Saturday, 23rd November 2024

Karnataka Rain: ಬೆಂಗಳೂರಲ್ಲಿ ಮುಂದುವರಿದ ಮಳೆ ಅಬ್ಬರ; ನಾಳೆವರೆಗೆ ದಕ್ಷಿಣ ಒಳನಾಡಿನಲ್ಲಿ ಆರೆಂಜ್‌ ಅಲರ್ಟ್‌

Karnataka Rain

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಹಲವೆಡೆ ಬುಧವಾರ ಕೂಡ ಮಳೆಯಾರ್ಭಟ (Karnataka Rain) ಮುಂದುವರಿದಿದೆ. ಇನ್ನು ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅ.17ರಂದು ಕೂಡ ಧಾರಾಕಾರ ಮಳೆ (Heavy Rain) ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ. ಅದೇ ರೀತಿ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗ ಹಾಗೂ ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಅ.17ರಂದು ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಅ.18ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಹವಾಮಾನ ಅ.22ರವರೆಗೆ ಮುಂದುವರಿಯಲಿದೆ.

ಮೀನುಗಾರರಿಗೆ ಎಚ್ಚರಿಕೆ
ಕರ್ನಾಟಕ ಕರಾವಳಿಯಲ್ಲಿ 35 ಕಿ.ಮೀ.ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಚಂಡಮಾರುತದ ವಾತಾವರಣವಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಸಾಧಾರಣದಿಂದ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 21° C ಮತ್ತು 19° C ಆಗಿರಬಹುದು.

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 23°C ಮತ್ತು 20°C ಆಗಿರಬಹುದು.