Thursday, 3rd October 2024

KAS Exam: ಶೀಘ್ರದಲ್ಲೇ ಕೆಎಎಸ್‌ ಪ್ರಿಲಿಮ್ಸ್ ಮರು ಪರೀಕ್ಷೆ; ಕಾನ್‌ಸ್ಟೇಬಲ್‌ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆಗೆ ಸಿಎಂ ಸೂಚನೆ

KAS Exam

ಮೈಸೂರು: ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ (KAS Exam) ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡ ಭಾಷಾಂತರದಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಎರಡು ತಿಂಗಳಲ್ಲಿ ಮರು ಪರೀಕ್ಷೆ ನಡೆಸುವಂತೆ ಸಿಎಂ ಸೂಚಿದ್ದರು. ಇದೀಗ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟೂ ಶೀಘ್ರದಲ್ಲೇ ನಡೆಸುವಂತೆ ಕೆಪಿಎಸ್‌ಸಿಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೇ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೂ ವಯೋಮಿತಿ ಸಡಿಲಿಕೆ ಮಾಡಲು ಸೂಚಿಸಿರುವುದಾಗಿ ಹೇಳಿದ್ದಾರೆ.

ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ ಒಂದು ಬಾರಿ ಅನ್ವಯವಾಗುವಂತೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಆದರೆ, ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಎಲ್ಲಾ ರಾಜ್ಯಗಳಲ್ಲೂ ಗರಿಷ್ಠ ವಯೋಮಿತಿ 30ರಿಂದ 35 ವರ್ಷದವರೆಗೆ ಇದೆ. ನಮ್ಮ ರಾಜ್ಯದಲ್ಲಿ ಮಾತ್ರ 27 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಹೀಗಾಗಿ ಸಾಮಾನ್ಯ ವರ್ಗಕ್ಕೆ 30, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 33 ವರ್ಷಕ್ಕೆ ಏರಿಕೆ ಮಾಡಬೇಕು ಎಂದು ಕಾನ್‌ಸ್ಟೇಬಲ್‌ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಕಾನ್‌ಸ್ಟೇಬಲ್ ಹುದ್ದೆಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ 27 ರಿಂದ 33 ವರ್ಷಕ್ಕೆ ವಯೋಮಿತಿ ಸಡಿಲಿಕೆ ಮಾಡಲು ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

ಸಾಹಿತಿ ಹಂ.ಪಾ.ನಾಗರಾಜಯ್ಯ ದಸರಾ ಉದ್ಘಾಟಕರು

ಹೆಸರಾಂತ ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇನ್ನು ಶಾಸಕ ಮುನಿರತ್ನ ಅವರ ಮೇಲೆ ಮೇಲಿನ ಮೂರು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಎಸ್.ಐ ಟಿಗೆ ವಹಿಸಬೇಕೆಂದು ಇಂದು ತಮ್ಮನ್ನು ಒಕ್ಕಲಿಗ ಸಚಿವರು ಹಾಗೂ ಶಾಸಕರು ಭೇಟಿಯಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಅರವತ್ತು ಸಾವಿರ ಗಣೇಶ ಪ್ರತಿಷ್ಠಾಪನೆ

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಾರಿ ಅರವತ್ತು ಸಾವಿರ ಗಣೇಶಗಳ ಪ್ರತಿಷ್ಠಾಪನೆಯಾಗಿತ್ತು. ದಾವಣಗೆರೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ನಾಗಮಂಗಲದಲ್ಲಿ ಗಲಭೆ ನಡೆದಿದೆ. ಇಲ್ಲಿ ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿದ್ದು, ಡಿ.ವೈ.ಎಸ್.ಪಿ ಅವರನ್ನು ಅಮಾನತು ಮಾಡಲಾಗಿದೆ. ಕೋಮು ಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದರು.

ಡಿನೋಟಿಫೈ ಪ್ರಕರಣಕ್ಕೆ ಲೋಕಾಯುಕ್ತ ತನಿಖೆ ಬಗ್ಗೆ ಪರಿಶೀಲನೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪರವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2021 ರಿಂದ ಲೋಕಾಯುಕ್ತದವರು ತನಿಖೆ ನಡೆಸದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನೆನ್ನೆ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಸೇರಿ ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆಬಾಳುವಂಥದ್ದಾಗಿದ್ದು, ಕುಮಾರಸ್ವಾಮಿಯವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿ , ಜಿಪಿಓ ಆಗಿದೆ. ಅಧಿಕಾರಿಗಳು ಈ ಕ್ರಮವನ್ನು ಕಾನೂನಾತ್ಮಕವಲ್ಲವೆಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು.

ಈ ಸುದ್ದಿಯನ್ನೂ ಓದಿ | Mysuru Dasara 2024: ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಈ ಬಾರಿಯ ದಸರಾ ಉದ್ಘಾಟಕರು

ಸರ್ಕಾರ ಯಾರ ಮೇಲೂ ಆರೋಪ ಮಾಡುವುದಿಲ್ಲ

ವಿಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಸರ್ಕಾರದ ಮೇಲೆ ಆರೋಪ ಹೊರಸುತ್ತಿವೆಯೇ ಎಂಬ ಮಾಧ್ಯಮದವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿ, ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿಯವರು ಎಂದಿಗೂ ಹಿಟ್ ಎಂಡ್ ರನ್ ಮಾಡುವವರಾಗಿದ್ದು, ಯಾವ ಆರೋಪಕ್ಕೂ ತಾರ್ಕಿಕ ಅಂತ್ಯ ಕಾಣಿಸುವುದಿಲ್ಲ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಷಯದ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದರು.