ಮಾಧ್ಯಮಗಳ ಧನಾತ್ಮಕ ಚಿಂತನೆ ಕುರಿತು ಚಿಂತನಗೋಷ್ಠಿ
ಭಾಲ್ಕಿ: ಅಕ್ಷರಕ್ಕೆ ಮಾಂತ್ರಿಕ ಶಕ್ತಿ ಇದೆ. ಒಮ್ಮೆ ಬರೆದರೆ ಅದು ನಾಶವಾಗದು. ಹೀಗಾಗಿ ಪತ್ರಕರ್ತರು ಯಾವುದೇ ಒಂದು ವಿಷಯಕ್ಕೆ ಪತ್ರಿಕೆಯಲ್ಲಿ ಅಕ್ಷರ ರೂಪ ನೀಡುವಾಗ ಎಚ್ಚರಿಕೆ ವಹಿಸಬೇಕು. ನಕಾರಾತ್ಮಕ ಅಂಶಕ್ಕೆ ಹೆಚ್ಚು ಆದ್ಯತೆ ನೀಡುವುದು ಬೇಡ. ಸಕಾರಾತ್ಮಕ ಚಿಂತನೆಗಳೇ ಸಮಾಜದಲ್ಲಿ ದೊಡ್ಡ ಪರಿವರ್ತನೆ ತರಲು ಸಾಧ್ಯ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹೇಳಿದರು.
ಭಾಲ್ಕಿ ಪಟ್ಟಣದ ಹೊರವಲಯದ ಆನಂದವಾಡಿ ರಸ್ತೆಯ ಮಹಾಮನೆ ಪರಿಸರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಪ್ರವಚನ ನಿಮಿತ್ತ ಸೋಮವಾರ ಹಮ್ಮಿ ಕೊಂಡಿದ್ದ ಚಿಂತನ ಗೋಷ್ಠಿಯಲ್ಲಿ ಮಾಧ್ಯಮಗಳ ಧನಾತ್ಮಕ ಚಿಂತನೆ ಕುರಿತು ವಿಷಯ ಮಂಡಿಸಿದ ಅವರು, ಸಮಾಜ ಹಾಗೂ ಮಾಧ್ಯಮ (ಮೀಡಿಯಾ) ಬೇರೆ ಅಲ್ಲ. ಪತ್ರಿಕೆಗಳು ಒಳ್ಳೆಯ ವಿಚಾರ ಗಳನ್ನು ಹರವುತ್ತ ಉತ್ತಮ ಸಮಾಜ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡುವ ಶಕ್ತಿ ಹೊಂದಿವೆ.
ಹೀಗಾಗಿ ಸಕಾರಾತ್ಮಕತೆ ನಮ್ಮೆಲ್ಲರ ಇಂದಿನ ಆದ್ಯತೆಯಾಗಬೇಕು. ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬ ವಿಷಯ ಹೇಗಿದೆ ಯೋ ಹಾಗೇ ನೀಡೋಣ. ಆದರೆ ನಕಾರಾತ್ಮಕ ಅಂಶಕ್ಕೆ ಯಾವತ್ತೂ ಮೆರೆಸಬಾರದು. ಪತ್ರಕರ್ತರಲ್ಲಿ ಸಕಾರಾತ್ಮಕ ಸುದ್ದಿಯ ಪ್ರಜ್ಞೆ ಯಿದ್ದರೆ ಗುಣಾತ್ಮಕ ಬದಲಾವಣೆಗೆ ನಾಂದಿ ಹಾಡಬಹುದು ಎಂದರು.
ಓದುಗರಿಗೆ, ಜನರಿಗೆ ಒಳ್ಳೆಯ ವಿಚಾರ ತಿಳಿಯುವ ಹಸಿವಿದೆ. ಪತ್ರಿಕೆಗಳ ಬಗ್ಗೆ ಪವಿತ್ರ ಭಾವನೆಯಿದೆ. ಅನೇಕರು ಭಾವನಾತ್ಮಕ ಸಂಬಂಧವೂ ಹೊಂದಿದ್ದಾರೆ. ನಾವು ಇದನ್ನೆಲ್ಲ ಅರ್ಥ ಮಾಡಿಕೊಂಡು ಸುದ್ದಿ ಕೊಡಬೇಕು. ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿ,
ವರದಿಗಳೇ ಹೆಚ್ಚು ಬರುತ್ತಿದ್ದರೆ ಅಥವಾ ಮುಖ ಪುಟದಲ್ಲಿ ನಿತ್ಯ ರಾರಾಜಿಸುತ್ತಿದ್ದರೆ ನೆಗೆಟಿವಿಟಿ ಇಲ್ಲಿ ಜಾಸ್ತಿಯೇ ಇದೆ ಎಂಬ ಸಂದೇಶ ರವಾನೆಯಾಗುತ್ತದೆ.
