Friday, 13th December 2024

Nelamangala News: ಜೈನ ಸನ್ಯಾಸಿಯಾಗಲು 3 ಸಾವಿರ ಎಕರೆ ಜಮೀನು ಸೇರಿದಂತೆ ಸಮಸ್ತ ಆಸ್ತಿ ದಾನ ಮಾಡಿದ ಉದ್ಯಮಿ!

Nelamangala News

ನೆಲಮಂಗಲ(ಬೆಂಗಳೂರು): ಕಲ್ಲಿದ್ದಲು ಮತ್ತು ಚಿನ್ನದ ಅದಿರು ಗಣಿ ಮಾಲೀಕ ರಾಜಸ್ಥಾನ ಮೂಲದ ಪಿ.ಬಿ.ಓಸ್ವಾಲ್ ಜೈನ್ ತಮಗೆ ಸೇರಿರುವ ಗಣಿಗಾರಿಕೆ ಪ್ರದೇಶದ 3 ಸಾವಿರ ಎಕರೆ ಭೂಮಿ ಮತ್ತು ಇತರ ಸಮಸ್ತ ಆಸ್ತಿಯನ್ನು ದಾನವಾಗಿ ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷ ಡಾ. ಸಿದ್ದರಾಜು ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದ್ದಾರೆ.

ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್ ಈ ಸಂದರ್ಭದಲ್ಲಿ ಮಾತನಾಡಿ ʼʼಕಳೆದ 20 ವರ್ಷಗಳಿಂದ ಪಾಲನಹಳ್ಳಿ ಶನೇಶ್ಚರ ಸ್ವಾಮಿ ಮಠಾಧ್ಯಕ್ಷರಾದ ಡಾ. ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ, ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ನನಗೀಗ 78 ವರ್ಷವಾಗಿದೆ. ಜೈನ ಧರ್ಮದ ತತ್ವಗಳ ಅನುಸಾರ ಅಹಿಂಸಾ ಪರಮಧರ್ಮ ವ್ರತಾಚರಣೆಯ ಅಂಗವಾಗಿ ಜೈನಯತಿ ಧರ್ಮವನ್ನು ಸ್ವೀಕರಿಸಬೇಕು ಎಂದು ತೀರ್ಮಾನಿಸಿದ್ದೇನೆʼʼ ಎಂದರು.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ನಾನು ಸ್ವಯಾರ್ಜಿತವಾಗಿ ಸಂಪಾದಿಸಿರುವ 3 ಸಾವಿರ ಎಕರೆಯಲ್ಲಿ ಕಲ್ಲಿದ್ದಲು ಮತ್ತು ಇತರೆ ಗಣಿಗಾರಿಕೆ ನಡೆಸಿಕೊಂಡು ಬರುತ್ತಿದೆ. ಮುಂಬೈನ ವಿವಿಧೆಡೆಗಳಲ್ಲಿ ನನಗೆ ಸೇರಿರುವ ಕಟ್ಟಡ ಮತ್ತು ಚಿರ ಮತ್ತು ಚರ ಆಸ್ತಿಯಲ್ಲಿ ಗಳಿಸಿರುವ ಸಂಪತ್ತಿಗೆ ಪ್ರತಿವರ್ಷವೂ ಚಾಚೂ ತಪ್ಪದೆ 500 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದೇನೆ. ನನಗೆ ಸೇರಿರುವ ಗಣಿಗಾರಿಕೆ ಮತ್ತು ಜರ್ಮನಿ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ ಇತರೆ ದೇಶಗಳಲ್ಲಿನ ವ್ಯಾಪಾರ ವಹಿವಾಟನ್ನು ಪೂರ್ಣವಾಗಿ ಡಾ. ಸಿದ್ದರಾಜು ಸ್ವಾಮೀಜಿ ಹೆಸರಿಗೆ ನೋಂದಣಿ ಮಾಡಿಸಿದ್ದೇನೆ. ಇಂದು ಬ್ಯಾಂಕ್ ವಹಿವಾಟು ಮತ್ತು ಭೂಮಿ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ್ದೇನೆ. ನನಗೆ ಸೇರಿರುವ ಚರ ಮತ್ತು ಸ್ಥಿರ ಆಸ್ಥಿ, ಹಣ, ವ್ಯಾಪಾರ ವಹಿವಾಟು ಸಮಸ್ತ ಸಂಪತ್ತು ಇಂದಿನಿಂದ ಡಾ.ಸಿದ್ದರಾಜು ಸ್ವಾಮಿ ಅವರಿಗೆ ಸೇರಿದೆ. ಸಮಾಜೋಪಯೋಗಿ ಸೇವೆಗೆ ಬಳಕೆಯಾಗಲಿ ಎಂದು ಜೈಸ್ವಾಲ್‌ ಹೇಳಿದರು.

