Thursday, 12th December 2024

Karnataka bypolls: ರಾಜ್ಯದ 3 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಬಹಿರಂಗ ಪ್ರಚಾರ ಅಂತ್ಯ; ಇನ್ನೆರಡು ದಿನ ಮದ್ಯ ಮಾರಾಟ ಬಂದ್‌

Karnataka bypolls

ಬೆಂಗಳೂರು: ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ನ.13ರಂದು ಮತದಾನ (Karnataka bypolls) ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇನ್ನು ಮತದಾನದ ವೇಳೆ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ನ. 14ರ ಬೆಳಗ್ಗೆವರೆಗೆ ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಮೂರು ಪ್ರಮುಖ ಕ್ಷೇತ್ರಗಳ ಉಪಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ ಬಿದ್ದಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರೆಲ್ಲರೂ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ ಇದೀಗ ಅಲ್ಲಿಂದ ತೆರಳಿದ್ದಾರೆ. ಹಾಗಾಗಿ ನಾಳೆಯಿಂದ ಎರಡು ದಿನಗಳ ಕಾಲ ಮೂರು ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ಕಳೆದ ಹಲವು ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ನಾಯಕರ ನಡುವೆ ವಾಕ್ಸಮರ ತಾರಕಕ್ಕೆ ಏರಿತ್ತು. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇನ್ನು ನ. 13 ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್‌ ಮಾಡಲಾಗಿದೆ. ಸೋಮವಾರ ಸಂಜೆ 6 ಗಂಟೆಯಿಂದ ನ. 14 ರ ಬೆಳಗ್ಗೆ 6 ಗಂಟೆವರೆಗೂ ಮದ್ಯಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಹೀಗಾಗಿ ಕೆಲವೆಡೆ ಮದ್ಯಪ್ರಿಯರು ಇಂದು ಬಾರ್‌ಗಳಿಗೆ ಮುಗಿಬಿದ್ದು ಮದ್ಯ ಖರೀದಿಸಿದ್ದು ಕಂಡುಬಂದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರು ಸ್ಪರ್ಧಿಸುತ್ತಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಪಠಾಣ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಈ ಸುದ್ದಿಯನ್ನೂ ಓದಿ | BBMP Health Guidelines : ಮಳೆ ಬಂದ ಮೇಲೆ ಚುರುಕಾದ ಬಿಬಿಎಂಪಿ; ಪರಿಹಾರ ಕಾರ್ಯ ಆರಂಭ

ನಾವು ಅಪೂರ್ವ ಸಹೋದರರು; ಎಚ್‌.ಡಿ. ದೇವೇಗೌಡರಿಗೆ ಡಿ.ಕೆ. ಸುರೇಶ್ ತಿರುಗೇಟು

Channapatna By Election

ಬೆಂಗಳೂರು: ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ. ಜೆಡಿಎಸ್ ನಾಯಕರು ಮಕ್ಕಳು, ಮೊಮ್ಮಕ್ಕಳಿಗಾಗಿ ಮತ ಕೇಳುತ್ತಿದ್ದಾರೆ. ಅವರು ತಮ್ಮ ಕುಟುಂಬದ ಅಳಿವು-ಉಳಿವಿಗಾಗಿ ಮತ ಕೇಳುತ್ತಿದ್ದಾರೆ. ನಾವು ಚನ್ನಪಟ್ಟಣದ ಅಭಿವೃದ್ಧಿಗೆ ಮತ ಕೇಳುತ್ತಿದ್ದೇವೆ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ (DK Suresh) ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಅವರು ಮಾತನಾಡಿದರು.

ಡಿ.ಕೆ. ಸಹೋದರರು ಅಪೂರ್ವ ಸಹೋದರರು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ”ಅಪೂರ್ವ ಮಕ್ಕಳು, ಮೊಮ್ಮಕ್ಕಳು, ಅಪೂರ್ವ ಕುಮಾರಸ್ವಾಮಿ ಕುಟುಂಬ, ಎಚ್‌ಡಿಕೆ ಕುಟುಂಬ, ದೇವೇಗೌಡರ ಕುಟುಂಬ ಎಂದು ನಾವು ಹೇಳುವುದಾ? ನಾವು ಅಪೂರ್ವ ಸಹೋದರರೇ. ದೇವೇಗೌಡರ ಮೊಮ್ಮಕ್ಕಳ ಬಗ್ಗೆ ಎಳೆ, ಎಳೆಯಾಗಿ ಬಿಡಿಸಿ ಹೇಳಿದರೆ ಅವರಿಗೆ ನೋವಾಗುತ್ತದೆ. ತೀಕ್ಷವಾಗಿ ಮಾತನಾಡದೆ ಅವರ ವಯಸ್ಸಿಗೆ ಗೌರವ ಕೊಟ್ಟು ನಾವು ಮಾತನಾಡುತ್ತಿಲ್ಲ” ಎಂದರು.

ಈ ಸುದ್ದಿಯನ್ನೂ ಓದಿ | Pustaka Santhe: ಮೂರು ದಿನಗಳ ʼವೀರಲೋಕ ಪುಸ್ತಕ ಸಂತೆʼ ನ.15ರಿಂದ; ನೂರಾರು ಅಂಗಡಿ, 100 ಲೇಖಕರು

ಗ್ಯಾರಂಟಿಯಿಂದ ಅವರಿಗೆ ಹೊಟ್ಟೆಉರಿ

ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿಗಳನ್ನು ಸರ್ಕಾರ ನಿಲ್ಲಿಸುತ್ತದೆ ಎನ್ನುವ ಜೆಡಿಎಸ್ ಆರೋಪದ ಬಗ್ಗೆ ಕೇಳಿದಾಗ, ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಗ್ಯಾರಂಟಿ ಯೋಜನೆಗಳಿಂದ ಕಸಿವಿಸಿಯಾಗಿದೆ. ಅವರಿಗೆ ಗ್ಯಾರಂಟಿಗಳು ಬೇಡ ಎನ್ನಿಸಿದ್ದರೆ ನೇರವಾಗಿ ಗ್ಯಾರಂಟಿಗಳನ್ನು ನಿಲ್ಲಿಸಲಿ ಎಂದು ಜನರ ಮುಂದೆ ಹೇಳಲಿ. ಈಗಾಗಲೇ ಅನೇಕ ಬಾರಿ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿಸಿಎಂ, ಪಕ್ಷದ ರಾಷ್ಟೀಯ ಅಧ್ಯಕ್ಷರು, ರಾಹುಲ್ ಗಾಂಧಿ ಅವರು ಸ್ಪಷ್ಟ ಪಡಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಸುಳ್ಳು ಹೇಳಬಾರದು

ಕರ್ನಾಟಕದ ಭ್ರಷ್ಟಾಚಾರದ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎನ್ನುವ ಪ್ರಧಾನಿಗಳ ಆರೋಪದ ಬಗ್ಗೆ ಕೇಳಿದಾಗ, “ಪ್ರಧಾನಿ ಮೋದಿ ಅವರು ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿ. ಅವರು ಹೀಗೆ ಸುಳ್ಳು ಹೇಳಬಾರದು. ಜತೆಗೆ ಎಲ್ಲಾ ಏಜೆನ್ಸಿಗಳು ಅವರ ಕೈಯಲ್ಲಿ ಇರುವ ಕಾರಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ಆರೋಪವನ್ನು ಸ್ಪಷ್ಟಪಡಿಸಲಿ. ಕೇವಲ ಮಹಾರಾಷ್ಟ್ರ ಚುನಾವಣೆಗಾಗಿ ಪ್ರಧಾನಿಗಳಿಂದ ಈ ರೀತಿಯ ಆರೋಪವನ್ನು ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ನಾಲ್ಕುವರೇ ವರ್ಷಗಳ ಕಾಲ ಅವರೇ ಪ್ರಧಾನಿಗಳಾಗಿ ಇರುತ್ತಾರೆ. ಅವರು ಇಂತಹ ರಾಜಕೀಯ ಹೇಳಿಕೆ ನೀಡುವುದು ಶೋಭೆಯಲ್ಲ” ಎಂದರು.