ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 21
ಸಮಾಜಸೇವೆಯ ಅದಮ್ಯ ಆಸೆಗಳ ಬಿಚ್ಚಿಟ್ಟ ತೇಜಸ್ವಿನಿ ಅನಂತ ಕುಮಾರ್
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ಅನಂತ ಕುಮಾರ್ ಅವರನ್ನು ಬಹುತೇಕರು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ, ಅವರ ಪ್ರತಿ ನಡೆಯ ಹಿಂದಿನ ಉದ್ದೇಶವನ್ನು ಗ್ರಹಿಸುವಲ್ಲಿ ಬಹುತೇಕರು ವಿಫಲರಾದರು ಎಂದು ದಿ.ಅನಂತ್ ಕುಮಾರ್ ಪತ್ನಿ, ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.
‘ವಿಶ್ವವಾಣಿ ಕ್ಲಬ್‌ಹೌಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನಂತ ಕುಮಾರ್ ಅವರ ಸುದೀರ್ಘ ರಾಜಕೀಯ ನಡೆ, ಅವರು ಬಿಟ್ಟುಹೋದ ಆದರ್ಶಗಳು ಮತ್ತು ಅದ್ಯಮ್ಯ ಚೇತನದ ಗುರಿ ಹಾಗೂ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮನಬಿಚ್ಚಿ ಮಾತನಾಡಿದರು. ರಾಜಕಾರಣದಲ್ಲಿ ಅದರಲ್ಲೂ ಅಧಿಕಾರಕ್ಕಾಗಿ ಕೆಲವೊಂದು ರಾಜಿ ಮಾಡಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಈ ವಿಷಯಕ್ಕೆ ನನ್ನ ಮತ್ತು ಅವರ ನಡುವೆ ಅನೇಕ ಸಲ ವಾದ-ವಿವಾದಗಳಾಗಿವೆ. ಆದರೆ, ದೊಡ್ಡದಾದ ಗುರಿಯ ಕಡೆಗೆ ನಡೆಯುವಾಗ ಕೆಲ ಸಣ್ಣ ಪುಟ್ಟ ವಿಚಾರಗಳಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇದು ನನಗಾಗಿ ಅಲ್ಲ, ಜನಹಿತಕ್ಕಾಗಿ ಮಾಡಿಕೊಂಡ ರಾಜಿ ಎನ್ನುತ್ತಿದ್ದರು. ಅದರಂತೆಯೇ ದೊಡ್ಡಮಟ್ಟದ ಮೆಡಿಕಲ್ ಮಾಫಿಯಾ ಎದುರು ಹಾಕಿಕೊಂಡು, ಜನೌಷಧ ಕೇಂದ್ರ, ಸ್ಟಂಟ್ಸ್ ಬೆಲೆ ಇಳಿಕೆಯಂತಹ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ಭಯದ ವಾತಾವರಣವಿದೆ: ನಾವು ಚಿಕ್ಕವರಿದ್ದಾಗ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡಲು ಭಯ ಇರಲಿಲ್ಲ. ಈಗ ಒಂಟಿ ಹೆಣ್ಣು ಮಗು ತಡರಾತ್ರಿ ಹೊರಗೆ ಬರಲು ಭಯದ ವಾತಾವರಣ ನಿರ್ಮಾಣ ಆಗಿರುವುದು ದುರದೃಷ್ಟಕರ ಎಂದು ತೇಜಸ್ವಿನಿ ಅನಂತ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
೮೮ರಲ್ಲಿ ಮದುವೆ ನಿಶ್ಚಯ: ಹಿಡಕಲ್ ಡ್ಯಾಂ ಬಳಿ ನನ್ನೂರು, ವಿದ್ಯಾಭ್ಯಾಸ ಹುಬ್ಬಳ್ಳಿಯಲ್ಲಿ. ನನ್ನ ವೃತ್ತಿ ಬದುಕು ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ
ಆರಂಭವಾಯಿತು. ಅನಂತ್ ಕುಮಾರ್ ಆಗ ರಾಜ್ಯ ಕಾರ್ಯದರ್ಶಿಗಳಾಗಿದ್ದು, ವಿದ್ಯಾರ್ಥಿ ಪರಿಷತ್ ನಲ್ಲಿ ಅನೇಕ ಸಂದೇಶ ನೀಡುತ್ತಿದ್ದರು. ಆಗ ಅನಂತ್
ಕುಮಾರ್ ಅವರ ಪರಿಚಯ ಆಗಿತ್ತು. ಮದುವೆ ನಿಶ್ಚಯ ಆಗಿದ್ದು 88ರಲ್ಲಿ. ಆಗ ಬಿಜೆಪಿಯಿಂದ ಕರ್ನಾಟಕದಲ್ಲಿ ಒಬ್ಬರು, ಕೇಂದ್ರದಲ್ಲಿ ಒಬ್ಬರು ಸಂಸತ್ ಸದಸ್ಯರು ಇದ್ದರು.
