Friday, 29th November 2024

Lakshadeepotsava: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ; ವೈಭವದಿಂದ ನಡೆದ ಶ್ರೀ ಮಂಜುನಾಥಸ್ವಾಮಿ ಲಲಿತೋದ್ಯಾನ ಉತ್ಸವ

ಬೆಳ್ತಂಗಡಿ: (lakshadeepotsava) ಶ್ರೀ ಕ್ಷೇತ್ರ ಧರ್ಮಸ್ಥಳ(Dharmasthala)ದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಮೂರನೇ ದಿನ ಗುರುವಾರ ರಾತ್ರಿ ಶ್ರೀ ಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನೆರವೇರಿತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಪಡೆದರು. ಗುರುವಾರ ರಾತ್ರಿ ದೇವರನ್ನು ಪಲ್ಲಕ್ಕಿಯಲ್ಲಿ ಲಲಿತೋದ್ಯಾನ ಉತ್ಸವಕ್ಕೆ ಮೆರವಣಿಗೆ ಮೂಲಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕರೆದೊಯ್ಯಲಾಯಿತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ದೇವಾಲಯದ ಒಳಗೆ ಸುತ್ತು ಬಲಿ ಉತ್ಸವದ ಬಳಿಕ ದೇವರನ್ನು ಶೃಂಗಾರಗೊಂಡ ಆನೆಗಳು ಚಾಮರ ಬೀಸುತ್ತಾ ದೇವರ ಉತ್ಸವಕ್ಕೆ ಮೆರಗು ನೀಡಿತು. ನಿಶಾನೆ, ಕೊಂಬು, ಕಹಳೆ, ಶಂಖ, ಸರ್ವ ವಾದ್ಯಘೋಷಗಳೊಂದಿಗೆ ಉತ್ಸವ ನಡೆಯಿತು.

ಲಲಿತೋದ್ಯಾನ ಉತ್ಸವ ನಡೆದ ಬಳಿಕ ದೇವಸ್ಥಾನಕ್ಕೆ ಮರಳಿದ ದೇವರನ್ನು ಬೆಳ್ಳಿರಥದಲ್ಲಿ ದೇವಸ್ಥಾನದ ಸುತ್ತ ಒಂದು ಸುತ್ತು ಉತ್ಸವ ನಡೆಯಿತು. ಭಕ್ತರು ರಥವನ್ನು ಭಕ್ತಿಭಾವದಿಂದ ಎಳೆಯುವ ಮೂಲಕ ಶ್ರೀದೇವರ ಕೃಪೆಗೆ ಪಾತ್ರರಾದರು. ಪೂಜ್ಯ ಖಾವಂದರ ಕುಟುಂಬಸ್ಥರು, ದೇವಳದ ಅರ್ಚಕ ವರ್ಗ, ಕ್ಷೇತ್ರದ ಸಿಬ್ಬಂದಿಗಳು, ಸಹಸ್ರಾರು ಸಂಖ್ಯೆಯ ಭಕ್ತಾಗಳು ಲಲಿತೋದ್ಯಾನ ಉತ್ಸವದಲ್ಲಿ ಭಾಗಿಯಾದರು.

ಇನ್ನು ನಾಳೆ ಲಕ್ಷ ದೀಪೋತ್ಸವ ನಡೆಯಲಿದ್ದು, ಲಕ್ಷಕ್ಕೂ ಮಿಕ್ಕಿ ಭಕ್ತರು ಬರುವ ನಿರೀಕ್ಷೆ ಇದೆ. ಹಾಗೇ ಭಕ್ತರಿಂದ ವೈವಿಧ್ಯಮಯ ಸೇವೆ ಇರಲಿದ್ದು, ರೈತರು ಶ್ರದ್ಧಾ-ಭಕ್ತಿಯಿಂದ ಹೂವು, ಹಣ್ಣುಹಂಪಲು, ಅಕ್ಕಿ-ತರಕಾರಿ, ಬೇಳೆಗಳು ಹಾಗೂ ದವಸಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಅಲಂಕಾರ ಸೇವೆ

ಬೆಂಗಳೂರು ಮಾರುಕಟ್ಟೆ ಹೂವಿನ ವ್ಯಾಪಾರಸ್ಥರ ಸಂಘದ ಶಿವಕುಮಾರ್ ನೇತೃತ್ವದಲ್ಲಿ ಡೆಕೊರೇರ‍್ಸ್ ಸಹಯೋಗದಲ್ಲಿ ವಿವಿಧ ಹೂವುಗಳು, ಹಣ್ಣುಗಳು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ, ಕಾರ್ಯಾಲಯಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಇದಕ್ಕಾಗಿ ತಲಾ ೩೦೦ ಕೆ.ಜಿ.ಯಷ್ಟು ಅನಾನಸು, ಸೇಬು, ದ್ರಾಕ್ಷಿ, ಕಬ್ಬು, ತೆಂಗಿನಕಾಯಿ, ಕಲ್ಲಂಗಡಿ ಬಳಸಲಾಗಿದೆ. ಲಿಲಿಯಂ, ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ ಎಂದು ಶಿವಕುಮಾರ್ ಪ್ರಜಾವಾಣಿಗೆ ತಿಳಿಸಿದ್ದಾರೆ. ಸುಮಾರು ಮುನ್ನೂರು ಜನರು ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು, ಇಂದು ಶನಿವಾರ ಲಕ್ಷದೀಪೋತ್ಸವಕ್ಕೆ ತಮ್ಮ ಉಚಿತ ಸೇವೆ ಎಂದು ಶಿವಕುಮಾರ್ ತಿಳಿಸಿದ್ದು, ಸುಮಾರು 10 ಲಕ್ಷ ರೂ. ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ.

ಭಾನುವಾರ ಪೂಜೆ

ಭಾನುವಾರ ಸಂಜೆ ಗಂಟೆ 6.30ರಿಂದ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿಯ ಶ್ರಾವಕರು, ಶ್ರಾವಕಿಯರು ಭಾಗವಹಿಸುವರು. ಬೆಂಗಳೂರಿನ ನವೀನ್ ಜಾಂಬಳೆ ತಂಡದ ಕಲಾವಿದರಿಂದ ಜಿನಗಾನೋತ್ಸವ ನಡೆಯಲಿದೆ.

ಈ ಸುದ್ದಿಯನ್ನು ಓದಿ:Dharmasthala Laksha Deepotsav: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ; ಇಂದು ಭಾವೈಕ್ಯ ಬೆಳೆಸುವ ಸರ್ವಧರ್ಮ ಸಮ್ಮೇಳನ