Wednesday, 11th December 2024

Panchamasali 2A Reservation: ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಡಿ; ಸಿಎಂಗೆ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು (Panchamasali 2A Reservation) ಹಿಂದುಳಿದ ಪ್ರವರ್ಗ-2ಎ ಪಟ್ಟಿಗೆ ಸೇರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಒಬಿಸಿ 2ಎ ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಲಿಂಗಾಯತ ಸಮುದಾಯ ಹೋರಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಸಲ್ಲಿಸಿದೆ. ಪಂಚಮಸಾಲಿ ಲಿಂಗಾಯತ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರಿದ ಸಮುದಾಯವಾಗಿದೆ. ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗದ ವರದಿ, ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿ ವರದಿ ಸೇರಿ ಎಲ್ಲಾ ವರದಿಗಳಲ್ಲಿ ಪಂಚಮಸಾಲಿ ಸಮುದಾಯವು ಮುಂದುವರಿದ ಸಮಾಜವೆಂದು ವರದಿ ಮಾಡಲಾಗಿದೆ.

ಈ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಾಲಿತಿಯಲ್ಲಿ ಸೇರಿಸಿದಲ್ಲಿ ಹಾಲಿ ಇರುವ ಪ್ರವರ್ಗ-2ಎರಲ್ಲಿ ಬರುವ ತೀರಾ ಹಿಂದುಳಿದ ಜಾತಿಗಳಾದ ಅಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರೆ ಎಲ್ಲಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವುದಿಲ್ಲ. ಪಂಚಮಸಾಲಿ ಸಮುದಾಯವೇ ಎಲ್ಲಾ ಉದ್ಯೋಗ, ಶಿಕ್ಷಣ, ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿಗೆ ಸೇರಿಸಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಕೋರುತ್ತದೆ.

ರಾಜ್ಯದಲ್ಲಿನ ಪಂಚಮಸಾಲಿ ಲಿಂಗಾಯತರು ಪ್ರವರ್ಗ-3ಬಿ ಮೀಸಲಾತಿಯನ್ನು ಪಡೆಯುತ್ತಿದ್ದು, ಇತ್ತೀಚೆಗೆ ಈ ಸಮುದಾಯವನ್ನು ಪ್ರವರ್ಗ-3ಬಿ ಯಿಂದ ಪ್ರವರ್ಗ-2ಎಗೆ ಬದಲಾಯಿಸಿ ಶೇಕಡಾ 15ರ ಮೀಸಲಾತಿಯಡಿಯಲ್ಲಿ ಪ್ರವರ್ಗ-2ಎ ನಲ್ಲಿ ಮೀಸಲಾತಿ ಕೊಡಲು ಒತ್ತಾಯಿಸಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದು, ಧರಣಿಗಳನ್ನು ಮಾಡಿ ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದಾರೆ. ಒಂದು ವೇಳೆ ಪಂಚಮಸಾಲಿ ಲಿಂಗಾಯತ ಸಮುದಾಯವು ಪ್ರವರ್ಗ-2ಎ ಮೀಸಲಾತಿಗೆ ಸೇರಿಸಿದ್ದೇ ಆದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಾಗೂ ಹೋರಾಟ ಮಾಡಲಿದೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ | SM Krishna Death: ಬೆಂಗಳೂರನ್ನು ಸಿಂಗಾಪುರ ಮಾಡಬೇಕೆಂಬ ಎಸ್.ಎಂ.ಕೃಷ್ಣ ಕನಸು ನನಸಾಗಲೇ ಇಲ್ಲ; ಸಿದ್ದರಾಮಯ್ಯ ಬೇಸರ