ಹೆಸರು, ಉದ್ದಿನ ಬೇಳೆ ವ್ಯತ್ಯಾಸ ಗೊತ್ತಿರಲಿಲ್ಲ: ಮದುವೆಯಾದಾಗ ಹೆಸರು, ಉದ್ದಿನ ಬೇಳೆ ವ್ಯತ್ಯಾಸ ಗೊತ್ತಿರಲಿಲ್ಲ. ನನಗೆ ಅಡುಗೆಯೂ ಬರುತ್ತಿರಲಿಲ್ಲ. ಆದರೆ, ಈಗ ಬಿಸಿಯೂಟ ಯೋಜನೆ ಮೂಲಕ ಕಳೆದ 10 ವರ್ಷದಲ್ಲಿ 20 ಕೋಟಿ ಜನ ರಿಗೆ ಊಟ ನೀಡಿದ್ದೇವೆ. ಯಾವುದೇ ಪೆಟ್ರೋಲಿಯಂ ಉತ್ಪನ್ನ ಬಳಸದೆ ಊಟ
ತಯಾರಿಸಲಾಗುತ್ತಿದೆ. ಈಗ ಅದಮ್ಯ ಚೇತನ ಅಡುಗೆ ಮನೆಯೇ ನನ್ನ ಕಚೇರಿ. 285 ಹಸಿರು ಭಾನುವಾರ ನಡೆಸಿಕೊಂಡು ಬರುತ್ತಿದ್ದು, ಮರಳು ಭೂಮಿಯಲ್ಲಿ ಹಸಿರು ಚಿಗುರಿಸಲಾಗಿದೆ.
ಸಾವಿರಾರು ಶಾಲೆಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕರೋನಾ ಮೊದಲ ಅಲೆ ಸಂದರ್ಭದಲ್ಲಿ ಪ್ರತಿದಿನ 10 ಸಾವಿರ ಜನಕ್ಕೆ ಊಟ ನೀಡಲಾಗಿತ್ತು. ಸುರಕ್ಷತೆಯಿಂದ ಅಡುಗೆ ಮಾಡಲಾಗುತ್ತಿದೆ. ಅನಂತ್ ಕುಮಾರ್ ಅವರು ನಾಲ್ಕು ಮಂದಿಗೆ ಊಟ ಕೊಟ್ಟು ಜತೆಗೆ ಅವರು ತಿನ್ನುತ್ತಿದ್ದರು. ಊಟದ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರ ಎರಡನೇ ಪುಣ್ಯಸ್ಮರಣೆ ಪ್ರಯುಕ್ತ ಅದಮ್ಯ ಚೇತನದಿಂದ ನಿತ್ಯ ಅನ್ನದಾನ ಯೋಜನೆ ಜಾರಿಗೊಳಿಸಲಾಗಿದೆ. ಕರೋನಾ ಸಂದರ್ಭದಲ್ಲಿ
ಒಟ್ಟು 72 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಬಿಎಸ್‌ವೈ ಕೋಪ ತಣಿಸುತ್ತಿದ್ದ ಏಕೈಕ ವ್ಯಕ್ತಿ: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕೂಲ್ ಮಾಡುವ ಏಕೈಕ ವ್ಯಕ್ತಿ ಎಂದರೆ ಅನಂತ ಕುಮಾರ್ ಮಾತ್ರ ಎಂಬ ಮಾತಿತ್ತು. ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿದ ಇಬ್ಬರು ಜೋಡೆತ್ತುಗಳಾಗಿದ್ದವರು ಅನಂತ್ ಕುಮಾರ್ ಮತ್ತು ಬಿಎಸ್‌ವೈ. ಯಡಿಯೂರಪ್ಪ ಅವರು ಪ್ರತಿ
ನಿರ್ಧಾರಕ್ಕೂ ಮೊದಲು ಅನಂತ ಕುಮಾರ್ ಅವರ ಸಲಹೆ ಪಡೆಯುತ್ತಿದ್ದರು. ಅನೇಕರು ಬಿಎಸ್‌ವೈ ಅವರನ್ನು ದೂರ್ವಾಸಮುನಿ ಎಂದೇ ಕರೆಯುತ್ತಿದ್ದರು. ಆದರೆ, ಅನಂತ್ ಕುಮಾರ್ ಅವರ ಮಾತಿಗೆ ಬಿಎಸ್‌ವೈ ಬೆಲೆ ನೀಡುತ್ತಿದ್ದರು. ಅನಂತ ಅವರ ಸಲಹೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಬಿಎಸ್‌ವೈ ಅವರಿಗಿತ್ತು. ಹೀಗಾಗಿ, ಅವರಿಬ್ಬರ ನಡುವೆ ಬಹುದೊಡ್ಡ ಬಾಂಡಿಂಗ್ ಇತ್ತು ಎಂದು ಹೇಳಿದರು.
ಯುದ್ಧ ವಿಮಾನ ತೇಜಸ್‌ನ ಸ್ಫೂರ್ತಿ: ಅನಂತಕುಮಾರ್ ಅವರು ಕೇಂದ್ರ ಮಂತ್ರಿಯಾಗಿದ್ದಾಗ, ಲಘು ಯುದ್ಧ ವಿಮಾನವೊಂದಕ್ಕೆ ಹೆಸರು ಇಡುವ ಕಾರ್ಯಕ್ರಮ
ಘೋಷಣೆಯಾಗಿತ್ತು. ಪ್ರಧಾನಿ ವಾಜಪೇಯಿ, ರಾಷ್ಟ್ರಪತಿ ಅಬ್ದುಲ್ ಕಲಾಂ ಇದ್ದರು. ಬೆಳಗ್ಗೆ ಉಪಾಹಾರದಲ್ಲಿ ಹೆಸರಿನ ಬಗ್ಗೆ ಚರ್ಚೆ ನಡೆಯಿತು. ಆದರೆ, ಅನಂತ್ ಬಾಯಿ ಬಿಟ್ಟಿರಲಿಲ್ಲ. ಕಾರ್ಯಕ್ರಮದಲ್ಲಿ ಎಲ್ಲರೂ ಈ ಬಗ್ಗೆ ನನ್ನನ್ನು ಪ್ರಶ್ನಿಸಿದ್ದರು. ಅನಂತ್ ಕುಮಾರ್ ಅವರು ಅದನ್ನು ಕಾರ್ಯಕ್ರಮದಲ್ಲಿ ಮೈಕ್ ಮುಂದೆ ನಿಂತೆಯೇ ಘೋಷಣೆ ಮಾಡಿದರು. ಆ ಲಘು ವಿಮಾನದ ಹೆಸರು ತೇಜಸ್ ಎಂದು. ಅಕ್ಕಪಕ್ಕದಲ್ಲಿದ್ದವರೆಲ್ಲ, ನನ್ನನ್ನು ನೋಡಿ ನಕ್ಕು ಸಂತೋಷ ವ್ಯಕ್ತಪಡಿಸಿದರು.
