Friday, 13th December 2024

Navaratri 2024: ದುಷ್ಟಶಕ್ತಿಯ ಕಾಟ ನಿವಾರಿಸುತ್ತಾಳಂತೆ ಕಾತ್ಯಾಯಿನಿ ದೇವಿ

Navaratri 2024

ನವರಾತ್ರಿ(Navaratri 2024) ದಿನ ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ನವರಾತ್ರಿಯ ಒಂಬತ್ತು ದಿನಗಳು ಕೂಡ ಬಹಳ ಶುಭ ದಿನವೇ ಎಂದು ಹೇಳಬಹುದು. ನವರಾತ್ರಿಗಳಲ್ಲಿ ಪಾರ್ವತಿ ದೇವಿಯನ್ನು ಶೈಲಪುತ್ರಿ,  ಬ್ರಹ್ಮಚಾರಿಣಿ,  ಚಂದ್ರಘಂಟಾ,  ಕೂಷ್ಮಾಂಡ,  ಸ್ಕಂದಮಾತಾ,  ಕಾತ್ಯಾಯಿನಿ,  ಕಾಳರಾತ್ರಿ,  ಮಹಾಗೌರಿ ಮತ್ತು  ಸಿದ್ಧಿಧಾತ್ರಿ ಹೀಗೆ ಒಂಬತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಿದೆ.  ಇದೀಗ ನವರಾತ್ರಿಯ ಆರನೇ ದಿನದಂದು ಪೂಜಿಸುವ ಕಾತ್ಯಾಯಿನಿ ದೇವಿ ಯಾರು? ಆಕೆಯ ಮಹತ್ವದ ಬಗ್ಗೆ ತಿಳಿದುಕೊಳ್ಳಿ.

Navaratri 2024

ಕಾತ್ಯಾಯಿನಿ ದೇವಿ ಯಾರು? ಆಕೆಯ ಮಹತ್ವ ತಿಳಿಯಿರಿ
ಕಾತ್ಯಾಯಿನಿ ದುರ್ಗಾ ದೇವಿಯ ಶಕ್ತಿಯುತ ಅವತಾರವಾಗಿದೆ. ರಾಕ್ಷಸ ರಾಜ ಮಹಿಷಾಸುರನ ಸಂಹಾರ ಮಾಡಿದ ಕಾರಣ ಆಕೆಯನ್ನು ಮಹಿಷಾಸುರಮರ್ದಿನಿ ಎಂದು ಕರೆಯಲಾಗುತ್ತದೆ. ಆಕೆ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಅವಳು ತನ್ನ ಎಡಗೈಯಲ್ಲಿ ಖಡ್ಗ ಮತ್ತು ಕಮಲವನ್ನು ಹಿಡಿದಿದ್ದರೆ, ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಹಿಡಿದಿದ್ದಾಳೆ. ಇದು ರಕ್ಷಣೆ ಮತ್ತು ಆಶೀರ್ವಾದದ ಸಂಕೇತವಾಗಿದೆ. ಕಾತ್ಯಾಯಿನಿಯನ್ನು ದುಷ್ಟ ಶಕ್ತಿಗಳ  ಸಂಹಾರ ಮಾಡಲು ಪೂಜಿಸಲಾಗುತ್ತದೆ. ವಾಮನ ಪುರಾಣದ ಪ್ರಕಾರ, ಮಹಿಷಾಸುರನ ದೌರ್ಜನ್ಯದಿಂದ ಕೋಪಗೊಂಡ ದೇವತೆಗಳು ತಮ್ಮ ಸಾಮೂಹಿಕ ಶಕ್ತಿಯನ್ನು ಒಟ್ಟುಗೂಡಿಸಿ ಕಾತ್ಯಾಯಿನಿ ದೇವಿಯನ್ನು ಸೃಷ್ಟಿಸಿದ್ದಾರೆ. ಈ ಶಕ್ತಿಯುತ ದೇವಿಯು ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಜನ್ಮ ತಾಳಿದ್ದಾಳೆ. ಎಲ್ಲರೂ  ದೇವಿಯ ಅಸಾಧಾರಣ ರೂಪವನ್ನು ಕಂಡು ಅವಳನ್ನು ಕಾತ್ಯಾಯಿನಿ ಎಂದೂ ಕರೆದಿದ್ದಾರೆ.

ನವರಾತ್ರಿಯ 6 ನೇ ದಿನದ ಮಹತ್ವ
ಕಾತ್ಯಾಯಿನಿ ಗುರು ಗ್ರಹವನ್ನು ಆಳುತ್ತಾಳೆ ಮತ್ತು ಬುದ್ಧಿವಂತಿಕೆ ಮತ್ತು ಶಾಂತಿಯ ಗುಣಗಳನ್ನು ಪ್ರತಿನಿಧಿಸುತ್ತಾಳೆ. ಅವಳ ಆಶೀರ್ವಾದದಿಂದ ಭಕ್ತರ ಪಾಪಗಳು ನಿವಾರಣೆಯಾಗುತ್ತವೆ, ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಮತ್ತು ಆಕೆ ಅಡೆತಡೆಗಳನ್ನು ನಿವಾರಿಸುತ್ತಾಳೆ ಎಂದು ನಂಬಲಾಗಿದೆ. ನವರಾತ್ರಿಯ ಸಮಯದಲ್ಲಿ, ಅವಿವಾಹಿತ ಹುಡುಗಿಯರು ಒಳ್ಳೆಯ ಸಂಗಾತಿಯನ್ನು ಪಡೆಯುವ ಬಯಕೆಯಿಂದ ಕಾತ್ಯಾಯಿನಿ ದೇವಿಯನ್ನು ಪೂಜಿಸಿ ಉಪವಾಸವನ್ನು ಆಚರಿಸುತ್ತಾರೆ.

ಇದನ್ನೂ ಓದಿ:ಯಶಸ್ಸಿಗಾಗಿ ನವರಾತ್ರಿ 5ನೇ ದಿನ ಸ್ಕಂದಮಾತಾ ದೇವಿಯನ್ನು ಈ ರೀತಿ ಪೂಜಿಸಿ!

ನವರಾತ್ರಿಯ 6ನೇ ದಿನದ ಪೂಜೆ ಮತ್ತು ಆಚರಣೆಗಳು
ನವರಾತ್ರಿಯ ಆರನೇ ದಿನದಂದು, ಭಕ್ತರು ಬೇಗನೆ ಎದ್ದು, ಸ್ನಾನಾದಿಗಳನ್ನು ಮುಗಿಸಿ, ಹೊಸ ಬಟ್ಟೆಗಳನ್ನು ಧರಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ. ನಂತರ ಕಾತ್ಯಾಯಿನಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಮಂತ್ರಗಳನ್ನು ಪಠಿಸುವಾಗ ಮತ್ತು ಪ್ರಾರ್ಥನೆ ಸಲ್ಲಿಸುವಾಗ, ಭಕ್ತರು ತಮ್ಮ ಕೈಯಲ್ಲಿ ಕಮಲದ ಹೂವುಗಳನ್ನು ಹಿಡಿದು ಜೇನುತುಪ್ಪವನ್ನು ನೈವೇದ್ಯವಾಗಿ ದೇವಿಗೆ ಅರ್ಪಿಸಿದರೆ ಒಳ್ಳೆಯದಂತೆ.

ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜೆ ಮಾಡಿದರೆ ಜೀವನದಲ್ಲಿ ಎದುರಾದ ಅಡೆತಡೆಗಳು, ದುಷ್ಟಶಕ್ತಿಗಳ ಕಾಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.