Tuesday, 10th September 2024

Yogaraj Bhat: ಶೂಟಿಂಗ್‌ ವೇಳೆ ಲೈಟ್‌ಮ್ಯಾನ್‌ ಸಾವು, ಯೋಗರಾಜ್‌ ಭಟ್‌ ಮೇಲೆ ಕೇಸು

yogaraj bhat

ಬೆಂಗಳೂರು: ಶೂಟಿಂಗ್‌ ಸೆಟ್‌ನಲ್ಲಿ (Cinema Shooting set) ಲೈಟ್‌ಮ್ಯಾನ್‌ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿ ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ (Yogaraj Bhat) ಅವರ ಮೇಲೆ ಕೇಸು ದಾಖಲಿಸಲಾಗಿದೆ. ‘ಮನದ ಕಡಲು’ ಸಿನಿಮಾದ ಶೂಟಿಂಗ್​ ವೇಳೆ ದುರ್ಘಟನೆ ಸಂಭವಿಸಿದೆ.

ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಕಳೆದ ಕೆಲವು ದಿನಗಳಿಂದ ‘ಮನದ ಕಡಲು’ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. 30 ಅಡಿ ಎತ್ತರದಲ್ಲಿದ್ದ ಲೈಟ್​ ಬಿಚ್ಚುವ ಸಂದರ್ಭದಲ್ಲಿ ಲೈಟ್​ ಮ್ಯಾನ್​ ಮೋಹನ್​ ಕುಮಾರ್​ ಎಂಬವರು ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್​ ಭಟ್​ ಹಾಗೂ ಇತರರ ಮೇಲೆ ಎಫ್​ಐಆರ್​ ದಾಖಲು ಮಾಡಲಾಗಿದೆ.

30 ಅಡಿ ಮೇಲಿಂದ ಬಿದ್ದ ಲೈಟ್ ಮ್ಯಾನ್ ನಿಧನರಾಗಿದ್ದಾರೆ. ಶೂಟಿಂಗ್‌ ಸಂದರ್ಭ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದರಿಂದ ‘ಮನದ ಕಡಲು’ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ಮೇಲೆ ದೂರು ದಾಖಲಾಗಿದೆ.

ಕಳೆದ 15 ದಿನಗಳಿಂದ ಅಡಕಮಾರನಹಳ್ಳಿಯ ಗೋಡೌನ್​ನಲ್ಲಿ ‘ಮನದ ಕಡಲು’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಮಂಗಳವಾರ ಸಂಜೆ 5.10ರ ವೇಳೆಗೆ ಲೈಟ್ ಮ್ಯಾನ್ ಮೋಹನ್ ಕುಮಾರ್ ಬಿದ್ದು ಸಾವನ್ನಪ್ಪಿದ್ದಾರೆ. 30 ಅಡಿ ಎತ್ತರದ ಅಲ್ಯುಮಿನಿಯಂ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದ ಮೋಹನ್​ ಅಲ್ಲಿಂದ ಬಿದ್ದರು.

ಶೂಟಿಂಗ್ ಸೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್​ಗೆ ಸುರಕ್ಷತಾ ಸಾಧನಗಳನ್ನು ಕೊಡದೇ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಮೋಹನ್ ಕುಮಾರ್ ಮೇಲಿಂದ ಕೆಳಕ್ಕೆ ಬಿದ್ದಾಗ ತಲೆಗೆ ಏಟಾಗಿ ತೀವ್ರ ರಕ್ತಸ್ರಾವ ಆಗಿದೆ. ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಈ ಹಿಂದೆಯೂ ಚಿತ್ರೀಕರಣದ ಸ್ಥಳಗಳಲ್ಲಿ ಅಪಘಾತಗಳು ಸಂಭವಿಸಿವೆ. ಅಜಯ್​ ರಾವ್​ ನಟನೆಯ ‘ಲವ್​ ಯೂ ರಚ್ಚು’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ವಿದ್ಯುತ್​ ಸ್ಪರ್ಶದಿಂದ ಫೈಟರ್​ ವಿವೇಕ್​ ಎಂಬವರು ಸಾವನ್ನಪ್ಪಿದ್ದರು. ‘ಮಾಸ್ತಿ ಗುಡಿ’ ಚಿತ್ರೀಕರಣದ ವೇಳೆ ಉದಯ್​ ಮತ್ತು ಅನಿಲ್​ ಅವರು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದರು.

ಈ ಸುದ್ದಿ ಓದಿ: Tarun-Sonal Wedding: ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೆ ತರುಣ್-ಸೋನಲ್ ಮದುವೆ

Leave a Reply

Your email address will not be published. Required fields are marked *