Wednesday, 11th December 2024

ರಾಗಿ ನೋಂದಣಿ ಕೇಂದ್ರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ

ಬಾಗಿಲು ಹಾಕಿ ವಾರವಾದರೂ ತೆಗೆದಿಲ್ಲ,

ನಿತ್ಯ ಹೆಸರು ನೋಂದಣಿಗಾಗಿ ಅಲೆಯುತ್ತಿರುವ ರೈತರು

ಹುಳಿಯಾರು: ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಹುಳಿಯಾರು ಎಪಿಎಂಸಿಯಲ್ಲಿ ತೆರೆಯಲಾಗಿದ್ದ ಕಛೇರಿ ಬೀಗ ಜಡಿದು ವಾರಗಳಾಗಿದ್ದು ಹೆಸರು ನೋಂದಣಿಗೆ ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ್ತಾಗಿದ್ದು ನಿತ್ಯ ರೈತರು ಅಲೆಯುವುದು ಮಾತ್ರ ತಪ್ಪಿಲ್ಲ.

ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ರೈತರ ನೆರವಿಗಾಗಿ ಧಾವಿಸಿರುವ ಸರ್ಕಾರ ಕ್ವಿಂಟಲ್ ರಾಗಿಗೆ 3295 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ನಿರ್ಧರಿಸಿತ್ತು. ಪರಿಣಾಮ ಹುಳಿಯಾರು ಎಪಿಎಂಸಿಯಲ್ಲಿ ರೈತರ ನೋಂದಣಿಗಾಗಿ ಕಛೇರಿಯನ್ನೂ ತೆರದು ನೋಂದಣಿಗೆ ಸಿಬ್ಬಂದಿಯನ್ನೂ ಸಹ ನೇಮಿಸಿತ್ತು. ಆದರೆ ಡಿ.28 ರಿಂದ ನೋಂದಣಿ ಪ್ರಕ್ರಿಯೆ ಆರಂಭಿ ಸುವುದಾಗಿ ಹೇಳಿದ್ದ ಜಿಲ್ಲಾಡಳಿತ ವಾರ ಕಳೆದರೂ ಹುಳಿಯಾರಿನಲ್ಲಿ ಮಾತ್ರ ಇನ್ನೂ ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ.

ಜಿಲ್ಲಾಡಳಿತ ಮಾತು ನಂಬಿ ನೋಂದಣಿಗಾಗಿ ಕಳೆದ ವಾರ ಆಗಮಿಸಿದ್ದ ರೈತರಿಗೆ ಸೋಮವಾರದಿಂದ ನೋಂದಣಿ ಮಾಡಿ ಕೊಳ್ಳುವುದಾಗಿ ಹೇಳಿದ್ದ ಇಲ್ಲಿನ ಸಿಬ್ಬಂದಿ ಏಕಾಏಕಿ ಕಳೆದ ಶುಕ್ರವಾರ ಕಚೇರಿಗೆ ಬೀಗ ಜಡಿದು ಹೋದವರು ಇತ್ತ ತಿರುಗಿಯೂ ಸಹ ನೋಡಿಲ್ಲ. ಪರಿಣಾಮ ಹೆಸರು ನೊಂದಾಯಿಸಲು ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ್ತಾಗಿದ್ದು ಎಪಿಎಂಸಿ ಸಿಬ್ಬಂದಿಗಳ ಕಡೆ ಮುಖಮಾಡಿದ್ದಾರೆ.

ನಿತ್ಯ ಹೆಸರು ನೋಂದಾಯಿಸಲು ಆಗಮಿಸುವ ನೂರಕ್ಕೂ ಹೆಚ್ಚು ರೈತರು ಎಪಿಎಂಸಿ ಸಿಬ್ಬಂದಿಗಳನ್ನೇ ಹೆಸರು ನೋಂದಾಯಿಸಿ ಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಂದ ನಿತ್ಯವೂ ಬಂದೋಗುವುದು ಕಷ್ಟವಾಗು ತ್ತಿದ್ದು ತಂದಿರುವ ದಾಖಲಾತಿಗಳನ್ನು ಪಡೆದು ಹೆಸರು ನೋಂದಾಯಿಸಿ ಅಥವಾ ಟೋಕನ್ ಆದರೂ ಕೊಡಿ ಎಂದು ಪೀಡಿಸು ತ್ತಿದ್ದಾರೆ. ರೈತರ ಕಿರಿಕಿರಿ ತಾಳಲಾರದೆ ಪ್ರವೇಶ ದ್ವಾರದಲ್ಲಿ ರಾಗಿ ಖರೀಧಿ ಕೇಂದ್ರದವರ ಪೋನ್ ನಂಬರ್ ಅಂಟಿಸಿ ಪೋನ್ ಮಾಡಿ ಮಾಹಿತಿ ಪಡೆಯಿರಿ ಎನ್ನುತ್ತಿದ್ದಾರೆ.

