Friday, 13th December 2024

ಸ್ವಚ್ಛ ನಗರಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಕಾರವಾರ

3 ಸ್ಟಾರ್‌ಗೆ ಪ್ರವೇಶಾವಕಾಶ ಪಡೆದಿರುವ ಕಾರವಾರ ನಗರಸಭೆ

ಕೇಂದ್ರ ವಸತಿ, ನಗರಾಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಮಾಹಿತಿ ಭರ್ತಿ

ವಿಶೇಷ ವರದಿ: ರವಿ ಗೌಡಾ

ಕಾರವಾರ: ಸ್ವಚ್ಛ ಭಾರತ್ ಮಿಶನ್ ಅಡಿಯಲ್ಲಿ ಕಾರವಾರ ನಗರಸಭೆಯು 3 ಸ್ಟಾರ್ ರೇಟಿಂಗ್‌ಗೆ ಪ್ರವೇಶಾವಕಾಶ ಪಡೆದು ಕೊಳ್ಳುವ ಮೂಲಕ ರಾಜ್ಯದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ದಾಪುಗಾಲಿಟ್ಟಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಸ್ವಚ್ಛ ನಗರಗಳಿಗೆ 7 ಸ್ಟಾರ್‌ಗಳವರೆಗೆ ಪ್ರವೇಶಾವಕಾಶ ನೀಡಲಾಗು ತ್ತದೆ. ಅಂತೆ, ನಗರದ ಸ್ವಚ್ಛತೆಗೆ ಕೈಗೊಂಡ ಕಾರ್ಯಗಳ ಬಗ್ಗೆೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ವೆಬ್‌ಸೈಟ್ ನಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿರುವ ಕಾರವಾರ ನಗರಸಭೆ, 3 ಸ್ಟಾರ್‌ಗೆ ಪ್ರವೇಶಾವಕಾಶ ಪಡೆದುಕೊಂಡಿದೆ.

ತ್ರಿ- ಸ್ಟಾರ್ ರೇಟಿಂಗ್ ಪ್ರವೇಶಾವಕಾಶ ಪಡೆಯಲು ಕಾರವಾರ ನಗರಸಭೆಯು ನಿರಂತರವಾಗಿ ಕೆಲಸ ಮಾಡಿದೆ. ಮುಖ್ಯವಾಗಿ ಇದಕ್ಕೆ ಸಾರ್ವಜನಿಕರ ಸಹಕಾರ, ನಗರಸಭೆಯ ಸದಸ್ಯರು, ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರ ಸಹಕಾರದೊಂದಿಗ ಜತೆಗೆ ನಗರದಲ್ಲಿ ಸ್ವಚ್ಛತೆಯಲ್ಲಿ ತೊಡಗಿ ಸುಂದರ ಕಾರವಾರನ್ನು ರೂಪಿಸುವ ಪಣವನ್ನು ತೊಟ್ಟು ಕಾರ್ಯ ನಿರತವಾಗಿರುವ ಪಹರೆ ವೇದಿಕೆ, ಬೆಟರ್ ಕಾರವಾರ ಸೇರಿದಂತೆ ಹಲವು ಸಂಘಟನೆಗಳ ಸಹಕಾರವೂ ಕಾರಣವಾಗಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಪ್ರಮುಖವಾಗಿ ಮುಂದಿನ ದಿನಗಳಲ್ಲಿ ಒಳಚರಂಡಿ ಸಮಸ್ಯೆ ಬಗೆಹರಿಸಲು, ನಗರದಲ್ಲಿ ಪ್ಲಾಸ್ಟಿಕನ್ನು ಕಟ್ಟುನಿಟ್ಟಾಗಿ ನಿಯಂತ್ರಣಕ್ಕೆ ತರಲು ಹೆಚ್ಚಿನ ಒತ್ತು ಕೊಡಲಾಗುತ್ತದೆ. ಕೊಡಬೇಕಾಗಿದೆ. ಕಾರವಾರವನ್ನು ಸ್ವಚ್ಛ, ಸುಂದರ ನಗರವನ್ನಾಗಿ
ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ಮಾಡಲು ಶ್ರಮ ವಹಿಸಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಆರ್.ಪಿ.ನಾಯ್ಕ ತಿಳಿಸಿದರು.

