Friday, 13th December 2024

ಯಾವುದೇ ಕಾರಣಕ್ಕೂ ಕಾಂಗ್ರೆಸ್ ತ್ಯಜಿಸಲ್ಲ : ನಾರಾಯಣ್

ತಿಪಟೂರು: ನಾನು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರುತ್ತಿದ್ದೇನೆ ಎನ್ನುವ ಸುದ್ದಿ ಸುಳ್ಳು. ನಾನು ಕೊನೆಯವರೆಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯು ತ್ತೇನೆ. ಇತ್ತೀಚೆಗೆ ತಾನು ಜೆಡಿಎಸ್ ಪಕ್ಷ ಸೇರುವುದಾಗಿ ಕೆಲವರು ಅಪಪ್ರಚಾರ ಮಾಡಿದ್ದಾರೆ. ಆದರೆ ನಮ್ಮ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ನಾಯಕರುಗಳನ್ನು ಬಿಟ್ಟು ನಾನು ಹೋಗುವುದಿಲ್ಲ. ಇತ್ತೀಚೆಗೆ ನಾನು ಸಿದ್ದರಾಮಯ್ಯರವರನ್ನು ಭೇಟಿ ಮಾಡಿದ್ದು ಅವರೂ ಕೂಡ ಪಕ್ಷಕ್ಕೆ ಕೆಲಸ ಮಾಡಿಕೊಂಡಿರು ಮುಂದೆ ಯಾವುದಾದರೂ ಹುದ್ದೆ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು.

ಕಳೆದ ಒಂದೂವರೆ ತಿಂಗಳಿಂದ ತಮ್ಮ ಹಾಗೂ ಕುಟುಂಬದ ಆರೋಗ್ಯ ಸಮಸ್ಯೆಯ ಕಾರಣ ನಾನು ಕ್ಷೇತ್ರದಿಂದ ದೂರ ಉಳಿಯ ಬೇಕಾಗಿ ಬಂತು. ಇದಕ್ಕಾಗಿ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಕ್ಷಮೆ ಕೋರುತ್ತೇನೆ. ಆದರೆ ಯಾವುದೇ ಕಾರಣಕ್ಕೂ ನಾನು ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ನನಗೆ ರಾಜಕೀಯ ಜೀವನ ರೂಪಿಸಿದ ಕ್ಷೇತ್ರ ಇದು. ಕೊನೆಯವರೆಗೂ ಈ ಕ್ಷೇತ್ರದ ಜನರ ಸೇವೆ ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಬದಲ್ಲಿ ತಾಲ್ಲೂಕಿನ ಎಲ್ಲ ಪತ್ರಕರ್ತರಿಗೆ ಹಾಗೂ ಪತ್ರಿಕೆ ಹಂಚುವ ಹುಡುಗರಿಗೆ ಆಹಾರದ ಕಿಟ್‌ಗಳನ್ನು ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸದಾಶಿವಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಉಮಾಮಹೇಶ್, ಮಾಜಿ ಜಿ.ಪಂ. ಸದಸ್ಯ ತ್ರಿಯಂಬಕ ಇತರರು ಉಪಸ್ಥಿತರಿದ್ದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಂಗಸ್ವಾಮಿ ಪತ್ರಕರ್ತರು ಹಾಗೂ ಹಂಚಿಕೆದಾರರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಫೋಟೋ ೧೩ ತಿಪಟೂರು ೧: ತಿಪಟೂರಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್ ಮತ್ತು ಇತರರು.