ಇದು ಜನರ ಹಾಗೂ ಪತ್ರಕರ್ತರ ಮನಸ್ಥಿತಿಯ ಮೇಲೂ ಪ್ರಶ್ನೆ ಮೂಡಿಸುತ್ತದೆ. ಹೀಗಾಗಿ ಪಾಸಿಟಿವಿಟಿ ಪತ್ರಿಕೋದ್ಯಮ ಬೇಕು. ಧರ್ಮ, ಸಂಸ್ಕೃತಿ, ಸಂಸ್ಕಾರ ಇತರ ಉತ್ತಮ ಹಾಗೂ ಜನರ ಮನಸ್ಸು ಧನಾತ್ಮಕವಾಗಿ ಬದಲಿಸುವಂತಹ ವಿಚಾರಕ್ಕೆ ಆದ್ಯತೆ ನೀಡಬೇಕು. ಈ ಕಾರ್ಯ ಅಸಾಧ್ಯವೇನಿಲ್ಲ ಎಂದು ಪ್ರತಿಪಾದಿಸಿದರು.
ಪತ್ರಿಕೆ ಸಮಾಜದ ಕನ್ನಡಿ. ಹಾಗೆಯೇ ಪತ್ರಕರ್ತರು ಸಹ ಇದ್ದುದ್ದನ್ನು ನೇರವಾಗಿ ಜನರ ಮುಂದಿಡಬೇಕು. ನಕಾರಾತ್ಮಕ ವಿಷಯ ವಿದ್ದರೆ ಅದೂ ಕೊಡಬೇಕು. ಹಾಗಂತ ಪತ್ರಿಕೆ ಮುಖಪುಟ, ಪ್ರಮುಖ ಜಾಗವೆಲ್ಲ ಇವೇ ಆವರಿಸಕೂಡದು. ಇನ್ನೂ ಎಷ್ಟೇ ಒಳ್ಳೆಯ ಕಾರ‍್ಯಕ್ರಮವಿದ್ದರೂ ಅಂದು ಸಣ್ಣ ತಪ್ಪು ಹುಡುಕುವ ಕೆಲಸ ಮಾಡುವ ಅಗತ್ಯತೆಯೂ ಇಲ್ಲ. ಪ್ರತಿದಿನ ಒಳ್ಳೆಯ ವಿಚಾರ ಕೇಳಿದರೆ ಕೆಟ್ಟದ್ದು ಮಾಡುವ ಪ್ರಶ್ನೆಯೇ ಬರಲ್ಲ. ಪಾಸಿಟಿವ್ ವಿಷಯ ಕೊಡುತ್ತ ಸಾಗಿದರೆ ಜನರು ಕ್ರಮೇಣ ಇದನ್ನೇ ಅಪೇಕ್ಷಿಸಿ ಅಪ್ಪಿಕೊಳ್ಳ ತ್ತಾರೆ, ಒಪ್ಪಿಕೊಳ್ಳುತ್ತಾರೆ ಎಂದು ಅರ್ಥಪೂರ್ಣ ವಿಚಾರ ಮಂಡಿಸಿದರು.
ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಹಿರಿಯ ಚಿಂತಕರಾದ ಶಿವಲಿಂಗ ಕುಂಬಾರ, ಸೋಮನಾಥಪ್ಪ ಅಷ್ಟೂರೆ, ಚನ್ನಬಸವ ಬಳತೆ ಇತರರಿದ್ದರು. ಸ್ಥಳೀಯ ಪತ್ರಕರ್ತರು ಪಾಲ್ಗೊಂಡಿದ್ದರು. ಈ ವೇಳೆ ಭಟ್ ಅವರೊಂದಿಗೆ ಸಂವಾದ ಸಹ ನಡೆಯಿತು. ಸೋಮನಾಥ ಮುದ್ದೆ ಸ್ವಾಗತಿಸಿ, ನಿರೂಪಣೆ ಮಾಡಿದರು.
***
ಪತ್ರಿಕೆಗಿಂತ ಟಿವಿ ಮಾಧ್ಯಮ ಇಂದು ಹೆಚ್ಚು ನೆಗೆಟಿವಿಟಿಯಲ್ಲಿ ತೊಡಗಿದೆ. ಟಿಆರ್‌ಪಿ ಹೆಚ್ಚಳಕ್ಕಾಗಿ ಪ್ರೇಕ್ಷಕರನ್ನು ಹಿಡಿದಿಡಲು
ಏನೇನೋ ಕಸರತ್ತು, ಕರಾಮತ್ತು ನಡೆಸಲಾಗುತ್ತಿದೆ. ಪ್ರೇಕ್ಷಕರಲ್ಲಿ ಭಯ ಹುಟ್ಟಿಸಿ ಟಿವಿ ಮುಂದೆ ಕೂಡಿಸುವಂಥ ಬೆಳವಣಿಗೆ ಸಹ ಕಾಣುತ್ತಿರುವುದು ದುರದೃಷ್ಟಕರ. ಇಂದು ಮಾಧ್ಯಮ ನಡೆಸುವುದು ಖರ್ಚುದಾಯಕ. ಹಾಗಂತ ಜನರ ಮೇಲೆ ಏನೇನೋ ಹೇರುವುದು ಸಹ ಸರಿಯಲ್ಲ. ಈ ಬಗ್ಗೆ ಪತ್ರಿಕೋದ್ಯಮದಲ್ಲಿರುವವರೆಲ್ಲ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು