Sunday, 6th October 2024

Mandya Violence: ನಾಗಮಂಗಲ ಗಲಭೆ ಪ್ರಕರಣ; 150 ಆರೋಪಿಗಳ ವಿರುದ್ಧ ಎಫ್‌ಐಆರ್‌

Mandya Violence

ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 150 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂದು ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

53 ಆರೋಪಿಗಳ ಹೆಸರು ಮತ್ತು ವಿಳಾಸ ಸಮೇತ ಎಫ್‌ಐಆರ್ ದಾಖಲಿಸಲಾಗಿದೆ. ಇದರಲ್ಲಿ 30 ಮುಸ್ಲಿಮರು ಹಾಗೂ 23 ಹಿಂದುಗಳು ಇದ್ದಾರೆ. ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಸದ್ಯ ಪರಿಸ್ಥಿತಿ ಹೇಗಿದೆ?

ʼʼಸದ್ಯ ಗಲಭೆ ನಡೆದ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. 2-3 ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸೆಪ್ಟೆಂಬರ್ 14ರವರೆಗೆ ಸೆಕ್ಷನ್​ 144 ಜಾರಿ ಮಾಡಿದ್ದೇವೆ. ಅಗತ್ಯಬಿದ್ದರೆ ಸೆಕ್ಷನ್​ 144 ಮುಂದುವರಿಸಲಾಗುವುದುʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ʼʼಬದರಿಕೊಪ್ಪಲು ಬಳಿ ಸಂಜೆ 7 ಗಂಟೆ ವೇಳೆಗೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಹಿಂದೂ ಯುವಕರು ಕುಣಿದು, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಮೆರವಣಿಗೆ ಬದರಿಕೊಪ್ಪಲಿನಿಂದ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿತ್ತು. ಆಗ ಮಸೀದಿ ಮುಂದೆ ಬರದಂತೆ ಮಂಡ್ಯ ಸರ್ಕಲ್​​ನಲ್ಲೇ ಅನ್ಯಕೋಮಿನ ಯುವಕರು ತಡೆದಿದ್ದರು. ಆಗ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಗಣೇಶ ಮೂರ್ತಿ ಮೆರವಣಿಗೆ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದರುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶಾಲೆ-ಕಾಲೇಜುಗಳಿಗೆ ರಜೆ

ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಇಂದು ನಾಗಮಂಗಲದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗಲಭೆ ಪ್ರಕರಣ ಸಂಬಂಧ ಈಗಾಗಲೇ 50 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲೆಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಏನಿದು ಘಟನೆ?
ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿ ಪೆಟ್ರೋಲ್‌ ಬಾಂಬ್‌ ಎಸೆದು ದಾಂಧಲೆ ನಡೆಸಿದ್ದರಿಂದ ನಾಗಮಂಗಲ(Nagamangala) ದ ಬದರಿಕೊಪ್ಪಲಿನಲ್ಲಿಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಸಂಜೆ ಅದ್ಧೂರಿ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸುವ ವೇಳೆ ಈ ಘಟನೆ ನಡೆದಿದೆ. ನಾಗಮಂಗಲದ ಮೈಸೂರು ರಸ್ತೆ(Mysore road)ಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲುತೂರಾಟ ನಡೆಸಿದ್ದರು. ಈ ವೇಳೆ ಹಿಂದು-ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿತ್ತು. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

ಇದನ್ನೂ ಓದಿ | Mandya Violence: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಉದ್ದೇಶ ಪೂರ್ವಕವಾಗಿಯೇ ಅನ್ಯ ಕೋಮಿನ ಪುಂಡರಿಂದ ದಾಂಧಲೆ; ಎಚ್‌ಡಿಕೆ ವಾಗ್ದಾಳಿ

ಇನ್ನು ದುಷ್ಕರ್ಮಿಗಳ ಗುಂಪು ಅಂಗಡಿ, ಅಂಗಡಿ ಮುಂದಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು. ಅಷ್ಟೇ ಅಲ್ಲದೆ ರಸ್ತೆ ಮಧ್ಯೆ ಕತ್ತಿ ಹಿಡಿದು ಝಳಪಿಸಿದ್ದರ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸುಮಾರು 46 ಮಂದಿಯನ್ನುಅರೆಸ್ಟ್‌ ಮಾಡಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ 144ಸೆಕ್ಷನ್‌ ಜಾರಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾಗಮಂಗಲದ ಶಾಲಾ, ಕಾಲೇಜುಗಳಿಗೆ ಗುರುವಾರ ರಜೆ ಘೊಷಿಸಲಾಗಿದೆ.