ಪಹರೆ ವೇದಿಕೆಯ ಕೊಡುಗೆ ಅಪಾರ ಕಾರವಾರ ನಗರಸಭೆ ಸ್ವಚ್ಛತೆಯಲ್ಲಿ 3 ಸ್ಟಾರ್ ರೇಟಿಂಗ್‌ಗೆ ಪ್ರವೇಶಾವಕಾಶ ಪಡೆಯಲು ನಗರದಲ್ಲಿ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪಹರೆ ವೇದಿಕೆಯ ಕೊಡುಗೆಯೂ ಅಪಾರ
ಎಂದು ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರ ಮಾತಾಗಿದೆ. ಕಳೆದ ಆರು ವರ್ಷದಿಂದ ಪ್ರತಿ ಶನಿವಾರ ಒಂದು ಗಂಟೆಗಳ ಅವಧಿಯಲ್ಲಿ ನಗರದಲ್ಲಿ ಸ್ವಚ್ಛತೆ ನಡೆಸುತ್ತಿದ್ದು, ನಗರದ ಕಡಲತೀರ, ರಸ್ತೆಗಳು, ದೇವಸ್ಥಾನ, ಸರ್ಕಾರಿ ಕಚೇರಿ, ಪಾರ್ಕ್, ಬಸ್ ನಿಲ್ದಾಣ ಸೇರಿದಂತೆ ಹತ್ತು ಹಲವು ಪ್ರದೇಶದಲ್ಲಿ ಸ್ವಚ್ಛತೆ ಮಾಡುವುದರ ಜತೆಗೆ ಜನರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಪಹರೆ ವೇದಿಕೆ ಮಾಡುತ್ತಾ ಬಂದಿದೆ.

ಜತೆಗೆ ಗಣ್ಯ ವ್ಯಕ್ತಿಗಳನ್ನ ಕರೆಸಿ ಸ್ವಚ್ಛತೆ ಮಾಡಿಸುವ ಮೂಲಕ ಇತರರಿಗೂ ಮಾದರಿಯಾಗುವಂತೆ ಮಾಡುತ್ತಿದ್ದು, ಇದರ ಪರಿಣಾಮ ನಗರದಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದ್ದು, ನಗರಸಭೆ 3 ಸ್ಟಾರ್‌ಗೆ ಪ್ರವೇಶಾವ ಕಾಶ ಪಡೆಯಲು ಪಹರೆ ಸಂಘಟನೆಯ ಕೊಡುಗೆಯ ಬಗ್ಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

***

ಮುಂದಿನ ಮೂರು ವರ್ಷಗಳಲ್ಲಿ ನಗರಸಭೆ 5 ಸ್ಟಾರ್‌ಗೆ ಪ್ರವೇಶಾವಕಾಶ ಪಡೆಯಲು ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಹೆಚ್ಚು ಗಿಡಗಳನ್ನ ಬೆಳೆಸಲು ಒತ್ತು ಕೊಡಲಾಗುವುದು. ಅಲ್ಲದೇ ತೆರೆದ ಚರಂಡಿಗಳ ಮೇಲೆ ಸ್ಲ್ಯಾಬ್‌ಗಳನ್ನ ಹಾಕಲಾ ಗಿದ್ದು, ಜನರು ಕಸವನ್ನ ಎಲ್ಲೆಂದರಲ್ಲಿ ಎಸೆಯುವುದಕ್ಕೆ ಸಂಪೂರ್ಣ ನಿಯಂತ್ರಣ ತರುವ ಪ್ರಯತ್ನದಲ್ಲಿದ್ದೇವೆ.

-ಆರ್. ಪಿ. ನಾಯ್ಕ ಪ್ರಭಾರಿ ಪೌರಾಯುಕ್ತರು, ನಗರಸಭೆ ಕಾರವಾರ