Saturday, 14th December 2024

Navratri 2024: ನವರಾತ್ರಿ ಎರಡನೇ ದಿನ ಪೂಜಿಸುವ ತಾಯಿ ಬ್ರಹ್ಮಚಾರಿಣಿಯ ಬಗ್ಗೆ ಇಲ್ಲಿದೆ ಮಾಹಿತಿ

Navaratri 2024

ಬೆಂಗಳೂರು: ನವರಾತ್ರಿ (Navaratri 2024) ಒಂಬತ್ತು ದಿನಗಳ ಪವಿತ್ರ ಹಬ್ಬವಾಗಿದ್ದು, ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಈ ವರ್ಷ ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಿದೆ. ಈ ನವರಾತ್ರಿಗಳಲ್ಲಿ ಪಾರ್ವತಿ ದೇವಿಯನ್ನು ಒಂಬತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ ಮೊದಲ ದಿನವನ್ನು, ತಾಯಿ ಶೈಲಪುತ್ರಿಯನ್ನು ಪೂಜಿಸಿದರೆ  2ನೇ ದಿನ ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೆ. ತಾಯಿ ಬ್ರಹ್ಮಚಾರಿಣಿ ಯಾರು? ಆಕೆಯ ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.

Navaratri 2024

ತಾಯಿ ಬ್ರಹ್ಮಚಾರಿಣಿ ಯಾರು?

ದೇವಿ ಬ್ರಹ್ಮಚಾರಿಣಿ ಆದಿ ಶಕ್ತಿಯ ಅವತಾರಗಳಲ್ಲಿ ಒಂದಾಗಿದೆ. ನವರಾತ್ರಿಯ 2 ನೇ ದಿನದಂದು ಅವಳನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿ ಪಾರ್ವತಿ ದೇವಿಯ ಅವಿವಾಹಿತ ರೂಪವಾಗಿದೆ. ದಕ್ಷ ಪ್ರಜಾಪತಿಯ ಮನೆಯಲ್ಲಿ ಜನಿಸಿದ ಅವಳು ಈ ಅವತಾರದಲ್ಲಿ ಮಹಾನ್ ಸತಿಯಾಗಿದ್ದಳು. ಬ್ರಹ್ಮಚಾರಿಣಿ ದೇವಿಯು ಎಲ್ಲಾ ಅದೃಷ್ಟಗಳನ್ನು ಒದಗಿಸುವ ಮಂಗಳನನ್ನು ಆಳುತ್ತಾಳೆ ಮತ್ತು ಬರಿಗಾಲಿನಲ್ಲಿ ನಡೆಯುತ್ತಾಳೆ. ದೇವಿ ಬಲಗೈಯಲ್ಲಿ ಜಪ ಮಾಲೆಯನ್ನು ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ತಪಸ್ಸು, ತ್ಯಾಗ, ನಿರಾಸಕ್ತಿ, ನೈತಿಕ ನಡವಳಿಕೆ ಮತ್ತು ಸದ್ಗುಣಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಈ ದೇವಿಯನ್ನು ಪ್ರಾರ್ಥಿಸುವ ಮೂಲಕ ಒಬ್ಬರು ತಮ್ಮ ಎಲ್ಲಾ ಗುರಿಗಳನ್ನು ಸಾಧಿಸಬಹುದು.

