Saturday, 23rd November 2024

Lokayukta Raid: 25 ಕಡೆ ಲೋಕಾ ದಾಳಿ; ಟೌನ್​ ಪ್ಲಾನಿಂಗ್​​ ನಿರ್ದೇಶಕನ ಮನೆಯಲ್ಲಿದ್ದ ಸಂಪತ್ತು ಕಂಡು ಅಧಿಕಾರಿಗಳಿಗೇ ಶಾಕ್!‌

lokayukta raid tippeswamy

ಬೆಂಗಳೂರು: ಇಂದು ಬೆಳಗ್ಗಿನಿಂದ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಮಂಗಳೂರು ಸೇರಿದಂತೆ 4 ಕಡೆಗಳ 25 ಸ್ಥಳಗಳಲ್ಲಿ ದಾಳಿ (Lokayukta Raid) ನಡೆಸಿದ್ದಾರೆ. ಭ್ರಷ್ಟಾಚಾರದ (Corruption) ಆರೋಪ ಹೊತ್ತಿರುವ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಟೌನ್​ ಪ್ಲಾನಿಂಗ್ (Town planning) ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಕೂಡ ದಾಳಿ ನಡೆದಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಅಕ್ರಮ ಆಸ್ತಿಪಾಸ್ತಿ ಕಂಡು ಅಧಿಕಾರಿಗಳೇ ಸುಸ್ತಾಗಿ ಹೋಗಿದ್ದಾರೆ.

ಬನಶಂಕರಿಯ 3ನೇ ಹಂತದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಟೌನ್​ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ, ಬೆಚ್ಚಿಬೀಳುವಷ್ಟು ಸಂಪತ್ತು ದೊರೆತಿದೆ. ಅಪಾರ ಮೌಲ್ಯದ ಆಸ್ತಿ ದಾಖಲೆಗಳು, ಚಿನ್ನಾಭರಣ ನೋಡಿ ಅಧಿಕಾರಿಗಳೇ ಶಾಕ್​ ಆಗಿದ್ದು, ಈ ಆಸ್ತಿಪಾಸ್ತಿಗೆ ಸೂಕ್ತ ವಿವರಣೆ ನೀಡಲು ತಿಪ್ಪೇಸ್ವಾಮಿ ವಿಫಲರಾಗಿದ್ದಾರೆ.

ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೆಸ್​, ಚಿನ್ನದ ಉಂಗುರ ಪತ್ತೆಯಾಗಿದೆ. 28ಕ್ಕೂ ಹೆಚ್ಚು ಜೊತೆ ಓಲೆ, 23ಕ್ಕೂ ಹೆಚ್ಚು ಚಿನ್ನದ ಸರ, ಮುತ್ತಿನ ಹಾರ ಪತ್ತೆಯಾಗಿವೆ. ಬಂಗಾರ ಮಾತ್ರ ಅಲ್ಲದೆ, 500, 200 ರೂ. ಮುಖ ಬೆಲೆಯ 8 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. 8 ಕ್ಕೂ ಹೆಚ್ಚು ದುಬಾರಿ ಬೆಲೆಯ ಬ್ರಾಂಡೆಡ್​ ವಾಚ್​ಗಳು ಸಿಕ್ಕಿವೆ. ಇನ್ನು ಕೆಜಿಗಟ್ಟಲೆಯ ಬೆಳ್ಳಿ ಸಾಮಾಗ್ರಿಗಳು ಕೂಡ ಪತ್ತೆಯಾಗಿದೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಎಸ್​ಪಿ ಮನೆ ಮೇಲೂ ಲೋಕಾಯುಕ್ತ ದಾಳಿ ಮಾಡಿದೆ. ಬೆಳಗ್ಗೆ 6 ಗಂಟೆಯ ವೇಳೆ ಅಬಕಾರಿ ಇಲಾಖೆ ಎಸ್​ಪಿ ಮೋಹನ್ ಮನೆ ಮೇಲೆ ರೇಡ್ ಮಾಡಲಾಗಿದೆ. ಮಹತ್ವದ ದಾಖಲೆಗಳನ್ನ ಪರಿಶೀಲನೆ ಮಾಡಲಾಯಿತು.

ಮಂಗಳೂರಿನಲ್ಲಿ ಗಣಿ ಇಲಾಖೆ ಅಧಿಕಾರಿ ಮನೆ ಮೇಲೆ ರೇಡ್

ಲೋಕಾಯುಕ್ತ ಅಧಿಕಾರಿಗಳು ಮಂಗಳೂರಿನಲ್ಲಿ ಗಣಿ ಅಧಿಕಾರಿ ಕಚೇರಿ, ಮನೆ ಮೇಲೂ ದಾಳಿ ಮಾಡಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ವೆಲೆನ್ಸಿಯಾದ ಮನೆ, ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ ಇಲಾಖೆ ಅಧಿಕಾರಿಯಾಗಿದ್ದ ಕೃಷ್ಣವೇಣಿ, 2 ತಿಂಗಳ ಹಿಂದಷ್ಟೇ ಮಂಗಳೂರಿಗೆ ಬಂದಿದ್ದರು.

ಕೃಷ್ಣವೇಣಿಗೆ ಸಂಬಂಧಪಟ್ಟ ಮತ್ತಷ್ಟು ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿರುವ ಮನೆ, ಅಪಾರ್ಟ್​ಮೆಂಟ್​, ಕಚೇರಿ ಮೇಲೆ ರೇಡ್ ಮಾಡಲಾಗಿದೆ. ಇನ್ನು ಯಲಹಂಕದಲ್ಲಿರುವ ಅಪಾರ್ಟ್​ಮೆಂಟ್​ನಲ್ಲೂ ಪರಿಶೀಲನೆ ಮಾಡಲಾಯಿತು.

ಮಂಡ್ಯದಲ್ಲಿ ಕಾವೇರಿ ನಿಗಮದ ಎಂಡಿ ಮನೆ ಮೇಲೆ ದಾಳಿ

ಮಂಡ್ಯ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್​ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ. ಮಳವಳ್ಳಿಯಲ್ಲಿರೋ ನಿವಾಸದಲ್ಲಿ ದಾಖಲೆಗಳನ್ನ ಪರಿಶೀಲನೆ ಮಾಡಲಾಗಿದೆ. ಇನ್ನು ಎಂಡಿ‌ ಮಹೇಶ್, ಪತ್ನಿಗೆ ಸೇರಿದ ಪೆಟ್ರೋಲ್ ಬಂಕ್​ ಮೇಲೂ ರೇಡ್​ ಮಾಡಲಾಯಿತು. ಆದಾಯಕ್ಕೂ ಮೀರಿ ಆಸ್ತಿಗಳಿಕೆ ದೂರು ಹಿನ್ನೆಲೆ ಮಹತ್ವದ ದಾಖಲೆಗಾಗಿ ಹುಡುಕಾಡಿದ್ದಾರೆ.