Saturday, 23rd November 2024

Pakistani Arrest: ಬೆಂಗಳೂರಿನಲ್ಲಿದ್ದ ಪಾಕಿಸ್ತಾನಿ ಪ್ರಜೆ ಸೇರಿ ನಾಲ್ವರು ವಿದೇಶೀಯರ ಬಂಧನ

pakistani arrest

ಆನೇಕಲ್: ಬೆಂಗಳೂರಿನ ಹೊರವಲಯದಲ್ಲಿ ತಲೆ ಮರೆಸಿಕೊಂಡು ಅಕ್ರಮವಾಗಿ ವಾಸವಾಗಿದ್ದ ಒಬ್ಬ ಪಾಕಿಸ್ತಾನಿ ಸೇರಿದಂತೆ (Pakistani Arrest) ನಾಲ್ವರು ವಿದೇಶಿ ಪ್ರಜೆಗಳನ್ನು ಜಿಗಣಿ ಪೊಲೀಸರು (Bangalore police, Bengaluru news)) ಬಂಧಿಸಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದು ನೆಲೆಸಿದ್ದ ಶಂಕಿತ ಉಲ್ಫಾ ಉಗ್ರನ ಬಂಧನದ ಬೆನ್ನಲ್ಲೇ ಇದೀಗ ಮತ್ತೆ ಒಬ್ಬನನ್ನು ಬಂಧಿಸಲಾಗಿದೆ. ಈತ ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ವಾಸವಿದ್ದ. ಈತನ ಪತ್ನಿ ಬಾಂಗ್ಲಾದೇಶದವಳಾಗಿದ್ದು, ಆಕೆಯೂ ಅಕ್ರಮ ನಿವಾಸಿ ಎಂದು ಗೊತ್ತಾಗಿದೆ.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂಲದ ಪ್ರಜೆಗಳು ಅಕ್ರಮವಾಗಿ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಜಿಗಣಿ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳನ್ನು ಬಂಧಿಸಲಾಯಿತು.

ಬಂಧಿತ ಪಾಕ್ ಪ್ರಜೆ ಪಾಕಿಸ್ತಾನ ತೊರೆದು ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿ ಢಾಕಾದಲ್ಲಿ ವಾಸವಾಗಿದ್ದ. ಈ ವೇಳೆ ಢಾಕಾದಲ್ಲಿ ಪರಿಚಯವಾದ ಬಾಂಗ್ಲಾ ಯುವತಿಯನ್ನು ಮದುವೆ ಮಾಡಿಕೊಂಡು 2014ರಲ್ಲಿ ಪತ್ನಿ ಜೊತೆ ಬಾಂಗ್ಲಾದಿಂದಲೂ ಎಸ್ಕೇಪ್ ಆಗಿ ದೆಹಲಿಗೆ ಬಂದಿದ್ದ.

ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿ ಸ್ಥಳೀಯರ ಪರಿಚಯ ಮಾಡಿಕೊಂಡು ಆಧಾರ್‌ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ದಾಖಲೆಗಳನ್ನು ಸೃಷ್ಟಿಕೊಂಡಿದ್ದಾನೆ. 2018ರವರೆಗೆ ದೆಹಲಿಯಲ್ಲಿ ನೆಲೆಸಿ ಬಳಿಕ ಪತ್ನಿ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಬೆಂಗಳೂರಿನ ಜಿಗಣಿಯಲ್ಲಿ ಇಬ್ಬರು ಮಕ್ಕಳೊಂದಿಗೆ 2018 ರಿಂದಲೇ ನೆಲೆಸಿದ್ದ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸುಳಿವು ಸಿಕ್ಕಿದ್ದು, ಗುಪ್ತಚರ ಅಧಿಕಾರಿಗಳು ಆ ಬಗ್ಗೆ ಮಾಹಿತಿ ಕಲೆಹಾಕಿ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನೆಲೆಸಿದ್ದ ಉಲ್ಫಾ ಸಂಘಟನೆಗೆ ಸೇರಿರುವ ಶಂಕಿತ ಉಗ್ರ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದರು. ಆಗಸ್ಟ್​ನಲ್ಲಿ ಗುವಾಹಟಿಯಲ್ಲಿ ಐದು IED ಬಾಂಬ್ ಇಟ್ಟು, ಕುಟುಂಬ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದ. ಜಿಗಣಿಯ ಖಾಸಗಿ ಕಂಪನಿಯೊಂದರಲ್ಲಿ ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಗಿರೀಶ್ ಬೋರಾನ ಬಗ್ಗೆ ಮಾಹಿತಿ ಕಲೆಹಾಕಿದ್ದ ಅಸ್ಸಾಂ ಎನ್ಐಎ ತಂಡ ಶಂಕಿತ ಉಗ್ರನನ್ನು ಬಂಧಿಸಿತ್ತು.

ಇದನ್ನೂ ಓದಿ: Crime News: ಕಾರಿನೊಳಗೆ ಕೊಳೆತ ಶವ ಪತ್ತೆ, ಕೊಲೆ ಶಂಕೆ