Friday, 29th November 2024

ಮಂದಹಾಸ ಮೂಡಿಸಿದ ಮಾವು

ಉತ್ತಮ ಇಳುವರಿ ನಿರೀಕ್ಷೆೆಯಲ್ಲಿ ರೈತ

ಆದಾಯ ಹೆಚ್ಚಳ ಸಾಧ್ಯತೆ

ವಿಶೇಷ ವರದಿ: ರಂಗನಾಥ ಕೆ.ಮರಡಿ

ತುಮಕೂರು: ತುಮಕೂರು ಜಿಲ್ಲೆಯ ಮಾವು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಉತ್ತಮ ಫಸಲಿನೊಂದಿಗೆ ಒಳ್ಳೆಯ ಆದಾಯ ಬರುವ ಮುನ್ಸೂಚನೆ ಕಂಡುಬಂದಿದೆ. ಈ ವರ್ಷ ನಿರೀಕ್ಷಿತ ಮಳೆ ಬಂದ ಪರಿಣಾಮ ಹೂ ಉದುರುವುದು ಕಡಿಮೆಯಾಗಿ, ರೋಗದ ಪ್ರಮಾಣ ಕುಸಿದಿದೆ. ಕರೋನಾದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ಮಾವು ಕೈಹಿಡಿಯುವ ಭರವಸೆ ಇದೆ. ಬೂದಿ ರೋಗ, ಹೂ ಕೊಳೆಯುವ ರೋಗ ಮತ್ತಿತರ ರೋಗಗಳು ಕಾಣಿಸಿಕೊಂಡರೂ ಔಷಧ ಸಿಂಪಡಣೆಯಿಂದಾಗಿ ನಿಯಂತ್ರಣಕ್ಕೆ ಬಂದಿದೆ. ಬಹತೇಕ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಮಾವು ಬೆಳೆಯುತ್ತಾರೆ.

ಗುತ್ತಿಗೆಗೆ ಬೇಡಿಕೆ: ಹೂ ಬಿಟ್ಟು ಘಮಘಮಿಸುತ್ತಿರುವ ಮಾವನ್ನು ಗುತ್ತಿಗೆ ಪಡೆಯಲು ಬೇಡಿಕೆ ಹೆಚ್ಚು ತ್ತಿದೆ. ಕೆಲವು ರೈತರು ಈಗಾಗಲೇ ಗುತ್ತಿಗೆ ನೀಡಿದ್ದಾರೆ. ಮತ್ತೆ ಕೆಲವು ಇನ್ನೂ ಒಳ್ಳೆಯ ಬೆಲೆ ಸಿಗಬಹು ದೆಂದು ಕಾದು ನೋಡುತ್ತಿದ್ದಾರೆ. ಗುತ್ತಿದಾರರು ಒಳ್ಳೆಯ ಆದಾಯ ಗಳಿಸುವ ವಿಶ್ವಾಸದೊಂದಿಗೆ ಗುತ್ತಿಗೆ ಪಡೆಯಲು ಹಳ್ಳಿಗಳಿಗೆ ಲಗ್ಗೆಯಿಡುತ್ತಿದ್ದಾರೆ.

ವ್ಯಾಪಾರಿಗಳು ಮುಂಗಡ ಹಣ ನೀಡಿ ಗುತ್ತಿಗೆ ಫಿಕ್ಸ್‌ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಏಪ್ರಿಲ್ ವೇಳೆಗೆ ಬಾದಾಮಿ, ರಸಪುರಿ, ತೋತಾಪುರಿ, ನೀಲಾಂಬರಿ ಸೇರಿದಂತೆ ನಾನಾ ತಳಿಯ ತಾಜ ರಸಪುರಿ ಮಾವು ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಮುಖ್ಯಾಂಶಗಳು

20,465 ಹೆಕ್ಟೇರ್‌ನಲ್ಲಿ ಮಾವು ಬೆಳೆ.
ಕಳೆದ ಬಾರಿಗಿಂತ ಶೇ.40ರಷ್ಟು ಅಧಿಕ ಬೆಳೆ.
ಈ ಬಾರಿ ಒಳ್ಳೆಯ ಹೂ ಕಟ್ಟಿದೆ.
ಉತ್ತಮ ಮಳೆಯಿಂದಾಗಿ ರೋಗ ಕಡಿಮೆಯಾಗಿದೆ.
ಅಲ್ಪಸ್ವಲ್ಪ ರೋಗ ಪ್ರಮಾಣವು ಇದೆ.
ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ

***

ಕರೋನಾದಿಂದಾಗಿ ವ್ಯಾಪಾರವಿಲ್ಲದೆ ನಷ್ಟಕ್ಕೊಳಗಾಗಿದ್ದವು. ಮಾವು ಉತ್ತಮವಾಗಿ ಫಸಲು ಬಿಡುವ ಮುನ್ಸೂಚನೆ ಕಂಡು ಬಂದಿದೆ. ಹಳ್ಳಿಗಳಿಗೆ ಹೋಗಿ ಗುತ್ತಿಗೆ ಪಡೆಯುತ್ತಿದ್ದೇವೆ. ಸ್ವಲ್ಪ ಆದಾಯ ಬಂದರೆ ಜೀವನಕ್ಕೆ ಅನುಕೂಲವಾಗುತ್ತದೆ.
– ಮೆಹಬೂಬು ವ್ಯಾಪಾರಸ್ಥ

ಕಳೆದ ಬಾರಿಗಿಂತ ಈ ಬಾರಿ ಒಳ್ಳೆಯ ಬೆಳೆ ಕೈಗೆ ಸಿಗುವ ನಿರೀಕ್ಷೆಯಿದೆ. ಈಗಾಗಲೇ ವ್ಯಾಪಾರಿಗಳಿಗೆ ಗುತ್ತಿಗೆ ನೀಡಲಾಗಿದೆ. ರೋಗ
ಪ್ರಮಾಣವೂ ಕಡಿಮೆಯಿದ್ದು, ಮಾವಿನಿಂದ ಉತ್ತಮ ಆದಾಯ ಬರಲಿದೆ.

– ಅಣ್ಣಪ್ಪ ಮಾವು ಬೆಳೆಗಾರ