Wednesday, 11th December 2024

Nursing College Fees: ನರ್ಸಿಂಗ್ ಕಾಲೇಜುಗಳಿಂದ ಅಧಿಕ ಶುಲ್ಕ ವಸೂಲಿಗೆ ಸರ್ಕಾರ ಕಡಿವಾಣ; ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ

Nursing College Fees

ಬೆಂಗಳೂರು: ರಾಜ್ಯದಲ್ಲಿ ನರ್ಸಿಂಗ್ ಕಾಲೇಜುಗಳಿಂದ (Nursing College Fees) ಅಧಿಕ ಶುಲ್ಕ ವಸೂಲಾಗುತ್ತಿರುವ ಬಗ್ಗೆ ಹಲವು ದೂರುಗಳು ವರದಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಅಧಿಕ ಶುಲ್ಕ ವಸೂಲಿಯಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ಹೊರೆ ತಪ್ಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ 5 ಜನ ಸದಸ್ಯರ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ, ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಸೂಲು ಮಾಡುತ್ತಿದ್ದರೆ ಸಂಸ್ಥೆಯ ಎಸೆನ್ಶಿಯಲ್ ಸರ್ಟಿಫಿಕೇಟ್ ಹಾಗೂ ಫೀಸಿಬಲಿಟಿ ಸರ್ಟಿಫಿಕೇಟ್ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.

ಶೇ. 20 ಹೆಚ್ಚಳದ ಮನವಿ ತಿರಸ್ಕಾರ

ರಾಜ್ಯದಲ್ಲಿ 611 ನರ್ಸಿಂಗ್ ಕಾಲೇಜುಗಳಿದ್ದು 35,000 ಸೀಟ್ ಲಭ್ಯವಿವೆ. ಪ್ರಸ್ತುತ ಸರ್ಕಾರಿ ಕೋಟಾದಲ್ಲಿ 10 ಸಾವಿರ, ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಒಂದು ಲಕ್ಷ ಮತ್ತು ನಾನ್-ಕರ್ನಾಟಕ ವಿದ್ಯಾರ್ಥಿಗಳಿಗೆ 1.40 ಲಕ್ಷ ಶುಲ್ಕ ನಿಗದಿಪಡಿಸಲಾಗಿದೆ. ಇತ್ತೀಚೆಗೆ ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಈ ಶುಲ್ಕ ಶೇ. 20 ರಷ್ಟು ಹೆಚ್ಚಿಸುವಂತೆ ಮಾಡಿದ ಮನವಿಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ತಿರಸ್ಕರಿಸಿದ್ದಾರೆ.

ಒಂದು ತಿಂಗಳೊಳಗೆ ವರದಿ

ಬಿಎಸ್ಸಿ, ನರ್ಸಿಂಗ್ ಹಾಗೂ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (ಜಿಎನ್‌ಎಂ) ಡಿಪ್ಲೊಮಾ ಪ್ರೋಗ್ರಾಂಗಳ ಶುಲ್ಕದ ಬಗ್ಗೆಯೂ ನಿಗಾವಹಿಸಲಿರುವ ಸಮಿತಿ, ಜಿಲ್ಲಾಧಿಕಾರಿಗಳ ಸಭೆ ಆಯೋಜಿಸಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಜಿಎನ್‌ಎಂ ನರ್ಸಿಂಗ್ ಕಾಲೇಜುಗಳಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಒಂದು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬಿಎಸ್ಸಿ ನರ್ಸಿಂಗ್ ಕಾಲೇಜುಗಳಿಗೆ ಸಂಬಂಧಿಸಿದಂತೆ ಒಂದು ಪರಿಶೀಲನಾ ತಂಡ ರಚಿಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಬಿ.ಎಲ್ ಸುಜಾತಾಗೆ ಸೂಚಿಸಿದ್ದಾರೆ.

ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸೂಚಿಸಿದ್ದಾರೆ.

ಕೆಎಎಸ್‌ ಮರು ಪರೀಕ್ಷೆಗೆ ಸಿಎಂ ಆದೇಶ; 2 ತಿಂಗಳೊಳಗೆ ನಡೆಸಲು ಕೆಪಿಎಸ್‌ಸಿಗೆ ಸೂಚನೆ

ಬೆಂಗಳೂರು: ಕೆಎಎಸ್‌ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಕೆಎಎಸ್‌ ಪೂರ್ವಭಾವಿ ಪರೀಕ್ಷೆಯಲ್ಲಿ (KAS Exam) ಭಾಷಾಂತರ ಸೇರಿ ಹಲವು ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದರು. ಹೀಗಾಗಿ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳ ಒಳಗೆ ಮರುಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

https://x.com/CMofKarnataka/status/1830507065242182002

ಆ.27ರಂದು ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಂದೂಡಬೇಕು ಎಂಬ ಅಭ್ಯರ್ಥಿಗಳ ವಿರೋಧದ ನಡುವೆ ಪರೀಕ್ಷೆ ನಡೆಸಲಾಗಿತ್ತು. ಆದರೂ, ಹಲವು ಬಾರಿ ಪರೀಕ್ಷೆ ಮುಂದೂಡಿಕೆಯಾಗಿದ್ದರಿಂದ ಕೆಪಿಎಸ್‌ಸಿ, ಆ.27ರಂದೇ ಪರೀಕ್ಷೆ ನಡೆಸಿತ್ತು. ಆದರೆ, ಪರೀಕ್ಷೆ ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡ ಭಾಷಾಂತರದಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದರು.

ಇನ್ನು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಕೆಪಿಎಸ್‌ಸಿ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ಹೊರಹಾಕಿತ್ತು. ಪ್ರಶ್ನೆಗಳ ಭಾಷಾಂತರ ಕಬ್ಬಿಣದ ಕಡಲೆಯಾಗಿದ್ದು, ಉದ್ದುದ್ದ ಪ್ರಶ್ನೆಗಳನ್ನು ಕೇಳಿದ್ದು, ಪ್ರಶ್ನೆಗಳ ಅಸ್ಪಷ್ಟತೆ ಕೆಪಿಎಸ್ಸಿ ಪರೀಕ್ಷೆಯ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಮತ್ತು ಆಡಳಿತ ಭಾಷೆಯಾಗಿದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾದ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಂಡು ಅಭ್ಯರ್ಥಿಗಳು ಉತ್ತರ ಬರೆಯುವಂತೆ ಸೂಚಿಸಿರುವುದನ್ನು ಪ್ರಾಧಿಕಾರ ಖಂಡಿಸುತ್ತದೆ. ಆಡಳಿತ ಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ನೀಡದೆ ಮತ್ತು ಅಭ್ಯರ್ಥಿಗಳಿಗೆ ಅನಾನುಕೂಲತೆಯನ್ನು ಉಂಟು ಮಾಡಿರುವ ಕೆಪಿಎಸ್ಸಿ ನಡೆಯನ್ನು ಪ್ರಾಧಿಕಾರ ವಿರೋಧಿಸುತ್ತದೆ. ಪರೀಕ್ಷೆಯಲ್ಲಿ ಉಂಟಾದ ಪ್ರಮಾದ ಹಾಗೂ ಇದಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನದೊಳಗಾಗಿ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕೆಪಿಎಸ್‌ಸಿಗೆ ಸೂಚನೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆಎಎಸ್‌ ಅಭ್ಯರ್ಥಿಗಳ ಮನವಿ ಆಲಿಸಿದ್ದ ಸಿಎಂ ಅವರು, ಮರು ಪರೀಕ್ಷೆ ನಡೆಸಲು ಸೂಚನೆ ನೀಡಿದ್ದಾರೆ.