ಬೆಂಗಳೂರು: “ಶಿಕ್ಷಣ ಸಚಿವರಿಗೆ ಕನ್ನಡ ಗೊತ್ತಿಲ್ಲ” ಎಂದು ಹೇಳಿದ ವಿದ್ಯಾರ್ಥಿ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಕ್ರಮಕ್ಕೆ ಸೂಚನೆ ನೀಡಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ. ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು ಎಂದು ಛೇಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಯತ್ನಾಳ್ ಅವರು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ… ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳಿಗೂ ಸೇರಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ., ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ; ಗರಂ ಆದ ಮಧು ಬಂಗಾರಪ್ಪ
ಬೆಂಗಳೂರು: ವಿಡಿಯೊ ಕಾನ್ಫರೆನ್ಸ್ನಲ್ಲಿ ಸಂವಾದ ನಡೆಸುವ ವೇಳೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ನೇರವಾಗಿಯೇ ಹೇಳಿದ್ದರಿಂದ ಸಚಿವ ಮಧು ಬಂಗಾರಪ್ಪ ಗರಂ ಆಗಿರುವ ಪ್ರಸಂಗ ಬುಧವಾರ ನಡೆದಿದೆ. ವಿದ್ಯಾರ್ಥಿಯ ಹೇಳಿಕೆಯಿಂದ ಮಧು ಬಂಗಾರಪ್ಪ ಅವರಿಗೆ ಭಾರಿ ಮುಜುಗರವಾಗಿದ್ದು, ಈ ವೇಳೆ ಅಲ್ಲಿದ್ದ ಅಧಿಕಾರಿಗಳಿಗೆ, ಆ ವಿದ್ಯಾರ್ಥಿ ಯಾರು ಎಂದು ತಿಳಿದುಕೊಂಡು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ನೀಟ್, ಜೆಇಇ, ಸಿಇಟಿ ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳ ಜತೆ ಮಧು ಬಂಗಾರಪ್ಪ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದರು. ಆಗ ವಿದ್ಯಾರ್ಥಿಯೊಬ್ಬ ವಿದ್ಯಾ ಮಂತ್ರಿಗೆ ಕನ್ನಡವೇ ಬರಲ್ಲ ಎಂದು ನೇರವಾಗಿಯೇ ಹೇಳಿದ್ದಾನೆ.
ಆ ಮಾತನ್ನು ಕೇಳಿಸಿಕೊಂಡ ಮಧು ಬಂಗಾರಪ್ಪ, ಯಾರೋ ಅದು ಹೇಳಿದ್ದು, ಏನಂತ ಹೇಳಿದ್ದು? ನಾನೇನು ಉರ್ದು ಮಾತಾಡಿದ್ನಾ? ಕನ್ನಡದಲ್ಲೇ ಮಾತನಾಡಿದ್ದು ಎಂದು ಗರಂ ಆಗಿದ್ದಾರೆ. ನಂತರ ಪಕ್ಕದಲ್ಲಿ ಕುಳಿತಿದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಿಗೆ, ಯಾರು ನೋಡಿ ರೆಕಾರ್ಡ್ ಮಾಡಿ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಮಾಧ್ಯಮಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಸಮ್ಮುಖದಲ್ಲೇ ವಿದ್ಯಾರ್ಥಿ ನೇರವಾಗಿ ಹೇಳಿದ್ದರಿಂದ ತಕ್ಷಣವೇ ಗಲಿಬಿಲಿಗೊಂಡ ಮಧು ಬಂಗಾರಪ್ಪ, ಹೇ ಯಾರೋ ಅವನು ಹಾಗೆ ಮಾತನಾಡೋದು? ನಾಚಿಕೆಯಾಗಬೇಕು ಅವನಿಗೆ, ಯಾರು ಹಾಗೇ ಅಂದವರು ಡೀಟೇಲ್ಸ್ ತೆಗೆದುಕೊಳ್ಳಿ ಎಂದು ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ವಿಡಿಯೊ ಕಾನ್ಫರೆನ್ಸ್ನಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರಿಂದ ಸದ್ಯಕ್ಕೆ ಆ ಹೇಳಿಕೆ ನೀಡಿದ ವಿದ್ಯಾರ್ಥಿ ಯಾರು ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯೋತ್ಸವ ಭಾಷಣದಲ್ಲಿ ಎಡವಟ್ಟು
ಈ ಹಿಂದೆ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕನ್ನಡ ರಾಜ್ಯೋತ್ಸವ ದಿನವೇ ಹಲವು ಕನ್ನಡ ಪದಗಳನ್ನು ತಪ್ಪು ಉಚ್ಚಾರಣೆ ಮಾಡಿದ್ದರು. ಭಾಷಣದಲ್ಲಿ ಬದಲಾವಣೆಗೆ ಬದಾವಣೆ, ಶಾಲಾ ಶಿಕ್ಷಣಕ್ಕೆ ಸಾಲ ಶಿಕ್ಷಣ, ಹೆಮ್ಮೆಯ ಸಂಗತಿ ಆಗಿದೆ ಎನ್ನುವ ಬದಲು ಹೆಮ್ಮೆಯ ಸಂಗಾತಿ ಆಗಿದೆ, ಕರ್ನಾಟಕ ಎಂದು ಓದಲು ಕರಾಟಕ, ಸಹಬಾಳ್ವೆ ಎನ್ನಲು ಸಹಬಾಳ್ಮೆ, ವಿದ್ಯಾರ್ಥಿಗಳು ಎನ್ನುವ ಬದಲು ವಿದ್ಯಾರ್ಥಗಳು, ಆಶಯಗಳನ್ನು ಎಂದು ಹೇಳುವ ಬದಲು ಆಶಗಳನ್ನು, ಜಾರಿಗೊಳಿಸಲಾಗಿದೆ ಎನ್ನುವ ಬದಲು ಜಾರಿಗೊಳ್ಳಲಾಗಿದೆ, ಗುಣಾತ್ಮಕ ಎನ್ನುವ ಬದಲು ಗುಣನಾತ್ಮಕ, ದುರಸ್ತಿ ಬದಲು ದುರಸ್ತಿತಿ, ಗುಣಮಟ್ಟದ ಎಂದು ಹೇಳಲು ಹೋಗಿ ಗುಣಮಟ್ಟಣ ಎಂದು ತಪ್ಪು ಪದ ಪ್ರಯೋಗ ಮಾಡಿದ್ದರು. ಇದರಿಂದ ವಿಪಕ್ಷಗಳು ಸೇರಿ ಸಾರ್ವಜನಿಕರು ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಸುದ್ದಿಯನ್ನೂ ಓದಿ | Vikram Gowda’s encounter: ನಕ್ಸಲ್ ಚಟುವಟಿಕೆ ನಿಗ್ರಹಿಸಲು ವಿಕ್ರಂ ಗೌಡ ಎನ್ಕೌಂಟರ್: ಸಿಎಂ ಸಿದ್ದರಾಮಯ್ಯ