂದು ನಾನು ಭಾವಿಸಲ್ಲ. ಸೋಲಿಗೆ ಕಾರಣ ಹುಡುಕಿ ಸರಿಪಡಿಸಿಕೊಳ್ಳುತ್ತೇವೆ. ಆದರೆ, ಶಿಗ್ಗಾಂವಿ ಕ್ಷೇತ್ರ ಮಾತ್ರ ನಮಗೆ ಆಘಾತ ತಂದಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡಿದ್ದರು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಆದರೂ ಸೋಲಿಗೆ ಕಾರಣವೇನು? ಈ ಬಗ್ಗೆ ಚರ್ಚಿಸುತ್ತೇವೆ ಎಂದರು.

ಈ ಸುದ್ದಿಯನ್ನೂ ಓದಿ | DK Suresh: ವಿರೋಧ ಪಕ್ಷಗಳ ಸುಳ್ಳು ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಡಿ.ಕೆ. ಸುರೇಶ್

ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು; ಟಿವಿ ಒಡೆದು ಆಕ್ರೋಶ ಹೊರಹಾಕಿದ ಕಾರ್ಯಕರ್ತ!

ವಿಜಯಪುರ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದೆ. 3ಕ್ಕೆ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ ಕೈ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿಗಳು ಸೋತ ಹಿನ್ನೆಲೆಯಲ್ಲಿ ಬೇಸತ್ತ ಜಿಲ್ಲೆಯ (Karnataka bypoll results) ಬಿಜೆಪಿ ಕಾರ್ಯಕರ್ತರೊಬ್ಬರು, ಮನೆಯಲ್ಲಿನ ಟಿವಿ ಒಡೆದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಮೂರು ಕ್ಷೇತ್ರಗಳಲ್ಲೂ ಗೆಲುವು ಕಂಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇದರಿಂದ ಕೈ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ನಿರೀಕ್ಷೆ ಮಾಡದ ತೀರ್ಪನ್ನು ಮೂರು ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ್ದು, ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಬೈ ಎಲೆಕ್ಷನ್ ಫಲಿತಾಂಶವನ್ನು ಕೋಲ್ಹಾರ ಪಟ್ಟಣದ ಬಿಜೆಪಿ ಕಾರ್ಯಕರ್ತ ವೀರಭದ್ರಪ್ಪ ಬಾಗಿ ಎಂಬುವವರು ಬೆಳಗ್ಗೆಯಿಂದ ಟಿವಿಯಲ್ಲಿ ನೋಡುತ್ತಾ ಇದ್ದರು. ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ ಸೋಲುತ್ತಿದ್ದಂತೆ ಟಿವಿ ಒಡೆದು ರಾಜ್ಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಬೇಕು. ಬಿಜೆಪಿ ನಾಯಕರ ನಡುವಿನ ಒಡಕಿನಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬಂದಿದೆ. ಇದರಿಂದ ಕಾರ್ಯಕರ್ತರು ಬಲಿಪಶುಗಳಾಗುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಒಂದರಲ್ಲಾದರೂ ಗೆಲ್ಲಬೇಕಿತ್ತಲ್ಲವೇ? ಎಂದು ವೀರಭದ್ರಪ್ಪ ಬಾಗಿ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Bypoll Results: ಮುಡಾ, ವಾಲ್ಮೀಕಿ, ವಕ್ಫ್:‌ ಬಿಜೆಪಿಯ ಎಲ್ಲಾ ಅಸ್ತ್ರಗಳೂ ಕಾಂಗ್ರೆಸ್‌ ಮುಂದೆ ಟುಸ್!‌