ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ವಿಧಾನಸಭೆ (Assembly election) ಕ್ಷೇತ್ರಗಳ ಉಪಚುನಾವಣೆಗೆ (Karnataka Bypoll Results) ಮುನ್ನ ಹಲವಾರು ಹಗರಣ- ಆರೋಪ- ಆಪಾದನೆಗಳ ಮಹಾಸ್ತ್ರಗಳನ್ನೇ ಕಾಂಗ್ರೆಸ್ (Congress) ಮೇಲೆ ಬಿಜೆಪಿ (BJP) ಪ್ರಯೋಗಿಸಿತ್ತು. ಆದರೆ ಅದು ಯಾವುದೂ ಫಲ ನೀಡದೇ ಹೋಗಿವೆ. ಇದರಿಂದ ಪ್ರತಿಪಕ್ಷ ಬಿಜೆಪಿ ಅವಾಕ್ಕಾಗಿದ್ದು, ತಾನು ತಪ್ಪಿದ್ದು ಎಲ್ಲಿ ಎಂದು ಅವಡುಗಚ್ಚಿಕೊಂಡು ಆಲೋಚಿಸುವಂತಾಗಿದೆ.
ಮೊದಲನೆಯದಾಗಿ, ಮುಖ್ಯಮಂತ್ರಿಗಳ ಮೇಲೆ ಮುಡಾ ಹಗರಣದ ಆರೋಪದ ಬ್ರಹ್ಮಾಸ್ತ್ರವನ್ನೇ ಬಿಜೆಪಿ ಪ್ರಯೋಗಿಸಿತ್ತು. ಸಿಎಂ ರಾಜೀನಾಮೆಯನ್ನು ಆಪೇಕ್ಷಿಸಿತ್ತು. ಇದು ಸಿಎಂ ಅವರ ವರ್ಚಸ್ಸಿಗೆ, ಆ ಮೂಲಕ ಕಾಂಗ್ರೆಸ್‌ನ ಗೆಲುವಿಗೆ ಮಸಿ ಬಳಿಯಲಿದೆ ಎಂದುಕೊಂಡಿತ್ತು. ಆದರೆ ಸೂಕ್ತ ಕ್ಷಣದಲ್ಲೇ ಎಚ್ಚೆತ್ತುಕೊಂಡ ಸಿಎಂ ಅವರ ಪತ್ನಿ, ಮುಡಾ ನಿವೇಶನಗಳನ್ನು ವಾಪಸ್ ಮಾಡಿ ಬಿಜೆಪಿಯ ಗೆಲುವಿನ ಅಸ್ತ್ರವನ್ನೇ ಕಸಿದುಕೊಂಡರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಗರಣವನ್ನು ಕಾಂಗ್ರೆಸ್ ಸರಕಾರದ ಮೇಲೆ ಬಿಜೆಪಿ ಹಲವು ತಿಂಗಳಿನಿಂದ ಪ್ರಯೋಗಿಸುತ್ತ ಬಂದಿತ್ತು. ಈ ಹಗರಣದಲ್ಲಿ ಇಡಿ ಕೈ ಹಾಕಿದಾಗ ಅದರ ಆರೋಪಕ್ಕೆ ಇನ್ನಷ್ಟು ಬಲ ಬಂದಿತ್ತು. ಆದರೆ ಸಚಿವ ನಾಗೇಂದ್ರ ರಾಜೀನಾಮೆಯನ್ನು ಪಡೆದ ಸಿಎಂ, ವಾಲ್ಮೀಕಿ ವಿವಾದದಲ್ಲೂ ಪಾರಾದರು. ಅಲ್ಲೂ ತನಿಖೆಗೆ ಎಸ್‌ಐಟಿ ರಚಿಸಿದರು. ಹೀಗಾಗಿ ಇದನ್ನು ಇನ್ನಷ್ಟು ವಿಸ್ತರಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.
