Friday, 13th December 2024

Murder Case: ಹಸುಗೂಸನ್ನು ನೀರಿನ ಟ್ಯಾಂಕಿಗೆ ಎಸೆದು ಕೊಲೆ, ಅಂತರ್ಜಾತೀಯ ಮದುವೆಗೆ ಸೇಡು?

anekal child murder case

ಆನೇಕಲ್‌: ವರ್ಷದ ಹಸುಗೂಸನ್ನು ಮನೆಯ ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ (Murder Case) ಮಾಡಿರುವ ದಾರುಣ ಘಟನೆ ಬೆಂಗಳೂರು ನಗರ (Bengaluru crime news) ಜಿಲ್ಲೆಯ ಆನೇಕಲ್‌ನಲ್ಲಿ ವರದಿಯಾಗಿದೆ. ಚಂದಾಪುರ ಸಮೀಪದ ಇಗ್ಗಲೂರಿನಲ್ಲಿ ಈ ಘಟನೆ ನಡೆದಿದೆ.

ಮನು ಮತ್ತು ಹರ್ಷಿತಾ ಎಂಬ ದಂಪತಿಗೆ ಸೇರಿದ ಮಗು ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ 12:45 ರ ಸುಮಾರಿಗೆ ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಸುತ್ತಮುತ್ತ ಎಷ್ಟೇ ಹುಡುಕಾಡಿದರು ಮಗು ಪತ್ತೆಯಾಗಿರಲಿಲ್ಲ. ಈ ಬಗ್ಗೆ ಸೂರ್ಯನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರ ಪರಿಶೀಲನೆ ವೇಳೆ ಮನೆಯ ಸಿಂಟೆಕ್ಸ್ ನೀರಿನ ಟ್ಯಾಂಕ್ ನಲ್ಲಿ ಮಗು ಶವ ಪತ್ತೆಯಾಗಿದೆ.

ಮಗುವಿನ ಪೋಷಕರು ಅಂತರ್ಜಾತಿ ವಿವಾಹವಾಗಿದ್ದರು. ಇದು ಇಬ್ಬರ ಕಡೆಯ ಬಂಧುಗಳಲ್ಲಿ ದ್ವೇಷ ಮೂಡಿಸಿತ್ತು. ಅಂತರ್ಜಾತಿ ವಿವಾಹದ ವೈಷಮ್ಯಕ್ಕೆ ಮಗುವನ್ನು ಕೊಂದಿರುವ ಆರೋಪ ಮಾಡಲಾಗಿದೆ.ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರ್ಷಿತಾ ಗರ್ಭಿಣಿಯಾದಾಗ ಆಗಿದ್ದ ಸಮಸ್ಯೆಯಿಂದಾಗಿ ಆರೂವರೆ ತಿಂಗಳಿಗೆ ಮಗುವನ್ನು ಸಿಜೇರಿಯನ್‌ ಮೂಲಕ ಹೊರತೆಗೆಯಲಾಗಿತ್ತು. ಆ ಬಳಿಕ ಉಸಿರಾಟದ ತೊಂದರೆ ಎದುರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಹಂತದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗು ಸಂಪೂರ್ಣ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು.

ಮನೆ ವಿಷಯ ಸಂಪೂರ್ಣವಾಗಿ ಗೊತ್ತಿರುವ ವ್ಯಕ್ತಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬರೀ ಐದು ನಿಮಿಷದಲ್ಲೇ ಕೃತ್ಯ ಎಸಗಲಾಗಿದೆ. “ನನ್ನ ಭಾಮೈದ ಒಂದು ವರ್ಷದ ಹಿಂದೆ ರೆಡ್ಡಿ ಜನಾಂಗದಲ್ಲಿ ಮದುವೆಯಾಗಿದ್ದ. ಅದಕ್ಕೂ ಮುನ್ನ ಮೂರು ವರ್ಷಗಳ ಕಾಲ ಇದರ ಬಗ್ಗೆ ಭಾರೀ ಕೋಲಾಹಲವಾಗಿತ್ತು. ಬಳಿಕ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಾದ ಬಳಿಕ, ಮೇಜರ್‌ ಆಗಿರುವ ಕಾರಣ ಇವರಿಬ್ಬರಿಗೂ ಮದುವೆ ಆಗಿತ್ತು. ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದರು” ಎಂದು ಸಂಬಂಧಿ ನಾಗೇಶ್ ಹೇಳಿದ್ದಾರೆ.