ಈ ಸುದ್ದಿಯನ್ನೂ ಓದಿ | Namo Bharat Train: ಬೆಂಗಳೂರಿಂದ ಮೈಸೂರು, ತುಮಕೂರಿಗೆ ಶೀಘ್ರವೇ ಹೈ ಸ್ಪೀಡ್‌ ನಮೋ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ದಾನದ ಹಣ ಹೇಗೆ ಬಳಕೆ?

ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷರಾ ಡಾ. ಸಿದ್ದರಾಜು ಸ್ವಾಮೀಜಿ ಮಾತನಾಡಿ, ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್ ನಮ್ಮ ಮಠಕ್ಕೆ ಹಿಂದೂಸ್ಥಾನ್ ಓಸ್ವಾಲ್ ಮಿನರಲ್ಸ್ ಕಂಪನಿಗಳು, ಓಸ್ವಾಲ್ ಮಿನರಲ್ಸ್, ಓಸ್ವಾಲ್ ಕಾರ್ಪೊರೇಷನ್ ಕಂಪನಿಗಳ ಮಾಲೀಕ ಪಿ.ಬಿ.ಓಸ್ವಾಲ್ ಸ್ವಇಚ್ಛೆಯಿಂದ ದಾನವಾಗಿ ನೀಡಿರುವ ಸಮಸ್ತ ಆಸ್ತಿಯನ್ನು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಆರ್ಯುವೇದ ಪರಂಪರೆ ಮುಂದುವರಿಸಲು ಮತ್ತು ಬಡವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು, ಬಡವರ ಮನೆಯಲ್ಲಿ ಬೆಳಕು ಮೂಡಲು ವಿನಿಯೋಗಿಸುತ್ತೇನೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಪುನಶ್ಚೇತನಗೊಳಿಸಲು ತೀರ್ಮಾನಿಸಿದ್ದೇನೆ. ಗ್ರಾಮೀಣ ಸೇವಾ ಟ್ರಸ್ಟ್ ವತಿಯಿಂದ ಕಾರ್ತಿಕ ಮಾಸದಲ್ಲಿ ದೇವತೆಗಳ ಪ್ರತಿಷ್ಠಾಪನೆ ಮತ್ತು ಮಾಘಮಾಸದಲ್ಲಿ ಶಿವಗಂಗೋತ್ರಿ ಶಿಕ್ಷಣ ಸಂಸ್ಥೆ ವತಿಯಿಂದ, ಮಾತಂಗಿ ಮಾತೆಯ 218 ಅಡಿ ಎತ್ತರದ ಲೋಹ ವಿಗ್ರಹವನ್ನು ಕೆರೆಗೋಡು ಮಠದಲ್ಲಿ ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದೇವೆ, ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಆಸ್ತಿಯನ್ನು ಬಲಿಷ್ಠರು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಶ್ರೀಗಳು, ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಹೊನ್ನಾಪುರದಲ್ಲಿನ ನಮಗೆ ಸೇರಿರುವ 40 ಎಕೆರೆ ವಿಸ್ತೀರ್ಣದ ಜಮೀನಿನಲ್ಲಿ ಗೋಶಾಲೆ ಆರಂಭಿಸಲಾಗುವುದು, ದಾನಿಗಳು ನೀಡಿರುವ ಸಕಲ ಆಸ್ತಿಯನ್ನು ಜನೋಪಯೋಗಿ ಸೇವಾ ಕೆಲಸಗಳಿಗೆ ಬಳಸಲಾಗುವುದು. ಅಕ್ಟೋಬರ್ 13ರಂದು ಪಾಲನಹಳ್ಳಿ ಮಠದಲ್ಲಿ ಮಾತಂಗಿ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ, ಹಾಗೂ ಸಂಪೂರ್ಣರಾಮಾಯಣ ಎಂಬ ಪೌರಾಣಿಕ ನಾಟಕಾಭಿನಯ ನಡೆಯಲಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೊಸದುರ್ಗದ ಪರಮೇಶ್ವರಪ್ಪ ಮಾತನಾಡಿ, ಬೆಂಗಳೂರು ಮತ್ತು ದೇವನಹಳ್ಳಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ಹೊನ್ನಾಳಿ ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಸಾವಿರಾರು ಎಕರೆ ಭೂಮಿ ಇದೆ. ಡಿ. ದೇವರಾಜ ಅರಸು ಅಧಿಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್‌ನಿಲ್ದಾಣ ಮತ್ತು ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ನಿರ್ಮಿಸಲು ಮಠದ ಭೂಮಿಯ ನೀಡಿದ್ದರು. ದೇವನಹಳ್ಳಿ ಬಳಿ ಮಠಕ್ಕೆ ಸೇರಿರುವ 400 ಎಕರೆ ಭೂಮಿ ಇದೆ, ರಾಜ್ಯದ ವಿವಿದೆಡೆಗಳಲ್ಲಿ ಇರುವ ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಭೂಮಿಯನ್ನು ಮಠಕ್ಕೆ ಒಪ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದರು.

