ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ಡಿಸೆಂಬರ್ 29, 2024 ರಂದು ನಡೆಸಲು ಉದ್ದೇಶಿಸಿರುವ ಕೆಎಎಸ್-ಗೆಜೆಟೆಡ್ ಪ್ರೊಬೇಷನರ್ (Gazetted Probationers) ಹುದ್ದೆಗಳ ಪೂರ್ವಭಾವಿ (Prelims) ಮರುಪರೀಕ್ಷೆ ಸಂಬಂಧ, ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ(KPSC Prelims Re-Exam).
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ದಿನಾಂಕ 26-2-2024 ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸದರಿ ಕೆಎಎಸ್ ಹುದ್ದೆಗಳಿಗೆ ಪೂರ್ವಭಾವಿ ಮರುಪರೀಕ್ಷೆಯನ್ನು ಈಗ ದಿನಾಂಕ 29-12-2024 ರಂದು ನಡೆಸಲು ನಿಗದಿಪಡಿಸಿರುತ್ತದೆ.
ತಾಂತ್ರಿಕ ದೋಷದಿಂದ 26-11-2024 ರಂದು ಆಯೋಗದ ಅಫಿಶಿಯಲ್ ವೆಬ್‌ಸೈಟ್ ನಲ್ಲಿ ಪ್ರವೇಶ ಪತ್ರ ಬಿಡುಗಡೆಯಾಗಿತ್ತು. ಈ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿರುತ್ತಾರೆಂದು ತಿಳಿದುಬಂದಿದ್ದು, ಎಲ್ಲ ಅಭ್ಯರ್ಥಿಗಳಿಗೆ ಈಗ ಕೆಪಿಎಸ್‌ಸಿ ಆಯೋಗವು ಪ್ರಮುಖ ಸೂಚನೆಯನ್ನು ನೀಡಿದೆ. ಆಯೋಗವು ದಿನಾಂಕ 29-12-2024 ರ ಪೂರ್ವಭಾವಿ ಮರುಪರೀಕ್ಷೆಯ ಸಂಬಂಧ ಯಾವುದೇ ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಇನ್ನು ಅಧಿಕೃತವಾಗಿ ಬಿಡುಗಡೆ ಮಾಡಿರುವುದಿಲ್ಲ. ಆದ್ದರಿಂದ ತಾಂತ್ರಿಕ ದೋಷದಿಂದಾಗಿ (Technical Issue) ಪ್ರಸ್ತುತ ಡೌನ್‌ಲೋಡ್ ಮಾಡಿಕೊಂಡಿರುವ ಪ್ರವೇಶ ಪತ್ರಗಳನ್ನು ಅಸಿಂಧುಗೊಳಿಸಿದ್ದು, ಸದರಿ ಪ್ರವೇಶ ಪತ್ರವು ಮುಂದೆ ನಡೆಯುವ ಪರೀಕ್ಷೆಗೆ ಮಾನ್ಯವಲ್ಲ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳಿಗೆ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಕುರಿತು ಮುಂದಿನ ದಿನಗಳಲ್ಲಿ ಪ್ರಕಟಣೆ ಜತೆಗೆ, ಅಧಿಕೃತ ಲಿಂಕ್ ಅನ್ನು ನೀಡಲಾಗುವುದು ಎಂದು ತಿಳಿಸಿದೆ.
ಕೆಪಿಎಸ್‌ಸಿ ಮತ್ತೆ ಪ್ರವೇಶ ಪತ್ರ ಬಿಡುಗಡೆ ಮಾಡಿದ ನಂತರ, ಅಭ್ಯರ್ಥಿಗಳು ತಮ್ಮ ಲಾಗಿನ್ ಮೂಲಕ ತಮ್ಮ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಗಸ್ಟ್ 27 ರಂದು ಈ ಹಿಂದೆ ಕೆಪಿಎಸ್‌ಸಿ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯನ್ನು ನಡೆಸಿದ್ದು, ಅಂದು ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಲವು ಲೋಪದೋಷಗಳಿಂದ ಕೂಡಿದ್ದ ಕಾರಣ, ಹಲವು ಅಭ್ಯರ್ಥಿಗಳು ಸಿಎಂ ಗೆ ಮರುಪರೀಕ್ಷೆಗೆ ಕೋರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಮರುಪರೀಕ್ಷೆಗೆ ಆದೇಶ ನೀಡಿದ್ದರು.
ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಈ ಹಿಂದೆಯೇ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಹಲವು ದೋಷಗಳ ಕಾರಣ, ಈಗ ಡಿಸೆಂಬರ್ 29 ಕ್ಕೆ ಮರುಪರೀಕ್ಷೆಯನ್ನು ಕೆಪಿಎಸ್‌ಸಿ ನಿಗದಿ ಮಾಡಿದೆ. ಈ ಮಧ್ಯೆಯೇ ಮರುಪರೀಕ್ಷೆ ಪ್ರಶ್ನಿಸಿ ಕೆಲವರು ಹೈಕೋರ್ಟ್‌ನ ಬೇರೆ ಬೇರೆ ನ್ಯಾಯಪೀಠಗಳಲ್ಲಿ ಸಲ್ಲಿಸಿರುವ ಅರ್ಜಿಗಳು, ಮರುಪರೀಕ್ಷೆಯ ತಡೆಯಾಜ್ಞೆ ಆದೇಶ- ಇವೆಲ್ಲವನ್ನು ತೆರೆವುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಕೆಪಿಎಸ್‌ಸಿ ಸಿದ್ಧತೆ ಮಾಡಿಕೊಂಡಿದೆ. ಡಿಸೆಂಬರ್ 09 ರಂದು ವಿಚಾರಣೆಗೆ ಬರಲಿದ್ದು, ಅಂದೇ ಈ ಕುರಿತು ಸ್ಪಷ್ಟ ಚಿತ್ರಣವು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
3 ಹಂತದ ಪರೀಕ್ಷೆಗಳು
ಹಂತ 1 – ಪೂರ್ವಭಾವಿ ಪರೀಕ್ಷೆ : 2 ಪತ್ರಿಕೆಗಳಿದ್ದು, 400 ಅಂಕಗಳಿಗೆ ಪರೀಕ್ಷೆ
ಹಂತ 2 – ಮುಖ್ಯ ಪರೀಕ್ಷೆ: ಕಡ್ಡಾಯ ಪತ್ರಿಕೆಗಳು 2, ಐಚ್ಛಿಕ ಪತ್ರಿಕೆಗಳು 5.
ಹಂತ 3 – ವ್ಯಕ್ತಿತ್ವ ಪರೀಕ್ಷೆ : 50 ಅಂಕಗಳಿಗೆ
ಈ ಸುದ್ದಿಯನ್ನೂ ಓದಿ: VAO Exam 2024: ಗ್ರಾಮಾಡಳಿತ ಅಧಿಕಾರಿ ನೇಮಕಾತಿ; ಕಡ್ಡಾಯ ಕನ್ನಡ ಪರೀಕ್ಷೆ ಕೀ ಉತ್ತರ ಪ್ರಕಟ