ಕೊಲ್ಹಾರ: ಕೊಲ್ಹಾರ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ಕೊಲ್ಹಾರ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕೊಲ್ಹಾರ ಪಟ್ಟಣ ಮುಳುಗಡೆಯಾಗಿ ಅಭಿವೃದ್ಧಿ ಯಿಂದ ವಂಚಿತವಾಗಿತ್ತು ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣವನ್ನು ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೆನೆ ಸಾಕಷ್ಟು ಅನುದಾನ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದೆನೆ ಎಂದು ಅವರು ಹೇಳಿದರು.
ತಮ್ಮ ಅಧಿಕಾರ ಅವದಿಯಲ್ಲಿ ಮಾಡಿರುವಂತಹ ಕಾಮಗಾರಿಗಳ ಬಗ್ಗೆ ಸವಿವರ ಮಾಹಿತಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಬಾರಖೇಡ ಬೀಳಗಿ ರಾಜ್ಯ ಹೆದ್ದಾರಿ ಮರು ಡಾಂಬರಿಕರಣ ಪೂಜಾ ಕಾರ್ಯಕ್ರಮ, 14 ಮತ್ತು 15 ನೇ ಪ.ಪಂ ನಿಧಿಯಲ್ಲಿ ಖರಿದಿಸಿದ ಆಟೋ ಟಿಪ್ಪರ್, 3000 ಲೀಟರ್ ಸಾಮರ್ಥ್ಯದ ಸಕ್ಕಿಂಗ್ ಮಶೀನ್ ಮತ್ತು ಟ್ರ್ಯಾಕ್ಟರ್ ಉದ್ಘಾಟನೆ, ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶಪತ್ರ ವಿತರಣೆ, ನಬಾರ್ಡ್ ಆರ್.ಆಯ್.ಡಿ.ಎಫ್ ಬ್ರ್ಯಾಂಚ್ 25 ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಪಶು ಆಸ್ಪತ್ರೆ ಕಟ್ಟಡದ ಉದ್ಘಾಟನೆ ಮಾಡಿದರು.
ಕೊಲ್ಹಾರ ಪಟ್ಟಣಕ್ಕೆ 23 ಕೋಟಿ ಅನುದಾನ ತಂದಿದ್ದು ಶೀಘ್ರದಲ್ಲಿಯೇ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಜೊತೆಗೆ ಮಿನಿ ವಿಧಾನಸೌಧ ಕೂಡ ನಿರ್ಮಿಸಲು ಪ್ರಯತ್ನಿಸಲಾಗುವುದು, ವಿಶೇಷವಾಗಿ 500 ಮನೆಗಳನ್ನು ಮಂಜೂರು ಮಾಡಿಕೊಂಡು ಬರಲಾಗಿದೆ ಒಟ್ಟಾರೆ ಕೊಲ್ಹಾರ ಪಟ್ಟಣವನ್ನು ಮಾದರಿಯ ತಾಲ್ಲೂಕನ್ನಾಗಿ ರೂಪಿಸಲು ಶ್ರಮಿಸಲಾಗುವುದು ಎಂದು ಶಾಸಕರು ಹೇಳಿದರು.
ಸುಳ್ಳು ಹೇಳುವವರ ಮಾತಿಗೆ ಕಿವಿಯಾಗದಿರಿ: ಕೋಟ್ಯಾಂತರ ರೂಪಾಯಿ ವೆಚ್ಚದ ಒಳಚರಂಡಿ ಕಾಮಗಾರಿ ಪೂರ್ಣ ಗೊಂಡಿದ್ದು ಸಂಪರ್ಕ ಪಡೆಯಲು ನಿಗದಿಪಡಿಸಿದ ದರ ಅಲ್ಪಸ್ವಲ್ಪ ಇರಬಹುದು, ಅದನ್ನು ಭರಣ ಮಾಡಿ ಸಂಪರ್ಕ ಪಡೆದು ಕೊಳ್ಳಿ ಅದಕ್ಕೂ ಕೂಡ ಕೆಲವರು ಸುಖಾಸುಮ್ಮನೆ ಏನಾದರೂ ಹೇಳಿ ನಿಮ್ಮ ದಾರಿತಪ್ಪಿಸುವ ಕೆಲಸ ಮಾಡುತ್ತಾರೆ ಅಂತಹವರ ಮಾತು ಕೇಳಿದಿರಿ ಎಂದು ಹೇಳಿದರು.
ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಸಾನಿಧ್ಯ ವಹಿಸಿದ್ದರು, ತಹಶಿಲ್ದಾರ ಪಿ.ಜಿ ಪವಾರ್, ಪ.ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್ ಪಠಾಣ ಇತರರು ವೇದಿಕೆಯ ಮೇಲಿದ್ದರು.