ಮೈಸೂರು: ಹುಣಸೂರು(Hunsur) ತಾಲೂಕಿನ ಬೆಟ್ಟದೂರು ಗ್ರಾಮದ ಶ್ರೀ ಕ್ಷೇತ್ರ ಗೊಮ್ಮಟಗಿರಿ( Sri Kshetra Gommatagiri) ಭಗವಾನ್ ಬಾಹುಬಲಿ(Bhagavan Bahubali) ಸ್ವಾಮಿಯ 75ನೇ ಮಹಾಮಸ್ತಕಾಭಿಷೇಕ(Mahamastakabhisheka) ಅಮೃತ ಮಹೋತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ.
ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅರಳು, ಸಕ್ಕರೆ ಪುಡಿ, ಅಕ್ಕಿ ಹಿಟ್ಟು, ಶ್ರೀಗಂಧ ಸೇರಿದಂತೆ ವಿವಿಧ ಕಷಾಯಾಭಿಷೇಕ ಸೇರಿದಂತೆ ಒಟ್ಟು 26 ಬಗೆಯ ಅಭಿಷೇಕಗಳೊಂದಿಗೆ 16 ಅಡಿ ಎತ್ತರದ ಸುಂದರವಾದ ಬಾಹುಬಲಿ ಮಿಂದೆದ್ದಿದ್ದಾನೆ. ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ಭಾಗಗಳಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಸಹಸ್ರಾರು ಜನರು ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡರು.
ಶ್ರೀ ಕ್ಷೇತ್ರ ಗೊಮ್ಮಟಗಿರಿ ಭಗವಾನ್ ಬಾಹುಬಲಿ ಸ್ವಾಮಿಯ 75ನೇ ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಉದ್ಘಾಟಿಸಿರು. ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಕ್ಷೇತ್ರ ಹೊಂಬುಜ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು, ಕನಕಗಿರಿಯ ಶ್ರೀ ಕ್ಷೇತ್ರದ ಭುವನ ಕೀರ್ತಿ ಭಟ್ಟಾರಕ ಶ್ರೀಗಳು, ಶ್ರವಣ ಬೆಳಗೊಳ ಶ್ರೀಕ್ಷೇತ್ರದ ಅಭಿನವ ಚಾರುಕೀರ್ತಿ ಭಟ್ಟಾರಕ ಶ್ರೀಗಳು, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ, ಹಳೇಬೀಡು ಗ್ರಾಪಂ ಅಧ್ಯಕ್ಷರಾದ ಕೆ. ಎಸ್. ಶ್ರುತಿ, ಗೊಮ್ಮಟಗಿರಿ ಸೇವಾ ಸಮಿತಿ ಅಧ್ಯಕ್ಷ ಮನ್ಮಥ್ ರಾಜ್, ಸೇವಾ ಸಮಿತಿ ಸದಸ್ಯ ಜೆ. ಎಸ್. ಸಂತೋಷ್ ಕುಮಾರ್, ಖಜಾಂಚಿ ರಾಜೇಶ್, ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಹಲವು ಪ್ರಮುಖರು ಉಪಸ್ಥಿತರಿದ್ದರು.
ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಸಿ. ಎಚ್. ವಿಜಯಶಂಕರ್ ಮಾತನಾಡಿ, “ಜೈನಧರ್ಮ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಮಾನವೀಯ ಮೌಲ್ಯಗಳನ್ನು ಬಿತ್ತಿದೆ. ಭಗವಾನ್ ಬಾಹುಬಲಿ ತ್ಯಾಗ, ಅಹಿಂಸೆಯ ಪ್ರತೀಕ, ಶಾಂತಿಯ ಪ್ರತಿಬಿಂಬ. ಸಮಾಜದಲ್ಲಿ ಎಷ್ಟೇ ಜಾತಿ, ಧರ್ಮಗಳು ಇರಬಹುದು. ಅವೆಲ್ಲಕ್ಕಿಂತಲೂ ಮಿಗಿಲಾಗಿ ನಾವೆಲ್ಲಾ ಮನುಕುಲಕ್ಕೆ ಸೇರಿದವರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಮಾತನಾಡಿ “ಗೊಮ್ಮಟಗಿರಿ ಮೈಸೂರಿಗೆ ನಿಸರ್ಗದತ್ತ ರಮಣೀಯವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಪ್ರಕೃತಿಯ ಮಧ್ಯೆ ನೆಲೆಸಿರುವ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿರುವುದು ವಿಶೇಷ. ಈ ಕಲ್ಯಾಣ ಕಾರ್ಯಕ್ರಮದಿಂದ ಜಗತ್ತಿಗೆ ಶಾಂತಿ ಸಂದೇಶ ಸಾರಬಹುದಾಗಿದೆ. ಪ್ರೀತಿ ಹಾಗೂ ಸಹಬಾಳ್ವೆ ಅವಶ್ಯವಾಗಿದ್ದು, ಅತಿಯಾಸೆ, ಸ್ವಾರ್ಥಗಳನ್ನು ಬಿಟ್ಟು ಬದುಕಬೇಕಿದೆ” ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:ಭಾರತದ ಸಂವಿಧಾನ ಆರ್‌ಎಸ್‌ಎಸ್‌ನ ರೂಲ್ ಬುಕ್ ಅಲ್ಲ; ಸಂಸತ್‌ನ ಮೊದಲ ಭಾಷಣದಲ್ಲೇ ಮೋದಿಗೆ ತಿವಿದ ಪ್ರಿಯಾಂಕಾ ಗಾಂಧಿ