Saturday, 14th December 2024

MUDA Scandal: ಮುಡಾ ಹಗರಣದಲ್ಲಿ ಮೊದಲ ತಲೆದಂಡ, ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅಮಾನತು

muda dinesh kumar

ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ಮುಡಾ ಹಗರಣದಲ್ಲಿ (Muda Scandal) ಮೊದಲ ತಲೆದಂಡವಾಗಿದ್ದು, ಮುಡಾದ ಹಿಂದಿನ ಆಯುಕ್ತ ಜಿಟಿ ದಿನೇಶ್ ಕುಮಾರ್ (GT Dinesh Kumar) ಅವರನ್ನು ರಾಜ್ಯಪಾಲರ ಆದೇಶಾನುಸಾರ ಅಮಾನತು ಮಾಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಂಚಿಕೆ ಹಗರಣ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೂ ಕಂಟಕ ತಂದಿಟ್ಟಿದ್ದು, ನಿನ್ನೆಯೂ ಹೈಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ನಡೆದಿತ್ತು. ಇದೀಗ ಹಗರಣಕ್ಕೆ ಸಂಬಂಧಿಸಿ ಮೊದಲ ತಲೆದಂಡವಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಿಂದಿನ ಆಯುಕ್ತರಾಗಿದ್ದ, ಈಗ ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿರುವ ಜಿ.ಟಿ ದಿನೇಶ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಾವೇರಿ ವಿವಿ ಕುಲಸಚಿವ ನೇಮಕಾತಿಯಿಂದ ಕೂಡಲೇ ಅವರ ನೇಮಕ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು, ಆದರೆ ಆರೋಪ ಕೇಳಿ ಬಂದ ಮೇಲೂ ಈ ರೀತಿ ನೇಮಕ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿ ಆಕ್ಷೇಪಿಸಿತ್ತು.

ಈ ಬೆಳವಣಿಗೆಗಳ ನಡುವೆ ರಾಜ್ಯಪಾಲರ ಆದೇಶಾನುಸಾರ, ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ. ಮುಡಾ ಮಾಜಿ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರು ಸರಕಾರಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಇವರಿಬ್ಬರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸುವಂತೆ ವಕೀಲ ಅರುಣಕುಮಾರ್ ಎನ್ನುವವರು ಮೈಸೂರಿನ ಲಕ್ಷ್ಮಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಡಾ ಹಗರಣದ ಆರೋಪ ಕೇಳಿಬಂದ ಹೊತ್ತಿನಲ್ಲಿಯೇ, ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ವರ್ಗಾಯಿಸಿತ್ತು. ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಯುತ್ತಿದ್ದರೂ ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿತ್ತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸುದೀರ್ಘ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕಳೆದ ವಿದಾನಮಂಡಲ ಅಧಿವೇಶವನ್ನು ವಾಲ್ಮೀಕಿ ನಿಗಮ ಹಗರಣ ಹಾಗೂ ಮುಡಾ ಹಗರಣ ನುಂಗಿಹಾಕಿತ್ತು. ಮುಡಾ (Muda) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಈ ವಿಚಾರವಾಗಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಥ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದು ನಿನ್ನೆ ವಿಚಾರಣೆಗೆ ಬಂದಿದ್ದು, ಸೆ.9 ಹಾಗೂ 12ನೇ ತಾರೀಕುಗಳಿಗೆ ಮುಂದೂಡಲ್ಪಟ್ಟಿದೆ.