Friday, 13th December 2024

ಮಂಜು ಪಾವಗಡ- ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌-8 ರ ವಿನ್ನರ್‌

ಅರವಿಂದ್ ರನ್ನರ್‌ಅಪ್ | ಮೂರನೇ ಸ್ಥಾನದಲ್ಲಿ ದಿವ್ಯಾ ಉರುಡುಗ

ಬೆಂಗಳೂರು: ಕನ್ನಡದ ಕಿರುತೆರೆ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-೮ಗೆ ವರ್ಣರಂಜಿತ ತೆರೆಬಿದ್ದಿದ್ದು, ಮಂಜು ಪಾವಗಡ ಈ ಬಾರಿಯ ವಿನ್ನರ್ ಆಗಿ
ಹೊರಹೊಮ್ಮಿದ್ದಾರೆ.

ದಿವ್ಯಾ ಉರುಡುಗ, ಅರವಿಂದ್ ಹಾಗೂ ಮಂಜು ಅಂತಿಮ ಸುತ್ತಿನಲ್ಲಿದ್ದರು. ಅಂತಿಮವಾಗಿ ಮಂಜು ಬಿಗ್‌ಬಾಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಹಾಗಾಗಿ ಅರವಿಂದ್ ಎರಡನೇ ಹಾಗೂ ದಿವ್ಯಾ ಉರುಡುಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಕೊನೆಯವರೆಗೂ ಬಿಗ್‌ಬಾಸ್ ಮನೆಯಲ್ಲೇ ಇದ್ದರೂ, ಈ ಇಬ್ಬರಲ್ಲಿ ಒಬ್ಬರು ಈ ಬಾರಿಯ ವಿನ್ನರ್ ಆಗಬಹುದು ಎಂದು ಬಹುತೇಕರು ನಿರೀಕ್ಷಿಸಿದ್ದರು. ಆದರೆ ಆ ಇಬ್ಬರೂ ಶನಿವಾರವೇ ಮನೆಯಿಂದ ಹೊರಬಂದರು. ಈ ಕುತೂಹಲದ ಎಲಿಮಿನೇಷನ್‌ನಿಂದ ಪ್ರತಿಕ್ಷಣಕ್ಕೂ ಬಿಗ್‌ಬಾಸ್ ಕಾತರತೆ ಹೆಚ್ಚಿಸಿತ್ತು.

ಹೊಸ ದಾಖಲೆ ಬರೆದ ಬಿಗ್‌ಬಾಸ್: ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಹೊಸ ದಾಖಲೆಯನ್ನು ಬರೆದಿದೆ. ಈ ಬಾರಿ ಬರೋಬ್ಬರಿ 120 ದಿನಗಳ ಕಾಲ ಶೋ ನಡೆಸಿದ ಕೀರ್ತಿ ಕನ್ನಡದ ಬಿಗ್‌ಬಾಸ್‌ಗೆ ಸಲ್ಲುತ್ತದೆ. ಕಳೆದ ಏಳು ಸೀಸನ್‌ಗಳಲ್ಲಿ 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆದಿತ್ತು. ಆದರೆ ಈ ಬಾರಿ ಎರಡು ಇನ್ನಿಂಗ್ಸ್ ನಲ್ಲಿ ನಡೆಸಲಾಯಿತು.

ಮೊದಲು 72 ಹಾಗೂ ಎರಡನೇ ಬಾರಿಗೆ 48 ದಿನಗಳ ಸುದೀರ್ಘ ಅವಽಯವರೆಗೆ ಬಿಗ್‌ಬಾಸ್ ನಡೆದಿದೆ. ಕರೋನಾ ದಿಂದ ಬಿಗ್‌ಬಾಸ್ ರಿಯಾಲಿಟಿ ಶೋ ಅರ್ಧಕ್ಕೆ ನಿಂತಿತ್ತು. ಈ ಬಾರಿಯ ಬಿಗ್‌ಬಾಸ್ ಇಲ್ಲಿಗೆ ಸ್ಥಗಿತವಾಯಿತು ಎಂದು ಕಿರುತೆರೆ ಪ್ರಿಯರು ನಿರಾಸೆಗೊಂಡಿದ್ದರು. ಆದರೆ ಅಚ್ಚರಿ ಎಂಬಂತೆ ಮತ್ತೆ ಬಿಗ್‌ ಬಾಸ್ ಆರಂಭವಾಯಿತು. ಗ್ರಾಂಡ್ ಫಿನಾಲೆವರೆಗೂ ಬಂದು ತಲುಪಿತು.

ವಿನ್ನರ್‌ಗೆ ಭಾರಿ ಮೊತ್ತದ ಬಹುಮಾನ
ಈ ಹಿಂದಿನ 7 ಸೀಸನ್‌ವರೆಗೂ ವಿಜೇತರಿಗೆ 50 ಲಕ್ಷ ರು. ಬಹುಮಾನ ಸಿಗುತ್ತಿತ್ತು. ಆದರೆ ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದೆ. ಬಹುಮಾನವನ್ನು
ಹೆಚ್ಚಿಸಲಾಗಿದೆ. ವಿಜೇತ ಸ್ಪರ್ಧಿಗೆ 53 ಲಕ್ಷ ರು. ನೀಡಲಾಗಿದೆ. ಮೊದಲ ರನ್ನರ್ ಅಪ್‌ಗೆ 11 ಲಕ್ಷ ರು. ಎರಡನೇ ರನ್ನರ್ ಅಪ್‌ಗೆ 6 ಲಕ್ಷ ರು. ಮೂರನೇ ರನ್ನರ್ ಅಪ್‌ಗೆ 3.5 ಲಕ್ಷ ರು. ಮತ್ತು ಕೊನೆಯ ರನ್ನರ್ ಅಪ್‌ಗೆ 2.5 ಲಕ್ಷ ರು. ಬಹುಮಾನ ಸಿಕ್ಕಿದೆ. ಅರವಿಂದ್ ಗೆ ಒಂದು ಟಾಸ್ಕ್‌ನಲ್ಲಿ ಗೆದ್ದಿದ್ದಕ್ಕೆ 2 ಲಕ್ಷ ರು. ಸಿಕ್ಕಿದೆ.

ಕಿಚ್ಚನಿಗೆ ಬಿಗ್‌ಬಾಸ್ ಗೌರವ
ಬಿಗ್‌ಬಾಸ್‌ನ ಎಂಟು ಸೀಸನ್‌ಗಳನ್ನು ನಡೆಸಿಕೊಟ್ಟ ಕೀರ್ತಿ ಕಿಚ್ಚ ಸುದೀಪ್ ಅವರಿಗೆ ಸಲ್ಲುತ್ತದೆ. ಜತೆಗೆ ಸುದೀಪ್ ಚಿತ್ರರಂಗದಲ್ಲಿ ಸುದೀರ್ಘ 25 ವರ್ಷಗಳನ್ನು ಪೂರೈಸಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿಯ ಬಿಗ್‌ಬಾಸ್‌ನಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಗ್ರಾಂಡ್ ಫಿನಾಲೆಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮ ದಲ್ಲಿ ಸುದೀಪ್ ಅಭಿನಯದ ಸಿನಿಮಾಗಳ ಹಾಡುಗಳಿಗೆ ಸ್ಪರ್ಧಿಗಳು ನೃತ್ಯ ಮಾಡುವ ಮೂಲಕ ಗೌರವ ಸಲ್ಲಿಸಿದರು.