Thursday, 3rd October 2024

Madhyantara Short Movie: ಮನಕ್ಕೆ ಮುದನೀಡುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಿರುಚಿತ್ರ ‘ಮಧ್ಯಂತರ’

Madhyantara Short Movie

ಬೆಂಗಳೂರು: ಮೂವತ್ತಾರು ನಿಮಿಷಗಳಲ್ಲಿ ಎಲ್ಲರ ಮನಸ್ಸಿಗೆ ಮುದ ನೀಡುವ “ಮಧ್ಯಂತರ” (Madhyantara Short Movie) ಅದ್ಭುತ ಕಿರುಚಿತ್ರವನ್ನು ದಿನೇಶ್ ಶೆಣೈ ಅವರು ರಚಿಸಿ, ನಿರ್ದೇಶಿಸಿದ್ದಾರೆ. ಈ ಕಿರುಚಿತ್ರಕ್ಕೆ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ಬಂದಿದೆ. ನಿರ್ದೇಶಕ ದಿನೇಶ್ ಶೆಣೈ ಹಾಗೂ ಸಂಕಲನಕಾರ ಸುರೇಶ್ ಅರಸ್ ರಾಷ್ಟ್ರ ಪ್ರಶಸ್ತಿಗೆ (National Award) ಭಾಜನರಾಗಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಮಾಜಿ ಸಚಿವೆ, ನಟಿ, ನಿರ್ಮಾಪಕಿ ಡಾ. ಜಯಮಾಲ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ “ಮಧ್ಯಂತರ”ದ ಸದಸ್ಯರು ಮಾಧ್ಯಮದ ಮುಂದೆ ಮಾತನಾಡಿದರು.

ನನಗೂ ಚಿತ್ರರಂಗಕ್ಕೂ ಇಪ್ಪತ್ತೇಳು ವರ್ಷಕ್ಕೂ ಮೀರಿದ‌ ನಂಟು. ಆದರೆ ಈ ಕಥೆ ಹೊಳೆದ್ದದ್ದು ಕೊರೋನಾ ಸಮಯದಲ್ಲಿ. ಹಿರಿಚಿತ್ರ ಮಾಡುವ ಮುನ್ನ ಮೊದಲು ಈ ಕಿರುಚಿತ್ರ ಮಾಡೋಣ ಅಂದುಕೊಂಡೆ. ಇದು ಜನರಿಗೆ ಹಿಡಿಸಿದರೆ, ಮುಂದೆ ಚಲನಚಿತ್ರ ಮಾಡೋಣ. ಆಗ ನಿರ್ಮಾಪಕರು ಸಿಗುತ್ತಾರೆ ಎಂಬ ಉದ್ದೇಶದಿಂದ. ಈ ಕಿರುಚಿತ್ರವನ್ನು ನೋಡಿದ ದಯಾಳ್ ಪದ್ಮನಾಭನ್‌ ಅವರು ಪನೋರಮಾ ಗೆ ಕಳುಹಿಸಲು ಸಲಹೆ ನೀಡಿದರು. ಹಾಗೆ ಡಿಸೆಂಬರ್ ಒಳಗೆ ಸೆನ್ಸಾರ್ ಮಾಡಿಸಿದರೆ ರಾಷ್ಟ್ರ ಪ್ರಶಸ್ತಿಗೂ ಕಳುಹಿಸಬಹುದು ಎಂದು ಮತ್ತೊಬ್ಬ ಸ್ನೇಹಿತರು ಹೇಳಿದರು. ಅದೇ ರೀತಿ ಕಳುಹಿಸಲಾಯಿತು ಎಂದು ವಿವರಿಸಿದರು.

ನಾನ್ ಫೀಚರ್ ವಿಭಾಗದಲ್ಲಿ ನಮ್ಮʼಮಧ್ಯಂತರʼಕ್ಕೆ ಎರಡು ಪ್ರಶಸ್ತಿಗಳು ಬಂದಿವೆ. ಈ ಸಮಯದಲ್ಲಿ ನನ್ನ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇದು 1976ರಿಂದ 85ರವರೆಗಿನ ಕಾಲಘಟ್ಟದ ಕಥೆ. ಇದನ್ನು ನೆಗೆಟೀವ್‌ನಲ್ಲೇ ಚಿತ್ರೀಕರಣ ಮಾಡಿದ್ದೇವೆ‌. ಹನ್ನೊಂದು ದಿನಗಳ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಮಾಣಿಕ್ ಚಂದ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತೇ ನನ್ನ “ಮಧ್ಯಂತರ “ಕ್ಕೆ ಸ್ಪೂರ್ತಿ. ಮುಂದಿನ ದಿನಗಳಲ್ಲಿ ಇದೇ ಕಥೆಯನ್ನು ಮುಂದುವರೆಸಿ ಹಿರಿತೆರೆಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ದಿನೇಶ್ ಶೆಣೈ ತಿಳಿಸಿದರು.

ನನ್ನ ಐವತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಪಾರ. ಅವರಿಗೆ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ತಿಳಿಸುವುದಾಗಿ ಸಂಕಲನಕಾರ ಸುರೇಶ್ ಅರಸ್ ತಿಳಿಸಿದರು.

ಇಂತಹ ಅದ್ಭುತ ಕಥೆಯನ್ನು ಕೆಲವೇ ನಿಮಿಷಗಳಲ್ಲಿ ಹೇಳುವುದು ಸುಲಭವಲ್ಲ. ದಿನೇಶ್ ಶೆಣೈ ಅವರು ಆ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದು ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ‌. ಅವರಿಗೆ ಹಾಗೂ ತಂಡಕ್ಕೆ ಶುಭಾಶಯ ಎಂದರು ಡಾ. ಜಯಮಾಲಾ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ” ಮಧ್ಯಂತರ” ತಂಡಕ್ಕೆ ಶುಭಾಶಯ ತಿಳಿಸಿ, ಮುಖ್ಯಮಂತ್ರಿಗಳ ಬಳಿ ಚಿತ್ರರಂಗಕ್ಕೆ ಅನುಕೂಲವಾಗಲಿರುವ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ಈ ಸುದ್ದಿಯನ್ನೂ ಓದಿ | Bigg Boss Kannada 11: ಬಿಗ್‌ಬಾಸ್‌‌‌ನಲ್ಲಿ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಸುದೀಪ್‌ ಸೂಟ್‌! ಇದರ ದರ ಎಷ್ಟು?

ಕಿರುಚಿತ್ರದಲ್ಲಿ ನಟಿಸಿರುವ ವೀರೇಶ್, ರಮೇಶ್ ಪಂಡಿತ್ ಮುಂತಾದ ಕಲಾವಿದರು ತಮ್ಮ ಅನುಭವವನ್ನು ಹಂಚಿಕೊಂಡರು. ನಟಿ ನಿಖಿತ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.