ಈ ಸುದ್ದಿಯನ್ನೂ ಓದಿ | Karnataka Weather: ಇಂದು ಕರಾವಳಿ ಭಾಗ, ಚಾಮರಾಜನಗರ ಸೇರಿ ಈ ಜಿಲ್ಲೆಗಳಲ್ಲಿ ಮಳೆಯ ಅಬ್ಬರ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ, ಮಠದ ಕಾರ್ಯದರ್ಶಿ ಪವನ್ ಕುಮಾರ್.ಕೆ, ಶಾರದಮ್ಮ, ನಿವೃತ್ತ ಐಎಎಸ್ ಅಧಿಕಾರಿ ಬಾಬು ರಾಮ್ ಮೂಡಬಿ, ವಾಣಿಜ್ಯ ತೆರಿಗೆ ಇಲಾಖೆಯ ಅಡಿಷನಲ್ ಕಮಿಷನರ್ ತೇಗನೂರ್, ನಿವೃತ್ತ ಪ್ರಿನ್ಸಿಪಲ್ ಚೀಪ್ ಕಮಿಷನರ್, ಎಚ್.ಆರ್.ಭೀಮಾಶಂಕರ್, ಕೇರಳದ ಎಫ್.ಆರ್.ಸಿ ದಿನೇಶ್ ಮನೋಹರನ್, ಶಿಕ್ಷಣ ತಜ್ಞೆ ಅಮಲಾ, ಪುಷ್ಪ, ನಿವೃತ್ತ ಐಎಫ್‌ಎಸ್ ಅಧಿಕಾರಿ ಕೇಶವಮೂರ್ತಿ, ವಕೀಲ ಜಯನಾರಾಯಣ್, ನಿವೃತ್ತ ಇಂಜಿನಿಯರ್ ಗುರುನಾಥ್, ಶ್ರೀಮಠದ ವಿಶ್ವ ನಾಥ್ ಹಾಗೂ ಮಠದ ಭಕ್ತರು ಇದ್ದರು.