ಒಟ್ಟಾರೆ ನಿತ್ಯ ಎಪಿಎಂಸಿಗೆ ಹೆಸರು ನೋಂದಣಿಗೆ ಬರುವ ರೈತರಿಗೆ ನೋಂದಣಿ ಪ್ರಕ್ರಿಯೆ ಆರಂಭದ ಸ್ಪಷ್ಠ ಮಾಹಿತಿ ತಿಳಿಯದೆ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ರೈತರು ನಿತ್ಯ ಎಪಿಎಂಸಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಿಖರವಾಗಿ ಎಂದಿನಿAದ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ. ಎಂದಿನಿಂದ ಖರೀಧಿ ಪ್ರಕ್ರಿಯೆ ಆರಂಭವಾಗುತ್ತದೆ ಎನ್ನುವ ಮಾಹಿತಿ ನೀಡಿ ರೈತರು ಅಲೆಯುವುದನ್ನು ತಪ್ಪಿಸಬೇಕಿದೆ.

ಈ ಹಿಂದೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಖರೀದಿ ಗುತ್ತಿಗೆ ಪಡೆದಿತ್ತು. ಈಗ ಆಹಾರ ನಿಗಮದವರಿಗೆ ಬದಲಾಗಿ ರುವುದರಿಂದ ನೋಂದಣಿ ಪ್ರಕ್ರಿಯೆ ಆರಂಭಕ್ಕೆ ವಿಜ್ಞವಾಗಿದೆ. ರೈತರ ಹೆಸರು ನೋಂದಣಿಯ ಜತೆಗೆ ಖರೀದಿಗೆ ಅಗತ್ಯವಾದ ಸಿಬ್ಬಂದಿ ಸೇರಿದಂತೆ ಪರಿಕರಗಳ ಜೋಡಣೆ ತಡವಾಗುತ್ತಿದೆ. ಬಹುಶಃ ಸಂಕ್ರಾಂತಿಯ ಆಸುಪಾಸಿನಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಬಹುದು. ಅಲ್ಲಿಯವರೆವಿಗೆ ರೈತರು ಅನಗತ್ಯವಾಗಿ ಎಪಿಎಂಸಿಗೆ ಬಂದೋಗುವುದು ಬೇಡ.
ಶಿವಶಂಕರ್, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ತುಮಕೂರು

ರಾಗಿ ಕೊಯ್ಲು ಆರಂಭವಾದ ತಕ್ಷಣ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಡಿಮೆ ಬೆಲೆಗೆ ರೈತರು ವರ್ತಕರಿಗೆ ರಾಗಿ ಮಾರಿದ ನಂತರದಲ್ಲಿ ವರ್ತಕರ ಹಿತಕ್ಕಾಗಿ ಖರೀದಿ ಕೇಂದ್ರ ತೆರೆಯುತ್ತಾರೆ. ಹಾಗಾಗಿಯೇ ರಾಗಿ ಖರೀದಿ ಮಾಡುವುದಿರಲಿ ಹೆಸರು ನೋಂದಾಯಿಸಿಕೊಳ್ಳಲು ಮೀನಾಮೇಷ ನೋಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ರೈತರ ಬಗ್ಗೆ ಕನಿಷ್ಟ ಕಾಳಜಿಯಿದ್ದರೆ ತಕ್ಷಣ ರಾಗಿ ಖರೀದಿಯನ್ನೇ ಆರಂಭಿಸಬೇಕು.
ಹೊಸಹಳ್ಳಿ ಚಂದ್ರಣ್ಣ, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