ಇಷ್ಟಾಗಿ ಬಿಜೆಪಿಗೆ ಕೊನೆಯ ಕ್ಷಣದಲ್ಲಿ ಸಿಕ್ಕದ್ದು ವಕ್ಫ್ ಅಸ್ತ್ರ. ವಕ್ಫ್ ಮಂಡಳಿಯಿಂದ ನೂರಾರು ರೈತರಿಗೆ ನೋಟೀಸ್ ಜಾರಿಯಾಗಿದ್ದು, ಅವರ ಪಹಣಿಗಳಲ್ಲಿ ವಕ್ಫ್ ಮಂಡಳಿ ಹೆಸರು ಕಂಡುಬಂದಿದೆ. ಇದರಿಂದ ವಿಜಯಪುರ, ಬೆಳಗಾವಿ, ಬೀದರ್ ಮುಂತಾದೆಡೆಗಳ ರೈತರು ದಿಗಿಲುಬಿದ್ದಿದ್ದರು. ಇದನ್ನು ಕೈಗೆತ್ತಿಕೊಂಡು ಬಿಜೆಪಿ ರಾಜ್ಯಾದ್ಯಂತ ವ್ಯಾಪಕ ಆಂದೋಲನ ಆರಂಭಿಸಿತ್ತು. ಆದರೆ ಇದರ ಪರಿಣಾಮ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಗಳ ಕಡೆಗೆ ಹಬ್ಬಲೇ ಇಲ್ಲ. ಮಾತ್ರವಲ್ಲ ಸಿಎಂ ಕೂಡಲೇ ಎಚ್ಚೆತ್ತು ನೋಟೀಸ್‌ಗಳನ್ನು ವಾಪಸ್ ಪಡೆಯುವ ಕ್ರಮಕ್ಕೆ ಚಾಲನೆ ನೀಡಿದರು. ಮತದಾರ ವಕ್ಫ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂಬಂತೆ ಕಾಣುತ್ತದೆ.
ಇದಲ್ಲದೇ ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಸಂಕಷ್ಟ ಅನುಭವಿಸಿತ್ತು. ಕಾಂಗ್ರೆಸ್‌ನ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದಿದ್ದರು. ಇಷ್ಟೆಲ್ಲ ಸವಾಲುಗಳ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳು ದಾಖಲೆಯ ಗೆಲುವು ದಾಖಲಿಸಿದ್ದಾರೆ.
ಕರ್ನಾಟಕದ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸುವುದಕ್ಕೆ ಮುಖ್ಯ ಕಾರಣ ಈ ಬಾರಿ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದು. ಈ ಬಾರಿಯ ಮೂರು ವಿಧಾನಸಭೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ನಾಯಕರು ಒಗ್ಗಟ್ಟಾಗಿದ್ದರು. ಮಂತ್ರಿಗಳನ್ನು ಜಿಲ್ಲಾವಾರು ನೇಮಿಸಿ ಅವರಿಗೆ ಸ್ಪೆಷಲ್ ಟಾಸ್ಕ್ ನೀಡಲಾಗಿತ್ತು. ರಾಜ್ಯದಲ್ಲಿನ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಹಾಗೂ ಸಚಿವರು ಈ ಬಾರಿ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ಮಾಡಿದರು. ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಇದ್ದರೂ, ಅದನ್ನು ಚುನಾವಣಾ ಪ್ರಚಾರಗಳಲ್ಲಿ ಇಲ್ಲವೇ ಚುನಾವಣೆ ಅಖಾಡದಲ್ಲಿ ಎಲ್ಲೂ ಪ್ರದರ್ಶಿಸಿರಲಿಲ್ಲ.
2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಚಿವರ ಮಕ್ಕಳಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ ಕೆಲವರು ಗೆದ್ದರೆ, ಇನ್ನೂ ಕೆಲವರು ಸೋತಿದ್ದರು. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿತ್ತು. ರಾಜ್ಯಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪುಲ್ ಕ್ಲಾಸ್ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದರು. ಈಗ ನೀಡಿರುವ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳೇ ಗೆಲುವಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕರ ಆಕ್ರೋಶ ಹಾಗೂ ಹೋರಾಟಗಳು, ಪ್ರತಿಭಟನೆಗಳ ನಡುವೆಯೂ ರಾಜ್ಯದ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಹಾಗೂ ಅವರ ಬೆಂಬಲಿಗರ ನೆರವು ಮಹತ್ವದ ಪರಿಣಾಮ ಬೀರಿದೆ. ಸಂಡೂರಿನಲ್ಲಿ ಇ ತುಕಾರಂ ಅವರ ಬೆಂಬಲಿಗರು, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಅವರ ಬೆಂಬಲಿಗರು ಹಾಗೂ ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಖಾನ್ ಅವರ ಬೆಂಬಲಿಗರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಅಮೋಘ ಬೆಂಬಲ ಇದೆ. ಇನ್ನು ಯಾಸಿರ್ ಅಹ್ಮದ್ ಖಾನ್ ಅವರಿಗೆ ಸಿಂಪತಿ ಹಾಗೂ ಮುಸ್ಲಿಂ ಸಮುದಾಯದ ಮತದಾರರು ಬೆಂಬಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: CM Siddaramaiah: ಕನ್ನಡಿಗರಿಗೆ ಕೇಂದ್ರದ ಅನ್ಯಾಯ; ಲೋಕಸಭೆಯಲ್ಲಿ ಸಂಸದರು ದನಿಯೆತ್ತಲಿ: ಸಿಎಂ ಸಿದ್ದರಾಮಯ್ಯ