ನನಗೆ ಆ ಕ್ಷಣ ಹೆಮ್ಮೆ ಎನಿಸಿತ್ತು ಎಂದು ತೇಜಸ್ವಿನಿ ಅನಂತ್ ಕುಮಾರ್ ತಿಳಿಸಿದರು.
ಬಿಎಸ್‌ವೈ-ಅನಂತ್ ಒಂದೇ ಮನೆಯಲ್ಲಿ ವಾಸ
ಒಮ್ಮೆ ಇದ್ದಕ್ಕಿದ್ದಂತೆ ಬಾಡಿಗೆ ಮನೆ ಖಾಲಿ ಮಾಡಿ, ಬೇರೆ ಮನೆಗೆ ಹೋಗೋಣ ಎಂದರು. ರಾತ್ರಿ ಬಂದು ಲಗೇಜ್ ಸಮೇತ ಕರೆದೊಯ್ದರು. ಅದೊಂದು ದೊಡ್ಡ ಬಂಗಲೆ, ಅಲ್ಲಿ ಬಿಟ್ಟು ಬೆಳಗಿನ ಜಾವವೇ ದೆಹಲಿಗೆ ಹೊರಟರು. ಮನೆಗೆ ಫೋನ್ ಬಂತು, ಯಾರು ಎಂದರೆ ನಾನು ಎಲ್.ಕೆ.ಅಡ್ವಾಣಿ ಎಂದರು. ನನಗೆ ಒಂದು ಕ್ಷಣ ಗಾಬರಿಯಾಗಿತ್ತು. ಬೆಳಗ್ಗೆ ಗೊತ್ತಾಯಿತು. ಅದೇ ಮನೆಯಲ್ಲಿ ಮಹಡಿ ಮೇಲೆ ಯಡಿಯೂರಪ್ಪ ಇದ್ದರು. ಎಸ್. ಮಲ್ಲಿಕಾರ್ಜುನಯ್ಯ ಅವರೂ ಇದ್ದರು. ಬಿಎಸ್‌ವೈ ಅವರಿಗಾಗಿ ನಾನು ರಾಗಿ ಮುದ್ದೆ ಮಾಡುವುದನ್ನು ಕಲಿತಿದ್ದೆ. ಆ ಮನೆಗೆ ಉಮಾ ಭಾರತಿ ಸೇರಿದಂತೆ ಅನೇಕ ನಾಯಕರು ಬರುತ್ತಿದ್ದರು. ಬಹಳ ದಿನಗಳ ನಂತರ ಇದ್ದಕ್ಕಿದ್ದಂತೆ ಮನೆ ಬಿಡಬೇಕು ಎಂದು ಸೂಚನೆ ಬಂತು. ಮನೆಗೆ ಬಂದಷ್ಟೇ ವೇಗದಲ್ಲಿ ಮನೆ ಬಿಟ್ಟು ಹೋಗಬೇಕಾಯ್ತು.
