Friday, 13th December 2024

Murder Case: ಗಂಡನನ್ನು ಬಿಟ್ಟು ತನ್ನೊಂದಿಗೆ ಬಾರದ ಪ್ರಿಯತಮೆಯನ್ನು ಕೊಂದು ತಾನೂ ನೇಣು ಹಾಕಿಕೊಂಡ!

murder case

ಬೆಂಗಳೂರು: ಅನೈತಿಕ ಸಂಬಂಧ (Illicit relationship) ಹೊಂದಲು ಬಯಸಿದ್ದ ಪ್ರಿಯಕರನೊಬ್ಬ, ಗಂಡನನ್ನು ತೊರೆದು ತನ್ನೊಂದಿಗೆ ಬರದಿದ್ದಕ್ಕೆ ಸಿಟ್ಟಿನಿಂದ‌ ವಿವಾಹಿತೆ ಮಹಿಳೆಯನ್ನು (bengaluru crime news) ಚಾಕುವಿನಿಂದ ಇರಿದು ಹತ್ಯೆ (Murder Case) ಮಾಡಿದ್ದಾನೆ. ಬಳಿಕ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ.

ಈ ಘಟನೆ ಬೆಂಗಳೂರಿನ ನಲ್ಲೂರ ಹಳ್ಳಿಯಲ್ಲಿ ನಡೆದಿದೆ. ಮೊವುಹಾ ಮಂಡಲ್ (26) ಹತ್ಯೆಯಾದ ಮಹಿಳೆ. ಮಿಥುನ್ ಮಂಡಲ್ (40) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ. ಮಿಥುನ್ ಮಂಡಲ್ ಹಾಗೂ ಮೊವುಹಾ ಮಂಡಲ್​ ಇಬ್ಬರೂ ಪಶ್ಚಿಮ ಬಂಗಾಳ ಮೂಲದವವರಾಗಿದ್ದು, ಕಳೆದ ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಮಿಥುನ್ ಹಾಗೂ ಮೋವುಹಾ ಇಬ್ಬರೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಒಬ್ಬರಿಗೊಬ್ಬರು ಪರಿಚಯವಾಗಿ ಪ್ರೀತಿಗೆ ತಿರುಗಿದೆ. ಬಳಿಕ ಗಂಡನನ್ನು ತೊರೆದುಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮೊವುಹಾ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಸಹ ಪ್ರಾಣ ಕಳೆದುಕೊಂಡಿದ್ದಾನೆ.

2017ರಲ್ಲಿ ಮದುವೆಯಾಗಿದ್ದ ಮೊವುಹಾ ಮಂಡಲ್ ಮತ್ತು ಹರಿಪಾದ ಮಂಡಲ್ ದಂಪತಿ 2021ರಲ್ಲಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಮೊವುಹಾ, ಕಾಲೇಜಿನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕಿದ್ದಳು. ಅದೇ ಕಾಲೇಜಿನಲ್ಲಿ ಮಿಥುನ್ ಸಹ ಹೌಸ್ ಕೀಪಿಂಗ್ ಸೂಪರ್ ವೈಸರ್ ಆಗಿದ್ದ. ಹೀಗಾಗಿ ಮಿಥುನ್​ಗೆ ಮೋವುಹಾ ಮಂಡಲ್ ಪರಿಚಯವಾಗಿದೆ. ನಂತರ ಮೋವುಹಾ ಮಂಡಲ್‌ಗೆ ತನ್ನನ್ನ ಪ್ರೀತಿಸುವಂತೆ ಕೇಳಿಕೊಂಡಿದ್ದ. ಆದರೆ, ತನಗೆ ಮದುವೆಯಾಗಿದೆ ಎಂದು ಮೋವುಹಾ ಹೇಳಿದ್ದಳು. ಆದರೂ ಸಹ ಗಂಡನನ್ನು ತೊರೆದು ತನ್ನ ಜೊತೆ ಇರುವಂತೆ ಮಿಥುನ್ ಒತ್ತಾಯಿಸಿದ್ದಾನೆ. ಆದರೆ ಮೋವುಹಾ ಮಂಡಲ್ ಒತ್ತಡಕ್ಕೆ ಮಣಿಯದೆ ಗಂಡನನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.

ಈ ವಿಚಾರ ಕಾಲೇಜು ಆಡಳಿತ ಮಂಡಳಿಗೆ ಗೊತ್ತಾಗಿ ಮಿಥುನ್‌ನನ್ನು ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ಮೊವುಹಾ ಸಹ ಕೆಲಸ ಬಿಟ್ಟಿದ್ದಳು. ಆದರೂ ಸಹ ಮಿಥುನ್, ಮೊವುಹಾಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಆಕೆ ಮೇಲೆ ಹಗೆತನ ಸಾಧಿಸಿದ್ದಲ್ಲದೆ ಸಾಯಿಸುವ ಸಂಚು ರೂಪಿಸಿದ್ದ. ಬುಧವಾರ (ಡಿ.11) ರಾತ್ರಿ ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಹಿಂದಿನ ಗೇಟ್ ರಸ್ತೆ ಮನೆ ಬಳಿ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ.

ವೈಟ್ ಫೀಲ್ಡ್ ಠಾಣೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪೊಲೀಸರ ಬಂಧನದ ಭೀತಿಯಿಂದಾಗಿ ಆರೋಪಿ ಮಿಥುನ್ ಇಂದು ಗುರುವಾರ ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಬಳಿ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.