Wednesday, 11th December 2024

KPSC Recruitment: 945 ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆ ನೇಮಕಾತಿ; ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಂದೂಡಿಕೆ

KPSC Recruitment

ಬೆಂಗಳೂರು: ಕೃಷಿ ಇಲಾಖೆಯಲ್ಲಿನ (Department of Agriculture) 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿ (ಗ್ರೂಪ್ ಬಿ) ಹುದ್ದೆಗಳ ಭರ್ತಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿದೆ. ಈ ಹುದ್ದೆಗಳಿಗೆ ಅ.7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಆದರೆ, ಮೀಸಲಾತಿ ಪರಿಷ್ಕರಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಕೆಪಿಎಸ್‌ಸಿ (KPSC Recruitment) ತಿಳಿಸಿದೆ.

ಈ ಬಗ್ಗೆ ಕೆಪಿಎಸ್‌ಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2024ರ ಸೆ.20ರ ಅಧಿಸೂಚನೆ ಅನ್ವಯ ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ 672+273 ಹುದ್ದೆಗಳಿಗೆ ಅಧಿಸೂಚನೆ ಜಾರಿ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ ಅ. 7 ಎಂದು ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರವು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು 2024 ಅನ್ನು ರಚಿಸಿದ್ದು, ಅದರಲ್ಲಿ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರಲ್ಲಿನ ನಿಯಮ 9ಕ್ಕೆ ಮಾಡಿರುವ ತಿದ್ದುಪಡಿಯಲ್ಲಿ ಗ್ರೂಪ್-ಎ, ಬಿ, ಸಿ ಮತ್ತು ಡಿ ವೃಂದದಡಿ ಮಾಡುವ ನೇರ ನೇಮಕಾತಿ ಹುದ್ದೆಗಳಲ್ಲಿ ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಶೇಕಡ 2ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಆದೇಶಿಸಿದೆ.

ಹೀಗಾಗಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೂ ಕ್ರೀಡಾ ಮೀಸಲಾತಿಯನ್ನು ಅಳವಡಿಸಿಕೊಳ್ಳಬೇಕಾಗಿರುವುದರಿಂದ ದಿನಾಂಕ: 7-10-2024ರಿಂದ ಪ್ರಾರಂಭಿಸಬೇಕಿದ್ದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದೆ.

Job News: 50,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಸಲ್ಲಿಸಿ

ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ವಿವರ

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಒಟ್ಟು 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನೊಳಗೊಂಡ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ (Department of Agriculture) ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ, ಅರ್ಜಿ ಶುಲ್ಕ, ವಯೋಮಿತಿ ಸೇರಿ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ಹೆಸರು: ಕೃಷಿ ಅಧಿಕಾರಿ+ ಸಹಾಯಕ ಕೃಷಿ ಅಧಿಕಾರಿ
ಇಲಾಖೆ ಹೆಸರು: ಕೃಷಿ ಇಲಾಖೆ
ಒಟ್ಟು ಹುದ್ದೆಗಳ ಸಂಖ್ಯೆ: 945 ಗ್ರೂಪ್ ಬಿ
ಉಳಿಕೆ ಮೂಲ ಮೂಲವೃಂದ: ಕೃಷಿ ಅಧಿಕಾರಿ 86 + ಸಹಾಯಕ ಕೃಷಿ ಅಧಿಕಾರಿ 586
ಹೈದರಾಬಾದ್‌ ಕರ್ನಾಟಕ: ಕೃಷಿ ಅಧಿಕಾರಿ 42 + ಸಹಾಯಕ ಕೃಷಿ ಅಧಿಕಾರಿ 231

ವೇತನ ಶ್ರೇಣಿ:
ಕೃಷಿ ಅಧಿಕಾರಿ: 43,100-83,900 ರೂ.
ಸಹಾಯಕ ಕೃಷಿ ಅಧಿಕಾರಿ: 40,900- 78,200 ರೂ.

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ: 600 ರೂ.
ಪ್ರವರ್ಗ 2ಎ, 2ಬಿ, 3ಎ, 3ಬಿ (ಒಬಿಸಿ): 300 ರೂ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50 ರೂ.
ಎಸ್‌ಸಿ, ಎಸ್‌ಟಿ, ಪ್ರವರ್ಗ-1, ವಿಶೇಷ ಚೇತನರು: ಶುಲ್ಕ ವಿನಾಯಿತಿ

ಶೈಕ್ಷಣಿಕ ವಿದ್ಯಾರ್ಹತೆ
ಕೃಷಿ ಅಧಿಕಾರಿಗಳು+ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು. ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಸಹ ಪರಿಗಣಿಸಲಾಗುವುದಿಲ್ಲ.

ಶೇ. 85 ಹುದ್ದೆಗಳಿಗೆ: ಬಿ.ಎಸ್ಸಿ ಕೃಷಿ ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ಪದವಿ ಉತ್ತೀರ್ಣರಾಗಿರಬೇಕು.

ಶೇ. 15 ರಷ್ಟು ಹುದ್ದೆಗಳಿಗೆ:
1) ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ
2) ಬಿ.ಟೆಕ್ (ಆಹಾರ ತಂತ್ರಜ್ಞಾನ) ಅಥವಾ
3) ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಅಥವಾ
4) ಬಿ.ಎಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ ಅಥವಾ
5) ಬಿ.ಎಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್ ಅಥವಾ
6) ಬಿ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) ಅಥವಾ
7) ಬಿಟೆಕ್ (ಜೈವಿಕ ತಂತ್ರಜ್ಞಾನ) ಅಥವಾ
8) ಬಿ.ಎಸ್ಸಿ (ಅಗ್ರಿಕಲ್ಚರಲ್ ಎಂಜಿನಿಯರಿಂಗ್) ಅಥವಾ
9) ಬಿ.ಟೆಕ್ (ಅಗ್ರಿಕಲ್ಚರಲ್ ಎಂಜಿನಿಯರಿಂಗ್).

ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ – 18 ವರ್ಷ ವಯೋಮಾನದವರಾಗಿರಬೇಕು. ಇನ್ನು ರಾಜ್ಯ ಸರ್ಕಾರವು ಸೆ.10ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯಿಸುವಂತೆ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆ ನೀಡಿರುತ್ತದೆ. ಅದನ್ನು ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಸಾಮಾನ್ಯ ಅರ್ಹತೆ: 38 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ: 41 ವರ್ಷ
ಪ.ಜಾ, ಪ.ಪಂ, ಪ್ರವರ್ಗ-1: 43 ವರ್ಷ

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ, ಪಠ್ಯಕ್ರಮ ಸೇರಿ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