Thursday, 3rd October 2024

Nandini Ghee: ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ಪೂಜೆ, ಪ್ರಸಾದಕ್ಕೆ ʼನಂದಿನಿ ತುಪ್ಪʼ ಕಡ್ಡಾಯ: ಸರ್ಕಾರ ಆದೇಶ

Muzrai Temples

ಬೆಂಗಳೂರು: ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಕೆ ಆರೋಪಗಳು ಕೇಳಿಬಂದಿರುವ ನಡುವೆ ರಾಜ್ಯದ ಮುಜರಾಯಿ ಇಲಾಖೆಯ (Muzrai Temples) ಎಲ್ಲ ದೇವಸ್ಥಾನಗಳಲ್ಲಿ ಪೂಜೆ, ಪ್ರಸಾದ ತಯಾರಿಸಲು ಕಡ್ಡಾಯವಾಗಿ ನಂದಿನಿ ತುಪ್ಪವನ್ನು (Nandini Ghee) ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವೆಗಳನ್ನು ನಡೆಸಲು ಮತ್ತು ಪ್ರಸಾದ ತಯಾರಿಸಲು ನಂದಿನಿ ತಪ್ಪವನ್ನಷ್ಟೇ ಬಳಸಬೇಕು ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ ದೀಪಗಳು, ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನಗಳಲ್ಲಿ ನಂದಿನಿ ತುಪ್ಪವನ್ನಷ್ಟೇ ಬಳಕೆ ಮಾಡಬೇಕು. ಜತೆಗೆ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕೆಎಂಎಫ್‌ ಇತ್ತೀಚಿಗೆ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಸರಬರಾಜು ಮಾಡುವ ಒಪ್ಪಂದವನ್ನು ಮರು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ನಂದಿನಿ ತುಪ್ಪ ಬಳಕೆ ಮಾಡಲು ತೀರ್ಮಾನಿಸಿದೆ.

ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮಾನಾಯ್, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ನಂದಿನಿ ತುಪ್ಪ ಬಳಕೆಗೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಇಲಾಖೆ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ | Tirupati Laddoo Row : ದೇವರ ಹೆಸರಲ್ಲಿ ರಾಜಕೀಯ; ನಾಯ್ಡು ವಿರುದ್ಧ ಟೀಕೆ ಮಾಡಿದ ಜಗನ್‌ ರೆಡ್ಡಿ

ಟಿಟಿಡಿಯಲ್ಲಿ ಕಲಬೆರಕೆ ತುಪ್ಪ ಬಳಕೆ ಆರೋಪದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್‌ ಅವರು, ಈ ಆರೋಪಗಳಿಗೂ, ನಮ್ಮ ನಂದಿನಿ ಬ್ರ್ಯಾಂಡ್​ಗೂ ಸಂಬಂಧವಿಲ್ಲ. ಕಳೆದ 4 ವರ್ಷಗಳಿಂದ ನಂದಿನಿ ತುಪ್ಪ‌ ಅಲ್ಲಿಗೆ ಹೋಗಿಲ್ಲ. ಈಗ ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಮಾಡಲು ಶುರು ಮಾಡಿದ್ದೇವೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 3 ರಿಂದ 4 ಮೆಟ್ರಿಕ್‌ ಟನ್ ತುಪ್ಪ ಸರಬರಾಜು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು. ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಪ್ರಸಾದಕ್ಕೆ ಬಳಕೆಯಾಗುವ ವಸ್ತುಗಳ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಲು ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ನಂದಿನಿ ತುಪ್ಪ ಬಳಸಲು ಇಲಾಖೆ ಸೂಚಿಸಿದೆ.