Friday, 13th December 2024

Mysuru Dasara 2024: ಮೈಸೂರು ದಸರಾ ವೇಳೆ ಗಣ್ಯರ ಸಾಲಿನಲ್ಲಿ ರೌಡಿಶೀಟರ್ ಪ್ರತ್ಯಕ್ಷ; ಭುಗಿಲೆದ್ದ ಆಕ್ರೋಶ

Mysuru Dasara 2024

ಮೈಸೂರು: ವೈಭವದ ಮೈಸೂರು ದಸರಾ (Mysuru Dasara 2024) ಸಂಪನ್ನವಾಗಿದೆ. ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಶನಿವಾರ ಜರುಗಿದ ಜಂಬೂ ಸವಾರಿಯೊಂದಿಗೆ ಈ ಬಾರಿಯ ಮೈಸೂರು ದಸರಾಕ್ಕೆ ತೆರೆ ಎಳೆಯಲಾಗಿದೆ. ಈ ಮಧ್ಯೆ ವಿವಾದದ ಕಿಡಿಯೊಂದು ಹೊತ್ತಿಕೊಂಡಿದೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಬಳಿ ಇರುವ ರಾಮಾರೂಢ ಮಠದ ಸ್ವಾಮೀಜಿ ಅವರನ್ನು ಹೆದರಿಸಿ 1 ಕೋಟಿ ರೂ. ವಸೂಲಿ ಮಾಡಿದ್ದ ರೌಡಿಶೀಟರ್ ಪ್ರಕಾಶ ಮುಧೋಳ (Prakash Mudhol) ಮೈಸೂರು ದಸರಾ ವೇಳೆ ಗಣ್ಯರ ಸಾಲಿನಲ್ಲಿ ಕಾಣಿಸಿಕೊಂಡಿದ್ದ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್​.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್​ ಕೂತಿದ್ದ ವಿಐಪಿ ಸಾಲಿನಲ್ಲಿ ಪ್ರಕಾಶ್‌ ಮುಧೋಳ ಕುಳಿತಿದ್ದು ಸದ್ಯ ವಿವಾದ ಹುಟ್ಟು ಹಾಕಿದೆ.

ಮೈಸೂರು ದಸರಾ ಕಾರ್ಯಕ್ರಮದ ವೇದಿಕೆ ಮೇಲೆ ಗಣ್ಯರ ಸಾಲಿನಲ್ಲಿ ಕಾಣಿಸಿಕೊಂಡ ರೌಡಿಶೀಟರ್ ಪ್ರಕಾಶ್ ಮುಧೋಳ ಡಿಸಿಎಂ ಡಿಕೆ ಶಿವಕುಮಾರ್, ಎಂಎಲ್‌ಸಿ ಯತೀಂದ್ರ ಜತೆ ಸೆಲ್ಫಿಯನ್ನೂ ತೆಗೆದುಕೊಂಡಿದ್ದಾನೆ. ಗಣ್ಯರ ಸಾಲಿನಲ್ಲಿ ಪ್ರಕಾಶ್‌ ಮುಧೋಳ ಆಸನ ಪಡೆದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಜತೆಗೆ ಗಣ್ಯರ ಸಾಲಿನಲ್ಲಿ ಆತನನ್ನು ಕೂರಿಸಿದ್ದು ಏಕೆ ಎಂದು ನೂರಾರು ಮಂದಿ ಪ್ರಶ್ನಿಸುತ್ತಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ರಾಮಾರೂಢ ಮಠದ ಸ್ವಾಮೀಜಿ ಅವರನ್ನು ವಂಚಿಸಿದ ಪ್ರಕರಣದಲ್ಲಿ ಪೊಲೀಸರು ವಸಕ್ಕೆ ಪಡೆದಿದ್ದ ಪ್ರಕಾಶ್‌ 4 ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.

