ಸಿದ್ದಲಿಂಗಯ್ಯ ಮತ್ತು ಹಾಸ್ಯ
ವೆಂಕಟೇಶ ಆರ್.ದಾಸ್
ಸಿದ್ಧಲಿಂಗಯ್ಯಅವರು ತಮ್ಮ ಹೋರಾಟದಷ್ಟೇ ಜನಪ್ರಿಯರಾಗಿದ್ದು, ತಮ್ಮ ಹಾಸ್ಯ ಅಭಿರುಚಿಯ ಮೂಲಕ. ಅವರ ಹಾಸ್ಯ ಎಷ್ಟರಮಟ್ಟಿಗೆ ಪ್ರಸಿದ್ಧಿಯಾಗಿತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿರುವಂತಹದ್ದೆ.
ನನಗೆ ಸಿದ್ಧಲಿಂಗಯ್ಯ ಅವರು ಪರಿಚಯವಾಗಿದ್ದು, ಅವರು ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ
ನಂತರ. ಅವರಿಗೆ ತವರೂರ ಸನ್ಮಾನ ಎಂಬ ಕಾರ್ಯಕ್ರಮದಡಿ ಶ್ರೀರಾಂಪುರದಲ್ಲಿ ಸನ್ಮಾನಿ ಸಿದ್ದರು. ಅಲ್ಲಿಗೆ ನಾನು ಕಾರ್ಯ ಕ್ರಮದ ವರದಿಗೆ ತೆರಳಿದ್ದೆ. ಅಲ್ಲಿ ಅವರ ಬಾಲ್ಯ, ಸ್ಮಶಾನದಲ್ಲಿ ಕುಳಿತು ಕವಿತೆ ಬರೆದ ಪರಿ ಎಲ್ಲವನ್ನೂ ಕೇಳಿ ಅಚ್ಚರಿಗೊಂಡಿದ್ದೆ.
ನಂತರ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ನಮ್ಮೂರೇ ಆದ ಕಾರಣ ಐದು ದಿನವೂ ಭಾಗವಹಿಸಿದ್ದೆ. ಅವರು ಬಿಡುವಿನ ವೇಳೆ ವಿಶ್ರಾಂತಿ ಗೃಹಕ್ಕೆ ತೆರಳಿದ ಸಂದರ್ಭದಲ್ಲೆಲ್ಲ ಅವರ ಜತೆಯಲ್ಲೇ ಇರುತ್ತಿದ್ದೆ. ಅವರ ಶಿಷ್ಯ ವೃಂದದ ಒಡನಾಟವಿದ್ದ ಕಾರಣ, ನನಗೆ ಅವರೊಂದಿಗೆ ಬೆರೆಯುವ ಅವಕಾಶ ಸಿಕ್ಕಿತ್ತು. ಅವರ ಜತೆಗೆ ಇದ್ದ ಹೋ.ಬ. ಪುಟ್ಟೇ ಗೌಡರು,
ಸಿದ್ಧಲಿಂಗಯ್ಯ, ರಾಮೇಗೌಡರು ಎಲ್ಲರೂ ಜತೆಯಲ್ಲಿ ಸೇರಿಕೊಂಡರೆ ಅಲ್ಲಿ ಹಾಸ್ಯದ ಹೊಳೆಯೇ ಹರಿಯುತ್ತಿತ್ತು. ವಿವಿಧ ವಿಚಾರಗಳನ್ನು ಹುಡುಕಿ ನಕ್ಕು ನಗಿಸುತ್ತಿದ್ದರು.
ಅನಂತರ ಅನೇಕ ಸಂದರ್ಭದಲ್ಲಿ ಜತೆಯಾಗಿ ಮಾತುಕತೆಗೆ ಸೇರಿಕೊಂಡಿದ್ದಿದೆ. ಆಗ ಅವರು ಇಂತಹ ಅನೇಕ ಹಾಸ್ಯ ಪ್ರಸಂಗಗಳನ್ನು ಹೇಳಿ ನಮ್ಮನ್ನು ನಗಿಸುತ್ತಿದ್ದರು. ಅವರು ಅಷ್ಟೊಂದು ಹಾಸ್ಯ ಪ್ರಜ್ಞೆ ಹೊಂದಿದ್ದ ಕಾರಣಕ್ಕೋ ಏನೋ,
ನಾನು ಬರೆಯುತ್ತಿದ್ದ ಹಳ್ಳಿಕಟ್ಟೆ ಹಾಸ್ಯ ಅಂಕಣವನ್ನು ಮೆಚ್ಚಿ ಕಚೇರಿಗೆ ಬಂದು ‘ನಿಮ್ಮ ಲೇಖನ ಚೆನ್ನಾಗಿ ಬರುತ್ತಿದೆ. ಈ ರೀತಿ ಗ್ರಾಮ್ಯ ಭಾಷೆ ಬಳಸಿ ಬರವಣಿಗೆ ಮಾಡುವುದು ಬಲು ಕಷ್ಟ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಇಂತಹ ಭಾಷೆ ಬಳಕೆ ಬಲು ಅಪರೂಪ ಲಂಕೇಶ್ ಪತ್ರಿಕೆಯಲ್ಲಿ ಚಂದ್ರೇಗೌಡರು ಬರೆಯುತ್ತಿದ್ದರು, ಅದೇ ರೀತಿ ಬರೆಯುತ್ತೀರಿ ಎಂದು ಬೆನ್ನು ತಟ್ಟಿದ್ದರು.
ಜತೆಗೆ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಊರೂರುಗಳಲ್ಲಿ ಫ್ಲ್ಯಾಕ್ಸ್ ಹಾಕಿದ್ದರಂತೆ, ಅದನ್ನು ಕಂಡು ಅವರು
ಅವರನ್ನೇ ಹಾಸ್ಯ ಮಾಡಿಕೊಳ್ಳುತ್ತಿದ್ದ ಪ್ರಕರಣ ಅವರದೇ ರೀತಿಯಲ್ಲಿ ಹೇಳುವುದಾದರೆ ‘ಆ ಫ್ಲ್ಯಾಕ್ಸ್‌ಗಳೋ ನನಗಿಂತ ದೊಡ್ಡ ದೊಡ್ಡದಾಗಿ ಕಾಣುತ್ತಿತ್ತು.
ಇದನ್ನು ಕಂಡು ಒಬ್ಬ ಮುದುಕಿ ತದೇಕಚಿತ್ತದಿಂದ ನೋಡುತ್ತಿದ್ದಳು. ನಾನು ನನ್ನ ಮೇಲಿನ ಅಭಿಮಾನದಿಂದ ನೋಡುತ್ತಿದ್ದಾರೆ ಎಂದುಕೊಂಡು ಏನಜ್ಜಿ ನೋಡ್ತಾ ಇದ್ದೀಯಾ, ಅವರು ಯಾರು ಗೊತ್ತಾ ಎಂದೆ. ನನ್ನ ಬಣ್ಣಕ್ಕೂ ಆ ಫೋಟೋದಲ್ಲಿರೋ ಬಣ್ಣಕ್ಕೂ ಮ್ಯಾಚ್ ಆಗ್ಲಿಲ್ಲ ಅನ್ಸುತ್ತೆ, ಜತೆಗೆ ಹೈಟು ಬೇರೆ ಡಿಫರೆನ್ಸ್. ಹಿಂಗಾಗಿ, ಆಯಮ್ಮ, ನೋಡಪ್ಪಾ ಯಾರೋ ದೊಡ್ಮನ್ಸ, ಹೋಗ್ಬುಟ್ಟಾ ಅನ್ಸುತ್ತೆ, ಅದ್ಕೆ ಹಿಂದೆ ದೊಡ್ಡದಾಗಿ ಫೋಟೋ ಹಾಕವ್ರೆ’ ಎಂದಿದ್ದನ್ನು ಹೇಳಿಕೊಂಡು ನಗುತ್ತಿದ್ದರು.
ಇಕ್ರಲಾ ಒದಿರ‍್ಲಾ ಎಂಬ ಪದಗಳನ್ನು ಬರೆದು ಫೇಮಸ್ ಆಗಿದ್ದ ಅವರು ‘ಸಿನಿಮಾದಲ್ಲಿ ಗೆಳತಿ..ಓ ಗೆಳತಿ ಎಂದು ಬರೆದ ಬಗ್ಗೆ ಜತೆಯ ಸಾಹಿತಿಗಳು ಆಡಿಕೊಂಡು ನಕ್ಕ ಬಗ್ಗೆ, ಕೆಲವರು ಮುನಿಸಿಕೊಂಡ ಬಗ್ಗೆ ಅವರು ಆಗಾಗ ಹೇಳುತ್ತಿದ್ದರು. ‘ಅಪ್ಪಗೆರೆ ತಿಮ್ಮರಾಜು, ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾಡಗೀತೆ ಹಾಡೋರು ಕೈಕೊಟ್ಟಿದ್ದರಿಂದ ಅವರಿಗೆ
ಹಾಡೋಕೆ ಆಹ್ವಾನ ಬಂತು. ಆ ಪುಣ್ಯಾತ್ಮ ನಾಡಗೀತೆ ಬದಲು ‘ಯಾರಿಗೆ ಬಂತು ಎಲ್ಲಿಗೆ ಬಂತು ೪೭ ರ ಸ್ವಾತಂತ್ರ್ಯ’ ಹಾಡಿಬಿಟ್ಟರು.
ಪೊಲೀಸರು ಅವರನ್ನು ಬಂಧಿಸಿ ಸ್ಟೇಷನ್‌ಗೆ ಕರೆದೊಯ್ದರು. ಸಂಜೆವರೆಗೆ ಕೂರಿಸಿಕೊಂಡಿದ್ದು, ಸಂಜೆ ಸಾಹೇಬ್ರು ಬರೋ
ವೇಳೆಯಲ್ಲಿ ತಿಮ್ಮರಾಜು, ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಹಾಡ್ತಿದ್ದರಂತೆ, ಇನ್ಸ್‌ಪೆಕ್ಟರ್ ಬಂದವರೆ ’ಕರ‍್ಕೊಂಡ್ ಬರ್ರೀ ಅವುನ್ನಾ ಎಂದು, ಯಾರಪ್ಪ ನೀನು ಎಂದು ಆ ಪ್ರೇಮಕವಿತೆ ಕೇಳಿ ತನ್ನ ಹಳೆಯ ಲವ್ ಸ್ಟೋರಿ ನೆನೆದು, ಆಗ ಬಿರಿಯಾನಿ ತಂದು ಕೊಟ್ಟು, ಮತ್ತೊಂದೆರಡು ಹಾಡು ಹಾಡಿಸಿ, ಕಳಿಸಿಕೊಟ್ಟರಂತೆ.
ಸ್ಟೇಷನ್‌ಗೆ ಹೋಗಿದ್ದು ನಿಮ್ಮ ಹಾಡಿಂದ ಹೊರಗೆ ಬಂದಿದ್ದು ನಿಮ್ಮ ಹಾಡಿಂದ ಗುರುಗಳೇ ಅಂತ ಅಪ್ಪಗೆರೆ ನನಗೆ ಆಗಾಗ ಹೇಳ್ತಾ ಇರುತ್ತಾರೆ ಎಂದು ಸಿದ್ಧಲಿಂಗಯ್ಯಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು. ಇನ್ನು ಅವರ ಚಾಲಕರಾದ ಶಂಕರ್ ಅವರ
ಬಗ್ಗೆಯಂತೂ ದಿನವೂ ನಗುವಿನ ಬುಗ್ಗೆಗಳು, ಸಿದ್ಧಲಿಂಗಯ್ಯ ಎಲ್ಲಿ ಹೋದರು ಶಂಕರ್ ಕಡ್ಡಾಯ ಹೋಗ್ತಾರೆ, ‘ನನಗೆ ದಾರಿ ಗೊತ್ತಿದ್ದರೂ, ಹೀಗೆ ಹೋಗಬೇಕು ಕಣಪ್ಪ ಅಂದ್ರೆ ಅವ ಕೇಳೋ ಮನುಷ್ಯನೇ ಅಲ್ಲ, ಹಿಂಗಲ್ಲ ಸಾರ್, ಇದು ಹಂಗೆ ಹಿಂಗೆ ಅಂತ ಊರಿನ ಇತಿಹಾಸವನ್ನೇ ಹೇಳೋಕ್ ಶುರು ಮಾಡ್ತಾನೆ. ನಾನು ಗ್ರಾಮ ದೇವತೆಗಳ ಮೇಲೆ ಸಂಶೋಧನೆ ಮಾಡಿರೋನೆ ಅವರ ಜ್ಞಾನದ ಮುಂದೆ ಮಂಕಾಗ್ತೇನೆ, ಅದ್ರಲ್ಲೂ ನಮ್ಮ ಗನ್ ಮ್ಯಾನ್‌ಗೆ ಅವನು ದಬಾಯಿಸೋದು ನೋಡೋಕೆ ಚೆಂದ’ ಎಂದು ನಕ್ಕು ನಕ್ಕು ಸಾಕಾಗುತ್ತಿದ್ದರು.
ಇನ್ನು ಕೋಲಾರ ಜಿಲ್ಲೆಯಲ್ಲೊಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಭಾಷಣದ ಮಧ್ಯೆಯೇ ಗಲಾಟೆ ಶುರುವಾಯ್ತು. ಆ ಊರಿಂದ ತಪ್ಪಿಸಿಕೊಂಡು ಬೆಂಗ್ಳೂರ್ ಕಡೆಗೆ ಬರೋಕೆ ಹೊರಟೆ. ಒಬ್ಬನೇ ನಡೆದು ಬರ‍್ತಾ ಇದ್ದೆ, ಯಾರೋ ಒಬ್ಬ ‘ಏ ಯಾರೋ ಅದು’ ಅಂದ, ಭಯವಾಗಿ ಕೈಕಾಲೆಲ್ಲ ನಡುಗೋಕೆ ಶುರುವಾಯ್ತು. ನಾನು ಸ್ವಾಮಿ ಹಿಂಗೆ ಸಿದ್ಧಲಿಂಗಯ್ಯಅಂತಾ ಪಕ್ಕದೂರಿಗೆ ಭಾಷಣಕ್ಕೆ ಹೋಗಿದ್ದೆ, ಹಿಂಗಿಂಗೆ ಊರಿಗೆ ಹೋಗ್ಬೇಕು ಅಂದೆ, ಏ ಸ್ವಾಮಿ ಇಷ್ಟೊತ್ನಲ್ಲಿ ಎಲ್ಲೋಯ್ತಿರಿ ಬನ್ನಿ ಅಂತ ಮನೆಗೆ
ಕರ‍್ಕೊಂಡೋಗಿ, ಮನೆ ಮಂದಿಯೆಲ್ಲ ಏಳಿಸಿ, ಲೇ ಇವ್ರು ಸಿದ್ಧಲಿಂಗಯ್ಯಅವ್ರು ಕಣೇ ಅಂತ ಪರಿಚಯ ಮಾಡಿಸಿ, ಮಲಗೋಕೆ
ಜಾಗ ಕೊಟ್ಟು, ಬೆಳಗ್ಗೆ ಸ್ನಾನ ತಿಂಡಿಗೆಲ್ಲ ವ್ಯವಸ್ಥೆ ಮಾಡಿ ಕಳಿಸಿಕೊಟ್ಟ, ಆದ್ರೆ, ಆ ರಾತ್ರಿ ನನಗಾದ ಭಯ ಮಾತ್ರ ಈಗಲೂ ನಡುಗಿಸುತ್ತೆ ಎಂದು ನಗುತ್ತಿದ್ದರು.