Friday, 29th November 2024

Murder Case: ಸೋದರಮಾವನಿಂದ ಆಂಧ್ರದ ವಿದ್ಯಾರ್ಥಿಯ ಕಿಡ್ನಾಪ್‌, ಹಾಕ್‌ಸಾ ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ

ಪಾವಗಡ: ಶಾಲೆಗೆ ಹೋಗಿದ್ದ ವಿದ್ಯಾರ್ಥಿಯನ್ನು ಕಿಡ್ನಾಪ್‌ (Kidnap) ಮಾಡಿ ಕರೆದುಕೊಂಡು ಬಂದು ಹಾಕ್‌ಸಾ ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ (Murder Case) ಮಾಡಿದ ಘಟನೆ ಪಾವಗಡದಲ್ಲಿ ನಡೆದಿದೆ. ಸ್ವತಃ ಮಗುವಿನ ಸೋದರಮಾವನೇ ಈ ಕೃತ್ಯ ಎಸಗಿದ್ದಾನೆ. ಕರ್ನಾಟಕ- ಆಂಧ್ರಪ್ರದೇಶದ ಗಡಿಭಾಗವಾದ ಪಾವಗಡದಲ್ಲಿ ಈ ಕೃತ್ಯ (Crime news) ನಡೆದಿದೆ.

ಆಂಧ್ರಪ್ರದೇಶಕ್ಕೆ ಸೇರಿದ ಪ್ರದೇಶದಲ್ಲಿ ವಿದ್ಯಾರ್ಥಿಯ ಮನೆಯಿದೆ. ಸೋದರಮಾವನ ಮನೆ ಹಾಗೂ ಜಮೀನು ಕರ್ನಾಟಕದ ಭಾಗದಲ್ಲಿದ್ದು, ಆತ ಬಾಲಕನನ್ನು ಕಿಡ್ನಾಪ್‌ ಮಾಡಿ ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿರುವ ಆರೋಪಿಯನ್ನು ಕೇವಲ 8 ತಾಸಿನಲ್ಲಿ ಮಡಕಶಿರಾ ಪೊಲೀಸ್ ಅಧಿಕಾರಿಗಳು ಹಿಡಿದಿದ್ದಾರೆ.

ಪಾವಗಡ ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಯ ಕೊಲೆಯಾಗಿದೆ. ಆಂಧ್ರದ ಪೊಲೀಸರು ಬಂದು ಮಾಹಿತಿ ಪಡೆದು ತನಿಖೆ ನಡೆಸಿ ಸೋದರಮಾವನನ್ನು ಬಂಧಿಸಿ ತನಿಖೆಗಾಗಿ ಕರೆದೊಯ್ದಿದ್ದಾರೆ. ಕೊಲೆ ನಡೆದ ಮಾಹಿತಿ ಕರ್ನಾಟಕದ ಪೊಲೀಸರಿಗೆ ಇರಲೇ ಇಲ್ಲ ಎಂದು ಗೊತ್ತಾಗಿದೆ.

ಪಾವಗಡ ಗಡಿ ಪ್ರಾಂತದ ಅಂದಲ್ಗುಂದಿ ಗ್ರಾಮಕ್ಕೆ ಸೇರಿದ 8ನೇ ತರಗತಿ ವಿದ್ಯಾರ್ಥಿ ಚೇತನ್ ಕೊಲೆಯಾದವನು. ಈತನ ತಂದೆ ವೆಂಕಟಸ್ವಾಮಿ, ತಾಯಿ ಪುಷ್ಪ. ಆಂಧ್ರದ ಸರ್ಕಾರಿ ಶಾಲೆಗೆ ಹೋದ ವಿದ್ಯಾರ್ಥಿ ಬೆಳಿಗ್ಗೆ 12:30ರಿಂದ ಕಾಣೆಯಾಗಿದ್ದ. ವಿದ್ಯಾರ್ಥಿಯನ್ನು ಆತನ ಸೋದರ ಮಾವ ಅಶೋಕ್ ಎಂಬಾತ ಕಿಡ್ನಾಪ್ ಮಾಡಿ ತದನಂತರ ಪಾವಗಡ ವ್ಯಾಪ್ತಿಯ ಜಮೀನಿಗೆ ಕರೆತಂದು ಕುತ್ತಿಗೆಯನ್ನು ಹಾಕ್‌ಸಾ ಬ್ಲೇಡ್‌ನಿಂದ ಕೊಯ್ದು ಸಾಯಿಸಿದ್ದಾನೆ.

ಶವ ಪಾತಕಿಯ ಜಮೀನಿನಲ್ಲಿ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಮಡಕಶಿರಾ ಎಸ್‌ಪಿ ರತ್ನ, ಪೆನಗೊಂಡ ಡಿವೈಎಸ್ಪಿ ವೆಂಕಟೇಶಲು, ಮಡಕಶಿರ ಸಿಪಿಐ ರಾಗಿ ರಾಮಯ್ಯ ಬಂದು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Double Murder: ಬೆಂಗಳೂರಿನ ಶೆಡ್‌ನಲ್ಲಿ ಡಬಲ್‌ ಮರ್ಡರ್:‌ ಬಸ್‌ ಕ್ಲೀನರ್‌ಗಳ ಕೊಲೆ