ಜೀರೋ ಗಾರ್ಬೇಜ್ ನನ್ನ ಗುರಿ
ನನ್ನ ಅಡುಗೆ ಮನೆ ಜೀರೋ ಗಾರ್ಬೇಜ್ ಆಗಬೇಕು ಎನ್ನುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಅದಮ್ಯ ಚೇತನ ಅಡುಗೆ ಮನೆಗಳು ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತಿವೆ.ಕರೋನಾ ಸಂದರ್ಭದಲ್ಲಿ ಪೌರಕಾರ್ಮಿಕರು ಮನೆಗಳ ಮುಂದೆ ತ್ಯಾಜ್ಯ ಸಂಗ್ರಹಕ್ಕೆ ಬಂದಾಗ ನನಗೆ ನಗರವನ್ನೇಕೆ ಜೀರೋ ಗಾರ್ಬೇಜ್ ಸಿಟಿ ಮಾಡಬಾರದು ಎಂಬ ಆಲೋಚನೆ ಬಂತು. ಹೀಗಾಗಿ, ಬೆಂಗಳೂರು ಜೀರೋ ಗಾರ್ಬೇಜ್ ಆಗಬೇಕು ಎಂಬುದು ನನ್ನ ಜೀವನದ ಕನಸು. ಅದನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ಅದರ ಕಡೆಗೆ ಸಾಗುತ್ತಿದ್ದೇನೆ. ಹಾಲಿನ ಪ್ಯಾಕೇಟ್ ಅನ್ನು ಕಟ್ ಮಾಡಿ ಸಣ್ಣ ಪೀಸ್ ಬಿಸಾಕುವ ಬದಲು ಅದನ್ನು ನಿರ್ವಹಿಸುವ ಬಗ್ಗೆ ಒಂದು ವಿಡಿಯೊ ಹಾಕಿದ್ದೆ. ಅದನ್ನು ಸಾವಿರಾರು ಜನ ಫಾಲೋ ಮಾಡುತ್ತಿದ್ದಾರೆ. ಇದರಿಂದ ನಿತ್ಯ ಸುಮಾರು ಒಂದು ಲಕ್ಷ ಅಂತಹ ತ್ಯಾಜ್ಯ ಬಿಸಾಕುವುದು ತಪ್ಪುತ್ತಿದೆ. ಇದೇ ರೀತಿ ಜನಜಾಗೃತಿ ಮಾಡುವುದು ನನ್ನ ಗುರಿ ಎಂದರು.
? ಅನಂತ ಕುಮಾರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ 40 ಎಂಎಲ್‌ಎ, ನಾಲ್ಕು ಎಂಪಿ ಇದ್ದರು.
? ಅನಂತ್ ಕುಮಾರ್ ಅವರ ಮೊದಲ ಅಭಿಮಾನಿ ನಾನೇ ಎಂದರೆ ಸುಳ್ಳಲ್ಲ.
? ಅವರು ನಿತ್ಯ ಭಗವದ್ಗೀತೆ ಓದುತ್ತಿದ್ದರು. ಕೊನೆ ಗಳಿಗೆಯಲ್ಲಿ ನಾನು ಶ್ಲೋಕ ಓದಿ ಹೇಳಿದ್ದೆ
? ಅನ್ನ, ಅಕ್ಷರ, ಆರೋಗ್ಯ ಖಾಸಗೀಕರಣ ಆಗಬಾರದು ಎಂಬುದು ನಮ್ಮವರ ಆಸೆ
? ದೇಶಕ್ಕೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವಜನರನ್ನು ಬೆಳೆಸುವುದು ನಮ್ಮ ಆದ್ಯತೆ
? ರಾಜಕೀಯದ ಕುರಿತು ಈಗಲೇ ಯಾವುದೇ ಮಹಾತ್ವಾಕಾಂಕ್ಷೆ ಹೊಂದಿಲ್ಲ
***
ಮುಂದಿನ ರಾಜಕೀಯ ಭವಿಷ್ಯ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ. ರಾಜಕೀಯ ತೀರ್ಮಾನಗಳು ಆಯಾ ಕ್ಷಣಕ್ಕೆ, ಸನ್ನಿವೇಶಕ್ಕೆ ನಿರ್ಧಾರವಾಗುದರಿಂದ ನಾನು ಈಗಲೇ ಆ ಬಗ್ಗೆ ಯೋಚಿಸಿಲ್ಲ. ನನ್ನ ಮಕ್ಕಳು ಪಕ್ಷದ ಜತೆಯಲ್ಲೇ ಗುರುತಿಸಿಕೊಂಡಿದ್ದಾರೆ. ಆದರೆ, ಅವರ ಇಷ್ಟದಂತೆ ಅವರು ನಡೆಯುತ್ತಾರೆ.
– ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