Friday, 13th December 2024

Krishnam Pranaya Sakhi: ಕೃಷ್ಣಂ ಪ್ರಣಯ ಸಖಿ 50ರ ಸಂಭ್ರಮದಲ್ಲಿ ಹೀರೋಗಳಿಗೆ ಗಣೇಶ್ ಸ್ಪೆಷಲ್‌ ಸಂದೇಶ!

Krishnam Pranaya Sakhi Movie

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಡಗರ (Mysuru Dasara 2024) ಒಂದು ಕಡೆಯಾದರೆ, ಅಲ್ಲಿನ ವುಡ್‌ಲ್ಯಾಂಡ್ಸ್ ಚಿತ್ರಮಂದಿರದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ (Krishnam Pranaya Sakhi Movie) ಐವತ್ತನೇ ದಿನದ ಸಂಭಮ. ಈ ಸಂಭ್ರಮವನ್ನು ಸಂಭ್ರಮಿಸಲು ಸುಂದರ ಸಮಾರಂಭವನ್ನು ಆಯೋಜಿಸಿ, ಗೆಲುವಿಗೆ ಕಾರಣರಾದ ಚಿತ್ರತಂಡದವರನ್ನು ನಿರ್ಮಾಪಕರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸೇರಿದಂತೆ ಚಿತ್ರತಂಡದ ಸದಸ್ಯರು ಮಾತನಾಡಿದರು.

ಚಿತ್ರಮಂದಿರಗಳು ದೇವಸ್ಥಾನ ಇದ್ದ ಹಾಗೆ. ಅಲ್ಲಿಗೆ ಬರುವ ಪ್ರೇಕ್ಷಕರು ದೇವರುಗಳು ಎಂದು ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಪ್ರೇಕ್ಷಕರ ಮನ ಗೆದ್ದರೆ, ನಾವು ಗೆದ್ದ ಹಾಗೆ. ಐದು ದಿನ, ಏಳು ದಿನ ಅಂತ ಲೆಕ್ಕ ಹಾಕುತ್ತಿರುವ ಈ ಸಂದರ್ಭದಲ್ಲಿ ಚಿತ್ರವೊಂದು ಐವತ್ತು ದಿನಗಳು ಪೂರೈಸಿರುವುದು ಸುಲಭದ ಮಾತಲ್ಲ. ಈ ಗೆಲುವನ್ನು ನಾನು ಕನ್ನಡ ಕಲಾಭಿಮಾನಿಗಳಿಗೆ ಅರ್ಪಿಸುತ್ತೇನೆ. ನಿರ್ದೇಶಕರಿಗೆ, ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಚಿತ್ರದ ಮೊದಲ ಹಾಡು ಮೈಸೂರಿನಲ್ಲೇ ಬಿಡುಗಡೆಯಾಗಿತ್ತು. ಆಗ ನಾನು ಹೇಳಿದ್ದೆ. ಐವತ್ತನೇ ದಿನದ ಸಮಾರಂಭವನ್ನು ಮೈಸೂರಿನಲ್ಲೇ ಮಾಡೋಣ ಅಂತ. ಆ ಮಾತು ನಿಜವಾಗಿರುವುದಕ್ಕೆ ಖುಷಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಗಣೇಶ್‌, ಕನ್ನಡದ ಪ್ರಮುಖ ನಾಯಕ ನಟರು ವರ್ಷಕ್ಕೆ 2-3 ಚಿತ್ರಗಳನ್ನಾದರೂ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸಿಂಗಲ್ ಥಿಯೇಟರ್‌ಗೆ ಜನರು ಬರುತ್ತಿಲ್ಲ ಎಂಬ ಸಂದರ್ಭದಲ್ಲಿ ನಮ್ಮ “ಕೃಷ್ಣಂ ಪ್ರಣಯ ಸಖಿ” ಚಿತ್ರ ಸಿಂಗಲ್ ಥಿಯೇಟರ್‌ನಲ್ಲೇ ಐವತ್ತು ದಿನ ಪೂರೈಸಿರುವುದು ಖುಷಿಯಾಗಿದೆ. ಹಾಗಾಗಿ ಸಮಾರಂಭವನ್ನು ಇಲ್ಲೇ ಆಯೋಜಿಸಿದ್ದೇವೆ. ಇನ್ನು ಈ ಚಿತ್ರ ಐವತ್ತು ದಿನ ಯಶಸ್ವಿಯಾಗಿ ಪೂರೈಸಲು ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಾಯಕ ಗಣೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಛಾಯಾಗ್ರಾಹಕ ವೆಂಕಟ್ ರಾಮಪ್ರಸಾದ್ ಪ್ರಮುಖ ಕಾರಣ‌. ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಶ್ರೀನಿವಾಸರಾಜು.

ನಿರ್ಮಾಪಕನಿಗೆ ತನ್ನ ಚಿತ್ರ ಐವತ್ತು ದಿನಗಳನ್ನು ಪೂರೈಸಿದೆ ಎಂಬ ಖುಷಿಗಿಂತ ಮತ್ತೇನು ಬೇಕು. ಈ ಸಂದರ್ಭದಲ್ಲಿ ನನ್ನ ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದರು ಪ್ರಶಾಂತ್ ಜಿ. ರುದ್ರಪ್ಪ.

ಈ ಸುದ್ದಿಯನ್ನೂ ಓದಿ | Mysuru Dasara 2024: ಮೈಸೂರು ದಸರಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಯೋಗ ಸರಪಳಿ; 4000ಕ್ಕೂ ಹೆಚ್ಚು ಜನ ಭಾಗಿ

ಹಿರಿಯ ನಟ ಶಶಿಕುಮಾರ್, ಗಿರಿ ಶಿವಣ್ಣ, ನಟಿ ಶರಣ್ಯ ಶೆಟ್ಟಿ, ಡಾ.ವಿ. ನಾಗೇಂದ್ರಪ್ರಸಾದ್, ಡಿಫರೆಂಟ್ ಡ್ಯಾನಿ , ಕಾರ್ಯಕಾರಿ ನಿರ್ಮಾಪಕ ಶರತ್ ಭೋಜರಾಜ್ ಮುಂತಾದವರು “ಕಷ್ಣಂ ಪ್ರಣಯ ಸಖಿ” ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.