Saturday, 14th December 2024

Karnataka Rajyotsava Awards 2024: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ಸಾಧಕರ ಆಯ್ಕೆಗೆ ಸಮಿತಿ ರಚನೆ

Karnataka Rajyotsava Awards 2024

ಬೆಂಗಳೂರು: 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ (Karnataka Rajyotsava Awards) 69 ಮಂದಿ ಸಾಧಕರ ಆಯ್ಕೆ ಮಾಡಲು ರಾಜ್ಯ ಸರ್ಕಾರದಿಂದ ಸಮಿತಿ ರಚಿಸಲಾಗಿದೆ. ಕನ್ನಡ ಮತ್ತು ಸಂಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 50 ಸದಸ್ಯರ ಆಯ್ಕೆ ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದ್ದು, ಈ ಸಮಿಯು ಸಚಿವ ಶಿವರಾಜ ತಂಗಡಗಿ ನೇತೃತ್ವದ ಸಲಹಾ ಸಮಿತಿ‌ 36 ಸದಸ್ಯರು ಹಾಗೂ 13 ಪದನಿಮಿತ್ತ ಸದಸ್ಯರನ್ನು ಒಳಗೊಂಡಿದೆ.

ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವವರನ್ನು ಈ ಸಲಹಾ ಸಮಿತಿ‌ಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, ಸಂಗೀತ ನಿರ್ದೇಶಕ ಹಂಸಲೇಖ, ನಿವೃತ್ತ ಐಎಎಸ್ ಅಧಿಕಾರಿ ರವಿಕುಮಾರ್, ನಟ ರವಿಚಂದ್ರನ್, ಕಲಬುರಗಿಯ ರಂಜಾನ್ ದರ್ಗಾ, ಬರಹಗಾರ ಮತ್ತು ಪರಿಸರವಾದಿ ನಾಗೇಶ್ ಹೆಗಡೆ, ಕೃಷಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ, ಪತ್ರಕರ್ತ ಸಿದ್ದರಾಜು, ರಂಗಕರ್ಮಿ ಸಿ.ಬಸವಲಿಂಗಯ್ಯ, ಧಾರವಾಡದ ಹಿಂದೂಸ್ತಾನಿ ಗಾಯಕ ಪಂ.ಎಂ.ವೆಂಕಟೇಶ್ ಕುಮಾರ್, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಡಾ.ತಿಮ್ಮಪ್ಪ, ಕ್ರೀಡಾ ಪಟು ಎ.ಬಿ.ಸುಬ್ಬಯ್ಯ ಸೇರಿದಂತೆ ಇತರರು ಸಮಿತಿಯಲ್ಲಿದ್ದಾರೆ.

ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್‌ ಮೂಲಕ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ನೇತೃತ್ವದ ಈ ಸಲಹಾ ಸಮಿತಿ‌ ಮುಂದಿನ ವಾರದಿಂದಲೇ ಪರಿಶೀಲನೆ ನಡೆಸಲಿದೆ. 69ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಲೆ, ಸಾಹಿತ್ಯ, ಜಾನಪದ, ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಗೀತ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ 69 ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ | 14 Hours Work: ಐಟಿ-ಬಿಟಿ ಉದ್ಯೋಗಿಗಳ ಕೆಲಸದ ಅವಧಿ 14 ಗಂಟೆ ವಿಸ್ತರಣೆ; ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕಾರ್ಮಿಕ ಇಲಾಖೆ

ಈ ಬಾರಿಯೂ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್‌ https://sevasindhu.Karnataka.gov.in ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸೆ.30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಆಕಾಂಕ್ಷಿಗಳ ಪಟ್ಟಿ ಸಾವಿರದ ಗಡಿ ದಾಟಿದೆ. ಇದುವರೆಗೆ ಸುಮಾರು 1700ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.