Monday, 14th October 2024

Munirathna Case : ಶಾಸಕ ಮುನಿರತ್ನಗೆ ಜಾಮೀನು, ಆದರೂ ಮತ್ತೆ ಜೈಲು ಸೇರುವ ಸಾಧ್ಯತೆ

ಬೆಂಗಳೂರು ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ (Munirathna Case) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಆದಾಗ್ಯೂ ಅವರ ಮೇಲೆ ಅತ್ಯಾಚಾರದ ಹಾಗೂ ಹನಿಟ್ರ್ಯಾಪ್‌ಗೆ ಕುಮ್ಮಕ್ಕು ನೀಡಿರುವ ಗಂಭೀರ ದೂರು ದಾಖಲಾಗಿದ್ದು ಮತ್ತೊಂದು ಬಾರಿ ಜೈಲು ಸೇರುವ ಸಾಧ್ಯತೆಗಳಿವೆ.

ಜಾತಿನಿಂದನೆ ಕೇಸ್‌ನಲ್ಲಿ ಜೈಲು ಸೇರಿದ್ದ ಮುನಿರತ್ನ ಅವರಿಗೆ 2 ಲಕ್ಷದ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸಬಾರದು, ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿ ಬೆಂಗಳೂರಿನ 82ನೇ ಸಿಸಿಹೆಚ್ ಕೋರ್ಟ್​​ ಜಡ್ಜ್ ಸಂತೋಷ್ ಗಜಾನನ ಭಟ್ ಜಾಮೀನು ನೀಡಿದ್ದಾರೆ. ಮುನಿರತ್ನ ಪರ ವಕೀಲರು ಜಾಮೀನು ಷರತ್ತು ಪೂರೈಸಿದ್ದಾರೆ. ಜೈಲಿನಿಂದ ಬಿಡುಗಡೆಯಾದರೂ ಸಹ ಅತ್ಯಾಚಾರ ಕೇಸ್​ನಲ್ಲಿ ಮತ್ತೆ ಬಂಧನ ಸಾಧ್ಯತೆ ಇದೆ.

ಮುನಿರತ್ನಗೆ ಮತ್ತೊಂದು ಕೇಸ್ ಸಂಕಷ್ಟ

ಮುನಿರತ್ನ ಹಾಗೂ ಅವರ ಗನ್ ಮ್ಯಾನ್ ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿದಂತೆ 7 ಮಂದಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ದಾಖಲಾಗಿದೆ. 40 ವರ್ಷದ ಮಹಿಳೆಯೊಬ್ಬರು ಈ ದೂರು ದಾಖಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತೆಯಾಗಿದ್ದ ಅವರು ಇದೀಗ ದೂರು ದಾಖಲಿಸಿದ್ದಾರೆ.

ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಬುಧವಾರ ತಡರಾತ್ರಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿರುವುದಾಗಿ ಮಹಿಳೆ ಡಿವೈಎಸ್ ಪಿ ದಿನಕರ ಶೆಟ್ಟಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Munirathna: ಮುನಿರತ್ನಗೆ ಇನ್ನೊಂದು ಸಂಕಷ್ಟ, ಲೈಂಗಿಕ ಕಿರುಕುಳ ದೂರು ದಾಖಲು

ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದ ತಮ್ಮ ಮೇಲೆ 2020ರಿಂದ 2022ರವರೆಗೆ ಅತ್ಯಾಚಾರ ನಡೆಸಿದ್ದಾರೆ. ಅದೇ ರೀತಿ ಬೇರೆಯವರನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಬಳಸಿಕೊಂಡಿರುವ ಕುರಿತು ದೂರು ನೀಡಿದ್ದಾರೆ. ದೂರು ಪರಿಶೀಲಿಸಿದ ನಂತರ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈ ಎಸ್ ದಿನಕರ ಶೆಟ್ಟಿ ನೇತೃತೃತ್ವದಲ್ಲಿ ಜೆ. ಪಿ. ಪಾರ್ಕ್ ಬಳಿಯ ಗೋಡೌನ್ ನಲ್ಲಿ ಸಂತ್ರಸ್ತೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಈ ಪ್ರಕರಣ ಸಂಬಂಧ ರಾಮನಗರ ಪೊಲೀಸರು ಮುನಿರತ್ನ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.