ಯಾರು ಈ ಪ್ರಕಾಶ್ ಮುಧೋಳ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ (JDS)ನಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪ್ರಕಾಶ್ ಮುಧೋಳ ಸೋಲು ಕಂಡಿದ್ದ. ಈತ ಸೆಪ್ಟೆಂಬರ್​ 15ರಂದು ಪರಮರಾಮಾರೂಢ ಸ್ವಾಮೀಜಿ ಅವರಿಗೆ ಕರೆ ಮಾಡಿ, ತಾನು ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ “ನಿಮ್ಮ ವಿರುದ್ಧ ಗೃಹ ಸಚಿವ ಕಚೇರಿಯಿಂದ ಬೆಂಗಳೂರಿನ ನಮ್ಮ ಕಚೇರಿವರೆಗೆ ಸಾಕಷ್ಟು ದೂರು ಬಂದಿವೆ. ಅವುಗಳನ್ನು ವಿಚಾರಣೆ ಮಾಡಬೇಕು. ಏನು ಈ ರೀತಿ ಮಾಡಿದ್ದೀಯಾ?ʼʼ ಎಂದು ಏಕವಚನದಲ್ಲಿ ನಿಂದಿಸಿದ್ದ. ಅಲ್ಲದೆ ಜೀವನ ಪರ್ಯಂತ ಜೈಲು ಗತಿ ಕಾಣಸ್ತೀವಿ ಹಾಗೂ ಮಠದ ಮಾನ ಮರ್ಯಾದೆ ಹರಾಜು ಮಾಡ್ತೀವೆ ಎಂದೂ ಬೆದರಿಕೆ ಹಾಕಿದ್ದ.

ಜತೆಗೆ ಕೇಸ್‌ಗಳನ್ನು ಮುಚ್ಚಿ ಹಾಕಲು ಎಡಿಜಿಪಿ ಸಾಹೇಬರಿಗೆ ಹಣ ಕೊಡಬೇಕು ಎಂದ ಆರೋಪಿ 1 ಕೋಟಿ ರೂ.ಗೆ ಬೇಡಿಗೆ ಇಟ್ಟಿದ್ದ. ಬಳಿಕ ಮತ್ತೊಂದು ನಂಬರ್​ನಿಂದ ಸ್ವಾಮೀಜಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಇದರಿಂದ ಗಾಬರಿಗೊಂಡ ಸ್ವಾಮೀಜಿ ಅವರು ಹಣದ ವ್ಯವಸ್ಥೆ ಮಾಡಿದ್ದರು. ಬಳಿಕ ಪ್ರಕಾಶ್‌ನ ಸೂಚನೆ ಮೇರೆಗೆ ಸೆ. 16ರಂದು ಬೆಂಗಳೂರು ವಿಧಾನಸೌಧ ಹತ್ತಿರ ಸ್ವಾಮೀಜಿ ಕಡೆಯಿಂದ ಬಂದಿದ್ದ ಶಿವಕುಮಾರ್‌ ಎನ್ನುವವರು 61 ಲಕ್ಷ ರೂ. ನಗದು ಹಾಗೂ 2 ಖಾಲಿ ಚೆಕ್​ ನೀಡಿದ್ದರು. ಇದೇ ವೇಳೆ ಆರೋಪಿ ಕೆಲ ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದ. ಉಳಿದ 39 ಲಕ್ಷ ರೂ. ಹಣವನ್ನು ಶಿವಕುಮಾರ್​ ಸೆ. 20ರ ಮಧ್ಯರಾತ್ರಿ ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ನೀಡಿದ್ದರು. ಹೀಗೆ ಒಟ್ಟು 1 ಕೋಟಿ ರೂ. ಹಣವನ್ನು ಆರೋಪಿ ಪ್ರಕಾಶ್​​ಗೆ ನೀಡಲಾಗಿತ್ತು.

ಈ ಸುದ್ದಿಯನ್ನೂ ಓದಿ: Mysuru Dasara 2024: ಮೈಸೂರು ದೀಪಾಲಂಕಾರ 12 ದಿನ ವಿಸ್ತರಣೆ; ಡಿ.ಕೆ.ಶಿವಕುಮಾರ್‌

ಇಷ್ಟಕ್ಕೇ ಸುಮ್ಮನಾಗದ ಆರೋಪಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಪರಮರಾಮಾರೂಢ ಸ್ವಾಮೀಜಿ ಬಾಗಲಕೋಟೆ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಎಫ್​ಐಆರ್ ದಾಖಲಿಸಿಕೊಂಡ ಸಿಇಎನ್​ ಠಾಣೆ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿದ್ದರು. ಜತೆಗೆ ನಗದನ್ನು ವಶಪಡಿಸಿಕೊಂಡಿದ್ದರು.