Thursday, 3rd October 2024

Mysuru Dasara 2024: ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಈ ಬಾರಿಯ ದಸರಾ ಉದ್ಘಾಟಕರು

Mysuru Dasara 2024

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ (Mysuru Dasara 2024) ಕೆಲವೇ ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ (Dr. Hampa Nagarajaiah) ಅವರು 2024ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದವು. ಈ ನಡುವೆ ಸಿಎಂ ಸಿದ್ದರಾಮಯ್ಯನವರೇ ಹಿರಿಯ ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಉದ್ಘಾಟಕರಾಗಿ ಕರೆಸಿದರೆ ಹೇಗೆ ಎಂಬ ಪ್ರಸ್ತಾಪ ಮಾಡಿದ್ದರು. ಹಂಪನಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಹಿರಿಯ ತಲೆಮಾರಿನ ಸಾಹಿತಿ ಎನ್ನುವ ದೃಷ್ಟಿಕೋನದಿಂದ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಲು ಸಿಎಂ ಸಿದ್ದರಾಮಯ್ಯ ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಅದರಂತೆ ಪ್ರೊ. ಹಂ.ಪ.ನಾಗರಾಜಯ್ಯ ಅವರನ್ನೇ ಆಯ್ಕೆ ಮಾಡಲಾಗಿದೆ.

ಯಾರಿವರು ಹಂ.ಪ. ನಾಗರಾಜಯ್ಯ?

ಕನ್ನಡ ಸಾರಸ್ವತ ಲೋಕದಲ್ಲಿ ಹಂಪನಾ ಎಂದೇ ಚಿರ ಪರಿಚಿತರಾಗಿರುವ ಹಂ.ಪ. ನಾಗರಾಜಯ್ಯನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ 1936ರ ಅ.7ರಲ್ಲಿ ಶಾನುಬೋಗ ಪದ್ಮನಾಭಯ್ಯ – ಪದ್ಮಾವತಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಆನರ್ಸ್‌ ಪದವಿ, ಮೈಸೂರು ವಿವಿಯಲ್ಲಿ ಎಂಎ ಪದವಿ ಪಡೆದಿರುವ ಇವರು, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿವಿಯಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. 1959ರಿಂದ ಅಧ್ಯಾಪಕ ವೃತ್ತಿ ಜೀವನ ಆರಂಭಿಸಿದ ಹಂಪನಾ ಅವರು ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮಂಡ್ಯ, ದಾವಣಗೆರೆ, ಬೆಂಗಳೂರಿನ ಸರ್ಕಾರಿ ಕಾಲೇಜು, ಬೆಂಗಳೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇದರ ಜತೆಗೆ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 14ಕ್ಕೂ ಹೆಚ್ಚು ಕೃತಿಗಳು 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ನೇಮಕ ಮಾಡಲಾಗಿದೆ.

ಅ. 3ರಿಂದ ದಸರಾ ಆರಂಭ

ವಿಶ್ವ ವಿಖ್ಯಾತ ಮೈಸೂರು ದಸರಾ-2024 ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಅಕ್ಟೋಬರ್ 3ರಿಂದ 12ರವರೆಗೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲಾಗುವುದು ಎಂದು ತಿಳಿಸಿದ್ದರು.

ಅ. 3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನೆ ದಿನವೇ ವಸ್ತು ಪ್ರದರ್ಶನ ಕೂಡಾ ಆರಂಭಿಸಲು ಸೂಚಿಸಲಾಗಿದ್ದು, ಎಲ್ಲಾ ಮಳಿಗೆಗಳು ಉದ್ಘಾಟನೆಯಂದೇ ಸಜ್ಜುಗೊಳಿಸಲು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ವಸ್ತು ಪ್ರದರ್ಶನದಲ್ಲಿ ಎಲ್ಲ ಇಲಾಖೆಗಳ ಮಳಿಗೆಗಳಲ್ಲಿ ಸರ್ಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಕೆಲಸವಾಗಬೇಕು ಎಂದು ಸೂಚಿಸಲಾಗಿದೆ ಎಂದರು.

ಆಗಸ್ಟ್‌ 21 ರಂದು ಬೆಳಗ್ಗೆ 10.10 ಗಂಟೆಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪೂಜೆ ಮಾಡಲಾಗುವುದು. ಅಕ್ಟೋಬರ್‌ 3 ರಿಂದ 12ರ ವರೆಗೆ ನಡೆಯಲಿದೆ. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10ನೇ ದಿನ ಜಂಬೂ ಸವಾರಿ ಏರ್ಪಾಡು ಮಾಡಲಾಗತ್ತದೆ. ಅಕ್ಟೋಬರ್‌ 12 ರಂದು ಮಧ್ಯಾಹ್ನ 1.41 ರಿಂದ 2.10 ಗಂಟೆಯ ವರೆಗೆ ಜಂಬೂ ಸವಾರಿ, ನಂದಿ ಧ್ವಜ ಪೂಜೆ ಹಾಗೂ ಸಂಜೆ 4 ಗಂಟೆಯಿಂದ ಪುಷ್ಪಾರ್ಚನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು.

ಈ ಸುದ್ದಿಯನ್ನೂ ಓದಿ | Pralhad Joshi: ಭಾರತ ಜಗತ್ತಿಗೇ ಆಹಾರ ಪೂರೈಸಬಹುದು; ಪ್ರಲ್ಹಾದ್‌ ಜೋಶಿ

ಪ್ರವಾಸಿಗರ ಅನುಕೂಲಕ್ಕಾಗಿ ದೀಪಾಲಂಕಾರವನ್ನು ಕಳೆದ ಬಾರಿ ಒಂದು ವಾರ ವಿಸ್ತರಣೆ ಮಾಡಲಾಗಿತ್ತು. ಈ ಬಾರಿಯೂ ದಸರಾ ನಂತರವೂ ದೀಪಾಲಂಕಾರ ಅವಧಿಯನ್ನು ವಿಸ್ತರಿಸಿ 21 ದಿನಗಳ ಕಾಲ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದ್ದರು.