Navaratri 2024

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಬ್ರಹ್ಮಚಾರಿಣಿ ದೇವಿಯು ಶಿವನನ್ನು ತನ್ನ ಪತಿಯಾಗಿ ಪಡೆಯಲು ತೀವ್ರ ತಪಸ್ಸನ್ನು ಮಾಡಿದ್ದಾಳಂತೆ. ಅವಳು ಬಿಲ್ವ ಎಲೆಗಳು, ಹೂವುಗಳು, ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳ ಆಹಾರವನ್ನು ಸೇವಿಸಿ ನೆಲದ ಮೇಲೆ ಮಲಗಿ  ಅನೇಕ ವರ್ಷಗಳನ್ನು ಕಳೆದಿದ್ದಾಳೆ. ಸುಡುವ ಬೇಸಿಗೆ, ಕಠಿಣ ಚಳಿಗಾಲ ಮತ್ತು ಬಿರುಗಾಳಿಯ ಮಳೆಯಲ್ಲಿಯೇ ವಾಸಿಸುತ್ತಾ ಅವಳು ಉಪವಾಸ ಮಾಡಿದ್ದಾಳೆ. ನಂತರ, ಅವಳು ತಿನ್ನುವುದನ್ನು ನಿಲ್ಲಿಸಿ ಆಹಾರ ಮತ್ತು ನೀರಿಲ್ಲದೆ ತನ್ನ ತಪಸ್ಸನ್ನು ಮುಂದುವರಿಸಿದ್ದಾಳೆ. ಬ್ರಹ್ಮ ದೇವರು, ಅವಳ ಭಕ್ತಿ ಮತ್ತು ಕಠಿಣ ಸಂಕಲ್ಪವನ್ನು ಕಂಡು ನಂತರ, ಅವಳನ್ನು ಆಶೀರ್ವದಿಸಿದ ಕಾರಣ  ಅವಳು ಶಿವನ ಪತ್ನಿಯಾದಳು. ಆದರೆ, ತನ್ನ ತಂದೆ ಶಿವನಿಗೆ ಅಗೌರವ ತೋರಿದಾಗ, ತಾಯಿ ಬ್ರಹ್ಮಚಾರಿಣಿ ತನ್ನ ಮುಂದಿನ ಜನ್ಮದಲ್ಲಿ ತನ್ನ ಗಂಡನನ್ನು ಗೌರವಿಸುವ ತಂದೆಯನ್ನು ಪಡೆಯಲು ಬಯಸಿ ಪ್ರಾಣಾರ್ಪಣೆ ಮಾಡಿಕೊಂಡಳು ಎನ್ನಲಾಗುತ್ತದೆ.

Navaratri 2024

ನವರಾತ್ರಿ 2ನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ಮತ್ತು ಆಚರಣೆಗಳು:

ಬ್ರಹ್ಮಚಾರಿಣಿ ದೇವಿಯು ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸುತ್ತಾಳೆ ಮತ್ತು ತನ್ನ ಭಕ್ತರನ್ನು ಜ್ಞಾನೋದಯದತ್ತ ಕರೆದೊಯ್ಯುತ್ತಾಳೆ, ಮತ್ತು ಈ ದೇವಿಯು ಸಂತೃಪ್ತಿ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತಾಳೆ.

ಪಂಚಾಂಗದ ಪ್ರಕಾರ, ನವರಾತ್ರಿಯ ಎರಡನೇ ದಿನದಂದು ಭಕ್ತರು ತಾಯಿ ಬ್ರಹ್ಮಚಾರಿಣಿ ಮತ್ತು ಶಿವನನ್ನು ಪೂಜಿಸುತ್ತಾರೆ. ಅವರ ಆಶೀರ್ವಾದ ಪಡೆಯಲು ಉಪವಾಸ ವ್ರತವನ್ನು ಸಹ ಆಚರಿಸುತ್ತಾರೆ. ಭಕ್ತರು ಕಲಶದಲ್ಲಿ ತಾಯಿ ಬ್ರಹ್ಮಚಾರಿಣಿಗೆ ಮಲ್ಲಿಗೆ ಹೂವುಗಳು, ಅಕ್ಕಿ ಮತ್ತು ಶ್ರೀಗಂಧವನ್ನು ಅರ್ಪಿಸುತ್ತಾರೆ. ದೇವರಿಗೆ ಹಾಲು, ಮೊಸರು ಮತ್ತು ಜೇನುತುಪ್ಪದಿಂದ ಅಭಿಷೇಕವನ್ನು ಸಹ ಮಾಡಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ದೇವಿಗೆ ಸಕ್ಕರೆಯ ನೈವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು.

ಇದನ್ನೂ ಓದಿ: ನವರಾತ್ರಿಯ ಶುಭ ದಿನಗಳಲ್ಲಿ ಮೊದಲಿಗೆ ಪೂಜಿಸುವ ‘ಶೈಲಪುತ್ರಿ’ಯ ಬಗ್ಗೆ ತಿಳಿದುಕೊಳ್ಳೋಣ…

ಈ ರೀತಿಯಲ್ಲಿ ದೇವಿ ಬ್ರಹ್ಮಚಾರಿಣಿಯ ಬಗ್ಗೆ ಹಾಗೂ ಆಕೆಯನ್ನು ಪೂಜಿಸುವ ವಿಧಾನವನ್ನು  ತಿಳಿದುಕೊಂಡು ನವರಾತ್ರಿಯ 2ನೇ ದಿನ ಬ್ರಹ್ಮಚಾರಿಣಿ ಪೂಜಿಸಿ ನಿಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.

.