Wednesday, 11th December 2024

ಶೌಚಾಲಯ ಸಮಸ್ಯೆ: ನಿಲ್ಲದ ಬಹಿರ್ದೆಸೆ

ಸುತ್ತಲಿನ ಕುಟುಂಬಗಳಿಗೆ ತಪ್ಪದ ಅನಾರೋಗ್ಯ

ಮೂಗು ಮುಚ್ಚಿಕೊಂಡೇ ಪಾಠ ಕಲಿಯಬೇಕಾದ ಅನಿವಾರ್ಯ

ವಿಶೇಷ ವರದಿ: ಟಿ.ಚಂದ್ರಶೇಖರ

ರಬಕವಿ-ಬನಹಟ್ಟಿ: ನಗರಸಭೆಯ ವಾರ್ಡ್ ನಂ.12 ರಲ್ಲಿನ ಸರಕಾರದ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ಬಹುತೇಕ ಜನರಿಗೆ ಬಯಲು ಶೌಚವೇ ಗತಿಯಾಗಿದೆ.

ನೀರಿನ ಟಾಕಿ ಹತ್ತಿರ ಬರುವ ಈ ಪ್ರದೇಶದಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಜನಸಂಖ್ಯೆೆಯಿದ್ದು ನಗರಸಭೆ ಅಧೀನದಡಿ ಶೌಚಾಲಯ ನಿರ್ಮಾಣ ವಾಗಿದೆ. ಅಸಮರ್ಪಕ ಕಾಮಗಾರಿ ಹಾಗೂ ಸಮರ್ಪಕವಾದ ಬಳಕೆಯಿಲ್ಲದ ಕಾರಣ ಮುಖ್ಯ ರಸ್ತೆ ಸುತ್ತ ಹಾಗೂ ಪ್ರಮುಖವಾಗಿ ಇದಕ್ಕೆ ಅಂಟಿ ಕೊಂಡೇ ಇರುವ ಅಂಗನವಾಡಿ, ಶಾಲೆಯ ಸುತ್ತಲೂ ಬಹಿರ್ದೆಸೆಗೆ ಹೋಗುವುದು ಸಾಮಾನ್ಯವಾಗಿದೆ.

ಕೆಲವರು ಕತ್ತಲು ಆಗುವವರೆಗೂ ಕಾಯುವ ಸ್ಥಿತಿಗೆ ಪಟ್ಟಣದ ಜನತೆ ಕಾಯುವುದು ವಿಪರ್ಯಾಸ. ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೇಳುತ್ತಾರೆ. ಆದರೆ ಬಡತನ ಹಾಗೂ ಜಾಗೆ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡಿ ಎಂಬ ಕೂಗು ಕೇಳುತ್ತಿಲ್ಲ. ವೃದ್ಧರಿಗೆ, ಅಂಗವಿಕಲರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಜನರು ದೂರಿದ್ದಾರೆ.

ತಪ್ಪದ ಅನಾರೋಗ್ಯ: ಬಯಲು ಶೌಚಾಲಯ ಸುತ್ತಲೂ ಮನೆಗಳಿದ್ದು, ಯಾವುದೇ ಗೋಡೆ ಅಥವಾ ಸುರಕ್ಷಿತವಾದ ವ್ಯವಸ್ಥೆಯಿಲ್ಲದ ಕಾರಣ ಸುತ್ತಲಿನ ಮನೆಗಳಲ್ಲಿ ಕಬ್ಬೆೆದ್ದು ನಾರುತ್ತಿದೆ. ಮನೆಯಲ್ಲಿರುವ ವೃದ್ಧರಿಗೆ ಹಾಗು ಮಕ್ಕಳಿಗೆ ತೀವ್ರ ಅನಾರೋಗ್ಯ ಕಾಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಸೂಕ್ತ ವ್ಯವಸ್ಥೆ ಕಲ್ಪಿಿಸುತ್ತಿಲ್ಲವೆಂಬುದು ಕುಟುಂಬಸ್ಥರ ರೋಧನೆಯಾಗಿದೆ.

ಮೂಗು ಮುಚ್ಚಿಕೊಂಡೇ ಪಾಠ: ಶೌಚಾಲಯಕ್ಕೆ ಅಂಟಿಕೊಂಡೇ ಇರುವ ಅಂಗನವಾಡಿ ಕೇಂದ್ರದಲ್ಲಿ ಪುಟ್ಟ ಪುಟ್ಟ ಮಕ್ಕಳು ದಿನಂಪ್ರತಿ
ಆಗಮಿಸುತ್ತಿವೆ. ದಿನಂಪ್ರತಿ ಕಲಿಕಾ ಕಾರ್ಯವನ್ನು ಮೂಗುಮುಚ್ಚಿಕೊಂಡೇ ಪಾಠ ಕಲಿಯಬೇಕಾದ ಅನಿವಾರ್ಯತೆಯು ದುರಂತವಾಗಿದೆ.

ನಿರ್ಲಕ್ಷ್ಯಕ್ಕೊಳಗಾದ ಸ್ವಚ್ಛ ಭಾರತ ಮಿಷನ್
ಕೇಂದ್ರ ಸರಕಾರದ ಮಹತ್ತರ ಯೋಜನೆ ಯಾಗಿರುವ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಾಮಗಾರಿಗಳು ಸಮರ್ಪಕ ಬಳಕೆಯಾಗದೆ ಕೇವಲ ಕಾಗದದಲ್ಲಿಯೇ ಅಭಿವೃದ್ಧಿ ಹೊಂದುತ್ತಿದೆ. ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸರಕಾರ ಚಾಟಿ ಏಟು ಬೀಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಖ್ಯವಾಗಿ ಶೌಚಾಲಯ ನಿರ್ಮಿಸುವುದೇ ಪ್ರಧಾನ ಯೋಜನೆಯಾಗಿದ್ದರೂ ರಬಕವಿ-ಬನಹಟ್ಟಿ ನಗರಸಭೆ
ಯಾದ್ಯಂತ ಎಲ್ಲಿಯೂ ಯಶಸ್ವಿ ಕಂಡಿಲ್ಲ.

ಒಟ್ಟಾರೆ ಅವಳಿ ನಗರಾದ್ಯಂತ ಶೌಚಾಲಯ ಒಂದು ಸವಾಲಾಗಿ ಕಾಡುತ್ತಿದ್ದು, ತಕ್ಷಣವೇ ಅಧಿಕಾರಿಗಳು ಶೌಚಾಲಯ ನಿರ್ವಹಣೆ ಹಾಗು ಬಯಲು ಮುಕ್ತ ಶೌಚಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಾಯ ಜನತೆಯದ್ದಾಗಿದೆ.