Saturday, 14th December 2024

Muda Case: ಮುಡಾ ಪ್ರಕರಣದಲ್ಲಿ ಇಡಿ ಎಂಟ್ರಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್‌ ದಾಖಲು

CM Siddaramaiah

ಬೆಂಗಳೂರು: ಮುಡಾ ನಿವೇಶನ ಹಗರಣದಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ಲೋಕಾಯುಕ್ತ ತನಿಖೆ ನಡೆಸುತ್ತಿರುವ ನಡುವೆ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಎಂಟ್ರಿ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿ, ECIR ದಾಖಲಿಸಿಕೊಂಡಿದ್ದು, ಇದರಿಂದ ಸಿಎಂ ಸಿದ್ದರಾಮಯ್ಯಗೆ (Muda Case) ಮತ್ತೊಂದು ಸಂಕಷ್ಟ ಶುರುವಾಗಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇರೆಗೆ ಇಡಿ ಪ್ರಕರಣ ದಾಖಲಿಸಿಕೊಂಡಿದ್ದು, ECIRನಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಬಿಎಂ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು ಹೆಸರು ಉಲ್ಲೇಖಿಸಲಾಗಿದೆ.

ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್‌ಗಳನ್ನು ಉಲ್ಲೇಖಿಸಿರುವುದರಿಂದ ಇಡಿಯು ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಿಕೊಳ್ಳಬಹುದಾಗಿದೆ. ಅಲ್ಲದೆ ತನಿಖೆಯ ಸಮಯದಲ್ಲಿ ಅವರ ಆಸ್ತಿಗಳನ್ನು ಜಪ್ತಿ ಮಾಡಲೂ ಅವಕಾಶ ಇದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿಕೊಳ್ಳುವ ಇಸಿಐಆರ್ (Enforcement Case Information Report) ಎಂಬುವುದು ಪೊಲೀಸರು ದಾಖಲಿಸಿಕೊಳ್ಳುವ ಎಫ್ಐಆರ್ ಅನ್ನು ಹೋಲುತ್ತದೆ. ಆದರೆ ಇದನ್ನು ಆರೋಪಿಗಳಿಗೆ ನೀಡುವ ಅಗತ್ಯವಿಲ್ಲ. ಬಂಧನಕ್ಕೆ ಕಾರಣಗಳನ್ನು ತಿಳಿಸದೆ ಇಸಿಐಆರ್ ಆಧಾರದ ಮೇಲೆ ಇಡಿ ಯಾರನ್ನಾದರೂ ಬಂಧಿಸಬಹುದು.

ಈ ಸುದ್ದಿಯನ್ನೂ ಓದಿ | Electoral bonds: ನಿರ್ಮಲಾ ಸೀತಾರಾಮನ್‌ ಸೇರಿ ಬಿಜೆಪಿ ನಾಯಕರಿಗೆ ಬಿಗ್‌ ರಿಲೀಫ್‌; ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಮುಡಾ ಹಗರಣದಲ್ಲಿ (Muda Case) ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಇತರರ ವಿರುದ್ಧ ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಸೆ.27ರಂದು ಎಫ್‌ಐಆರ್ ದಾಖಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿತ್ತು.

ಮುಡಾ ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಎಸ್‌ಪಿಗೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಎ1 ಆಗಿ ಸಿದ್ದರಾಮಯ್ಯ, ಎ2 ಪತ್ನಿ ಪಾರ್ವತಿ, ಎ3 ಸಿದ್ಧರಾಮಯ್ಯ ಬಾಮೈದ ಮಲ್ಲಿಕಾರ್ಜನ ಸ್ವಾಮಿ, ಎ4 ಭೂ ಮಾಲೀಕ ದೇವರಾಜು ಹಾಗೂ ಎ5 ಆರೋಪಿಯಾಗಿ ಇತರರು ಎಂದು ಉಲ್ಲೇಖಿಸಲಾಗಿದೆ.