Wednesday, 11th December 2024

MLA Munirathna: ಕೊಲೆ ಬೆದರಿಕೆ, ಜಾತಿ ನಿಂದನೆ; ಬಿಜೆಪಿ ಶಾಸಕ ಮುನಿರತ್ನ ವಶಕ್ಕೆ

MLA Munirathna

ಬೆಂಗಳೂರು: ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದ ನಂಗಲಿ ಬಳಿ ಶಾಸಕನನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ ಲೊಕೇಶನ್‌ ಆಧರಿಸಿ ತೆರಳಿದ್ದ ಪೊಲೀಸರು, ಕೋಲಾರದಿಂದ ಆಂಧ್ರಕ್ಕೆ ತೆರಳುತ್ತಿದ್ದಾಗ ಶಾಸಕ ಮುನಿರತ್ನರನ್ನು (MLA Munirathna) ವಶಕ್ಕೆ ಪಡೆದಿದ್ದಾರೆ.

ಸದ್ಯ ಮುನಿರತ್ನರನ್ನು ಕೋಲಾರದಿಂದ ಬೆಂಗಳೂರಿಗೆ ಪೊಲೀಸರು ಕರೆತರುತ್ತಿದ್ದಾರೆ. ಪ್ರಕರಣ ದಾಖಲಾದ ಬಳಿಕ ಶಾಸಕ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ, ತಾನು ಎಲ್ಲೂ ಹೋಗಿಲ್ಲ ಎಂದು ಮುನಿರತ್ನ ಹೇಳಿದ್ದರು. ಇದೀಗ ಆಂಧ್ರಕ್ಕೆ ತೆರಳುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?

ಗುತ್ತಿಗೆದಾರರಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ದ ಎರಡು ಎಫ್‌ಐಆರ್‌ ದಾಖಲಾಗಿತ್ತು. ಕಸ ನಿರ್ವಹಣೆ ಹಾಗೂ ವಿಲೇವಾರಿ ಸಂಬಂಧ ಲಂಚ ನೀಡುವಂತೆ ಶಾಸಕ ಮುನಿರತ್ನ ಒತ್ತಾಯಿಸಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಎಂಬವರು ದೂರು ನೀಡಿದ್ದರು.

ಇದನ್ನೂ ಓದಿ: Bangalore Hit and Run Case: ಭೀಕರ ಅಪಘಾತ; ಹಿಟ್‌ ಆ್ಯಂಡ್‌ ರನ್‌ಗೆ ಮೂವರು ವಿದ್ಯಾರ್ಥಿಗಳು ಬಲಿ

ಇನ್ನೊಂದು ಜಾತಿನಿಂದನೆ ಕಾಯಿದೆಯಡಿ ದೂರು ದಾಖಲಾಗಿತ್ತು. ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿದ್ದ ಚೆಲುವರಾಜು ಎಂಬುವವರು ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ವೈಯಾಲಿಕಾವಲ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು.