Saturday, 30th November 2024

Karnataka Rain: ಸೈಕ್ಲೋನ್‌ ಎಫೆಕ್ಟ್; ನಾಳೆ ಬೆಂಗಳೂರು, ಮಂಡ್ಯ, ಮೈಸೂರು ಸೇರಿ ಹಲವೆಡೆ ಜೋರು ಮಳೆ ನಿರೀಕ್ಷೆ

Karnataka Rain

ಬೆಂಗಳೂರು: ಫೆಂಗಾಲ್‌ ಚಂಡಮಾರುತ ಪ್ರಭಾವದಿಂದ ಚೆನ್ನೈ ಸೇರಿ ತಮಿಳುನಾಡಿನ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಸುರಿಯುತ್ತಿದೆ. ಸೈಕ್ಲೋನ್‌ ಹಿನ್ನೆಲೆ ರಾಜ್ಯದಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತ ಹವಾಮಾನ ಇಲಾಖೆ ನೀಡಿದ್ದು, ಡಿ. 1ರಂದು ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆ (Karnataka Rain) ಸುರಿಯುವ ಸಾಧ್ಯತೆ ಇದೆ.

ಇನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾನುವಾರ ಮಧ್ಯಮ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ರಾಜ್ಯದಲ್ಲಿ ಉಷ್ಣಾಂಶದಲ್ಲಿ 1-2 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅದೇ ರೀತಿ ಡಿ.2 ರಂದು ದಕ್ಷಿಣ ಒಳನಾಡಿನ ಕರ್ನಾಟಕದ ಜಿಲ್ಲೆಗಳ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದ ಸಾಧ್ಯತೆಯಿದೆ. ದಕ್ಷಿಣ ಒಳ ಕರ್ನಾಟಕದ ಚಾಮರಾಜನಗರ, ರಾಮನಗರ, ಮಂಡ್ಯ ಜಿಲ್ಲೆಗಳ ಮೇಲೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಹಾವೇರಿ, ಗದಗ, ಕೋಪಳ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

ಡಿ. 3ರಂದು ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆ ಪ್ರತ್ಯೇಕವಾದ ಭಾರಿ ಮಳೆಯಿಂದ ಅತಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನ ಹಾವೇರಿ, ಕೊಪ್ಪಳ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

ಡಿ.4ರಂದು ಕರಾವಳಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ರಾಮನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವಿರಲಿದೆ ಎಂದು ಮುನ್ಸೂಚನೆ ನೀಡಿದೆ.

ಡಿ.2ರ ಬೆಳಗ್ಗೆವರೆಗಿನ ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 24 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರಬಹುದು.

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 24 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರಬಹುದು.

ಈ ಸುದ್ದಿಯನ್ನೂ ಓದಿ | Fengal: ‘ಫೆಂಗಲ್‌ʼ ಚಂಡಮಾರುತ ಹಾವಳಿ: ತಮಿಳುನಾಡಿನಲ್ಲಿ ಭಾರೀ ಮಳೆ; ವಿಮಾನಗಳ ಹಾರಾಟ ರದ್ದು