Monday, 11th November 2024

ಪುರಸಭೆ ಪ್ರಭಾರಿ ಅಧ್ಯಕ್ಷರಾಗಿ ನಿಟ್ಟೂರು ಭೀಮವ್ವ ಅಧಿಕಾರ ಸ್ವೀಕಾರ

ಹರಪನಹಳ್ಳಿ: ಸ್ಥಳೀಯ ಪುರಸಭೆ ಪ್ರಭಾರಿ ಅಧ್ಯಕ್ಷರಾಗಿ ನಿಟ್ಟೂರು ಭೀಮವ್ವ ಸಣ್ಣ ಹಾಲಪ್ಪ ರವರು ಪುರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧುವಾರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಇಜಾಂತಕರ ತಮ್ಮ ವೈಯಕ್ತಿಕ ಕಾರಣಗಳಿಂದಲೋ, ಒತ್ತಡದಿಂದಲೋ ರಾಜೀನಾಮೆಯನ್ನು ಸಲ್ಲಿಸಿದ್ದರು, ರಾಜೀನಾಮೆ ಅಂಗೀಕಾರ ಹಿನ್ನೆಲೆಯಲ್ಲಿ, ಪ್ರಭಾರಿ ಅಧ್ಯಕ್ಷರಾಗಿ, ಪುರಸಭೆ ಉಪಾಧ್ಯಕ್ಷರಾಗಿದ್ದ ಭೀಮವ್ವನವರಿಗೆ ನಿರ್ಗಮಿತ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಎಂ.ವಿ.ಅ0ಜಿ ನಪ್ಪ ಮಾತನಾಡಿ ಮಂಜುನಾಥ ಇಜಾಂತ ಕರ್‌ರವರು ಪ್ರಸ್ತುತ ಸಂಘರ್ಷದ ರಾಜ ಕಾರಣದಲ್ಲಿ ಎಲ್ಲವನ್ನು ಮೀರಿ, ಹದಿನೆಂಟು ತಿಂಗಳು ಅಧ್ಯಕ್ಷರಾಗಿ ಉತ್ತಮ ಆಡಳಿತ ಮಾಡಿದ್ದಾರೆ. ಅಲ್ಲದೆ ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ರಾಜಕಾರಣದಿಂದ ಹಿಂದೆ ಸರಿಯದೆ, ಉತ್ತಮ ರಾಜಕಾರಣಿಯಾಗಿ ಸಕ್ರೀಯರಾಗಲಿ ಎಂದರು.

ಪುರಸಭೆ ಕಚೇರಿಯಲ್ಲಿ ಸಿಬ್ಬಂದಿಗಳು, ಅಧಿಕಾರಿಗಳು ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡಿ. ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ಸಾರ್ವಜನಿಕ ವಿಶ್ವಾಸ ಗಳಿಸೊಣ ಎಂದು ಹೇಳಿದರು.

ಬಿಜೆಪಿ ಮುಖಂಡ ಜಿ.ನಂಜನಗೌಡ್ರು ಮಾತನಾಡಿ ರೈತರಿಗೆ ಪಹಣಿಗಳು ಸಿಕ್ಕಂತೆ, ಪುರಸಭೆಯಲ್ಲಿ ಪಟ್ಟಣದ ನಾಗರೀಕರಿಗೆ ಖಾತಾ ಪ್ರತಿಗಳು ವಾರದಲ್ಲಿ ಸಿಗುವಂತಾಗಬೇಕು, ಸಾರ್ವಜನಿಕರ ವಿಶ್ವಾಸದೊಂದಿಗೆ ಉತ್ತಮ ಆಡಳಿತ ನೀಡಿದಲ್ಲಿ ಪಟ್ಟಣದ ಅಭಿವೃದ್ಧಿ ಯಾಗಲು ಸಾದ್ಯ ಎಂದರು.

ಎರಗುಡಿ ಶಿವಕುಮಾರ ಮಾತನಾಡಿ ಪುರಸಭೆಯ ಕಂದಾಯ ವಿಭಾಗದಲ್ಲಿ ಒಬ್ಬರು ಕೆಲಸ ಮಾಡುತ್ತಿದ್ದಾರೆ. ೧೭ಸಾವಿರ ಜನರ ಕೆಲಸ ಬಾಕಿ ಇದ್ದು, ಇವುಗಳನ್ನು ಪುಸ್ತಕದಲ್ಲಿ ಹುಡುಕುವುದಾಗಿದೆ. ಸಿಬ್ಬಂದಿಗಳ ಕೊರತೆ ಇದೆ. ಅನಗತ್ಯ ಸಮಸ್ಯೆಗಳು ಬರುತ್ತವೆ. ಗ್ರಾಮಠಾಣದಲ್ಲಿನ ಸಮಸ್ಯೆ ಹೆಚ್ಚು ಇದೆ, ಶಕ್ತಿ ಮೀರಿ ಕೆಲಸವನ್ನು ಮಾಡಲು ಸದಸ್ಯರ ಸಹಕಾರ ಕೋರಿದರು.

ಈ ವೇಳೆ ಪುರಸಭೆಯಿಂದ ನಿರ್ಗಮಿತ ಅಧ್ಯಕ್ಷರಿಗೆ ಹಾಗೂ ಪ್ರಭಾರಿ ಅದ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಸದಸ್ಯ ರಾದ ಡಿ.ಅಬ್ಡುಲ್ ರೇಹಮಾನ, ಟಿ.ವೆಂಕಟೇಶ, ಹೆಚ್.ಅಶೋಕ, ಮಾತನಾಡಿದರು. ಈ ಸಂದರ್ಭದಲ್ಲಿ ಸದಸ್ಯರಾದ ಗೊಂಗಡಿ ನಾಗರಾಜ, ಹೆಚ್.ಕೊಟ್ರೇಶ, ಉದ್ದಾರ ಗಣೇಶ, ಲಾಟಿ ದಾದಪೀರ, ರುದ್ರಪ್ಪ, ಜಾವೀದ್, ಬಿಜೆಪಿ ಮುಖಂಡರಾದ, ನಿಟ್ಟೂರು ಸಣ್ಣ ಹಾಲಪ್ಪ, ಆರೋಗ್ಯ ನಿರೀಕ್ಷಕ ಮಂಜುನಾಥ, ಸೇರಿದಂತೆ ಇತರರು ಇದ್ದರು.